ಚಿತ್ರಮಂದಿರಗಳತ್ತ ಜನರನ್ನು ಸೆಳೆಯಲು ಹೀಗೆ ಮಾಡಬಹುದು ಎಂದದ್ದಕ್ಕೆ ನೆಟ್ಟಿಗರ ಆಕ್ರೋಶ!

nag ashwin
Published on

ಹೈದರಾಬಾದ್​: ಕರೊನೋತ್ತರದಲ್ಲಿ ಜನರನ್ನು ಚಿತ್ರಮಂದಿರಗಳತ್ತ ಸೆಳೆಯಲು ಚಿತ್ರಮಂದಿರಗಳಲ್ಲಿ ಮದ್ಯ ಸರಬರಾಜು ಮಾಡಬೇಕು ಎಂದು ತೆಲುಗು ಚಿತ್ರರಂಗದ ಉದಯೋನ್ಮುಖ ನಿರ್ದೇಶಕ ನಾಗ್​ ಅಶ್ವಿನ್​ ಸಲಹೆ ನೀಡಿದ್ದಾರೆ. ಆದರೆ, ಇವರ ಈ ಸಲಹೆ ನೆಟ್ಟಿಗರಿಗೆ ಇಷ್ಟವಾಗಿಲ್ಲ. ಹಾಗಾಗಿ ಅವರೆಲ್ಲರೂ ಸಾಮಾಜಿಕ ಜಾಲತಾಣದಲ್ಲಿ ನಾಗ್​ ಅಶ್ವಿನ್​ ವಿರುದ್ಧ ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣ ಟ್ವಿಟರ್​ನಲ್ಲಿ ಭಾನುವಾರ ಅವರು ಸಂದೇಶವೊಂದನ್ನು ಹಾಕಿದ್ದು, ಹಲವು ರಾಷ್ಟ್ರಗಳಲ್ಲಿ ಚಿತ್ರಮಂದಿರಗಳಲ್ಲಿ ಮದ್ಯ ಸರಬರಾಜು ಮಾಡಲಾಗುತ್ತದೆ. ಅದರಂತೆ, ಕರೊನೋತ್ತರದಲ್ಲಿ ಜನರನ್ನು ಚಿತ್ರಮಂದಿರಗಳತ್ತ ಸೆಳೆಯಲು ನಮ್ಮಲ್ಲೂ ಬಿಯರ್​/ಬ್ರೀಜರ್​/ವೈನ್​ ಮತ್ತಿತರ ಮದ್ಯದ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟರೆ ಹೇಗೆ ಎಂದು ಸುರೇಶ್​ ಬಾಬು ಮತ್ತು ರಾಣಾ ಅವರೊಂದಿಗೆ ಚರ್ಚಿಸಿದ್ದೆ ಎಂದು ಹೇಳಿದ್ದರು.

ಈ ರೀತಿ ಮಾಡುವುದರಿಂದ, ಪ್ರೇಕ್ಷಕರ ಕೊರತೆಯಿಂದ ಬಳಲುತ್ತಿರುವ ಚಿತ್ರಮಂದಿರಗಳನ್ನು ಕಾಪಾಡಲು ಅನುಕೂಲವಾಗುತ್ತದೆ ಎಂಬುದು ನನ್ನ ಅಭಿಪ್ರಾಯವಾಗಿತ್ತು. ಈ ಕ್ರಮ ಒಳ್ಳೆಯದೇ ಅಥವಾ ಕೆಟ್ಟದ್ದೇ ಎಂಬುದನ್ನು ಸ್ಪಷ್ಟಪಡಿಸುವಂತೆ ಮನವಿ ಮಾಡಿಕೊಂಡಿದ್ದರು.
ಆದರೆ, ನಾಗ್​ ಅಶ್ವಿನ್​ ಅವರ ಈ ಸಲಹೆ ನೆಟ್ಟಿಗರಿಗೆ ಇಷ್ಟವಾಗಲಿಲ್ಲ. ಹಾಗಾಗಿ ಅವರು, ಜನರು ಕುಟುಂಬ ಸಮೇತರಾಗಿ ಚಿತ್ರಮಂದಿರಗಳಿಗೆ ಬರುತ್ತಾರೆ. ಮಕ್ಕಳು ಕೂಡ ಇರುತ್ತಾರೆ. ಹಾಗಾಗಿ, ಚಿತ್ರಮಂದಿರಗಳಲ್ಲಿ ಮದ್ಯ ಮಾರಾಟ ಮಾಡುವುದು ಸರಿಯಲ್ಲ. ಇದರಿಂದ ಚಿತ್ರಮಂದಿರಗಳಲ್ಲಿ ಅನಗತ್ಯ ಗಲಾಟೆಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ನೆಟ್ಟಿಗರ ಈ ವಾದವನ್ನು ಒಪ್ಪಿಕೊಂಡ ನಾಗ್​ ಅಶ್ವಿನ್​, ತಮ್ಮ ವಾದವನ್ನು ಸಮರ್ಥಿಸಿಕೊಳ್ಳುವ ರೀತಿಯಲ್ಲಿ ಮತ್ತೊಂದು ಸಂದೇಶ ಹಾಕಿ, ಇದನ್ನು ನಾನು ಒಪ್ಪಿಕೊಳ್ಳುತ್ತೇನೆ. ಹೀಗೆ ಮಾಡುವುದರಿಂದ ಕುಟುಂಬ ಸಮೇತರಾಗಿ ಜನರು ಚಿತ್ರಮಂದಿರಗಳಿಗೆ ಬರುವುದು ಕಡಿಮೆಯಾಗಬಹುದು. ಆದರೆ, ಮಲ್ಟಿಪ್ಲೆಕ್ಸ್​ಗಳಲ್ಲಿ ಹೀಗೆ ಮಾಡಿದರೆ ಹೇಗೆ? ಹಾಗೆಂದು ಪ್ರೇಕ್ಷಕರನ್ನು ಸೆಳೆಯಲು ಇರುವುದು ಇದೊಂದೇ ಮಾರ್ಗ ಎಂದೇನಲ್ಲ. ಆದರೂ, ಜನರನ್ನು ಚಿತ್ರಮಂದಿರಗಳತ್ತ ಸೆಳೆಯಲು ಏನು ಮಾಡಬೇಕು ಎಂಬ ಬಗ್ಗೆ ಸಲಹೆ ಕೊಡಿ. ಲಾಕ್​ಡೌನ್​ ತೆರವುಗೊಂಡು ಚಿತ್ರಮಂದಿರಗಳು ಮತ್ತೆ ಕಾರ್ಯಾರಂಭಿಸುತ್ತಿರುವಂತೆ ನೀವೆಲ್ಲರೂ ಚಿತ್ರಮಂದಿರಗಳಿಗೆ ಬರುತ್ತೀರಾ? ಅಥವಾ ಕಾದುನೋಡುವ ತಂತ್ರಕ್ಕೆ ಮೊರೆಹೋಗುತ್ತೀರಾ ಎಂದು ಸ್ಪಷ್ಟಪಡಿಸುವಂತೆ ನೆಟ್ಟಿಗರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಆದರೆ ಇದಕ್ಕೆ ನೆಟ್ಟಿಗರಿಂದ ಯಾವುದೇ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ ಎಂದು ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net