ನಟ ಕಮಲ್​ ಸೆಲ್ಫ್​ ಕ್ವಾರಂಟೈನ್​ನಲ್ಲಿದ್ದಾರಾ?- ಆಳ್ವಾರ್​ಪೇಟೆ ಕಚೇರಿ ಗೇಟಿಗೇಕೆ ಅಂಟಿತು ಕ್ವಾರಂಟೈನ್​ ನೋಟಿಸ್​!

kamal-self quarantine notice 28 MAR 20
Published on

ಚನ್ನೈ: ಮಕ್ಕಳ್ ನೀದಿ ಮೈಯಂ ಪಕ್ಷದ ಮುಖ್ಯಸ್ಥ ನಟ ಕಮಲ್ ಹಾಸನ್ ತಮ್ಮ ಮನೆಯನ್ನೇ ಕ್ವಾರಂಟೈನ್ ಚಿಕಿತ್ಸೆಗೆ ಒದಗಿಸಲು ಸಿದ್ಧರಾಗಿ ಸುದ್ದಿಯಾಗಿದ್ದರು. ಇದೀಗ ಸ್ವತಃ ಸೆಲ್ಫ್​ ಕ್ವಾರಂಟೈನ್​ನಲ್ಲಿದ್ದಾರೆ ಎಂಬ ಸುದ್ದಿ ಶನಿವಾರ ಬೆಳಗ್ಗೆಯಿಂದ ಹರಿದಾಡ್ತಾ ಇದೆ. ಅದಕ್ಕೆ ಕಾರಣವಾಗಿದ್ದು ಕಮಲ್ ಅವರ ಆಳ್ವಾರ್ ಪೇಟೆ ಕಚೇರಿಯ ಗೇಟಿನ ಮೇಲೆ ಅಂಟಿದ್ದ ನೋಟಿಸ್​!

ಗ್ರೇಟರ್​ ಚೆನ್ನೈ ಕಾರ್ಪೊರೇಷನ್​ ಸಿಬ್ಬಂದಿ ಈ ನೋಟಿಸ್ ಅಂಟಿಸಿದ್ದರು. ಇದರ ಪ್ರಕಾರ ಮಾರ್ಚ್ 10ರಿಂದ ಏಪ್ರಿಲ್ ನಾಲ್ಕರ ತನಕ ಕ್ವಾರಂಟೈನ್​ನಲ್ಲಿ ಇರುವುದಾಗಿ ಮಾಹಿತಿ ಲಭ್ಯವಾಗಿದೆ. ಈ ಸುದ್ದಿ ಕೆಲವೇ ನಿಮಿಷಗಳಲ್ಲಿ ಎಲ್ಲೆಡೆ ವೈರಲ್ ಆಗಿದೆ. ಅಲ್ಲದೆ, ಕಮಲ್ ಹಾಸನ್ ಅವರು ಸೆಲ್ಫ್​ ಕ್ವಾರಂಟೈನ್​ನಲ್ಲಿ ಇದ್ದಾರಾ ಅಥವಾ ಇಲ್ಲವೇ ಎಂಬ ಕುರಿತ ಚರ್ಚೆಗಳೂ ಆರಂಭವಾಗಿದೆ.

ಇಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಈ ವಿಷಯ ಸುದ್ದಿಯಾಗುತ್ತಿದ್ದಂತೆ ಎಚ್ಚೆತ್ತ ಕಾರ್ಪೊರೇಷನ್​, ಕೂಡಲೇ ಆ ನೋಟಿಸ್​ ತೆಗೆದು ಹಾಕುವಂತೆ ಸಿಬ್ಬಂದಿಗೆ ಸೂಚಿಸಿದೆ. ಆ ಕ್ಷಣವೇ ಸ್ಥಳಕ್ಕೆ ತಲುಪಿದ ಸಿಬ್ಬಂದಿ ಆ ನೋಟಿಸನ್ನು ತೆಗೆದು ಹಾಕಿದ್ದಾರೆ.

ಈ ವಿಚಾರವಾಗಿ ಪಕ್ಷದ ವಕ್ತಾರ ಮುರಳಿ ಅಬ್ಬಾಸ್ ಹೇಳಿಕೆ ನೀಡಿದ್ದು, ನಮಗೆ ಆ ಪೋಸ್ಟರ್ ನೋಡಿ ಶಾಕ್ ಆಗಿತ್ತು. ಕಮಲ್​ ಯಾವುದೇ ವಿದೇಶ ಸಂಚಾರ ಅಥವಾ ಟ್ರಾವೆಲ್​ ಹಿಸ್ಟರಿ ಹೊಂದಿಲ್ಲ. ಇಂಡಿಯನ್ 2 ಸಿನಿಮಾ ಸೆಟ್​ನಲ್ಲಾದ ಅವಘಡದ ಬಳಿಕ ಅಲ್ಲಿ ಗಾಯಗೊಂಡವರನ್ನು ಕಾಣಲು ಹೋಗಿದ್ದು, ಪೊಲೀಸ್ ವಿಚಾರಣೆಗೆ ಹಾಜರಾಗಿದ್ದು ಬಿಟ್ಟರೆ ಬೇರೆಲ್ಲೂ ಹೋಗಿಲ್ಲ ಎಂದು ವಿವರಿಸಿದ್ದಾರೆ.

ಎಲ್ಲದಕ್ಕೂ ಮಿಗಿಲಾಗಿ ಆಳ್ವಾರ್​ಪೇಟೆಯಲ್ಲಿರುವುದು ಕಮಲ್ ಅವರ ನಿವಾಸವಲ್ಲ, ಅದು ಪಕ್ಷದ ಕಚೇರಿ. ಕಾರ್ಪೊರೇಷನ್ ಕಚೇರಿಗೆ ತಪ್ಪು ಮಾಹಿತಿ ನೀಡಿದವರಾರರು ಎಂಬ ಸಂದೇಹ ಕಾಡುತ್ತಿದೆ. ಪರಿಶೀಲನೆ ನಡೆಸದೇ ಏಕಾಕಿಯಾಗಿ ಪೋಸ್ಟರ್ ಅಂಟಿಸಿದ ಕಾರ್ಪೊರೇಷನ್ ಕ್ರಮವೂ ಸರಿಯಲ್ಲ ಎಂದು ಅವರು ಹೇಳಿದರು.  (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net