INTERVAL Review; ಗಣೇಶಂದಿರ ಗಲಾಟೆ, ಕಾಮಿಡಿ ಭರಾಟೆ

123
Published on

| ಹರ್ಷವರ್ಧನ್​ ಬ್ಯಾಡನೂರು

ಚಿತ್ರ: ಇಂರ್ಟವಲ್​

ನಿರ್ದೇಶನ: ಭರತವರ್ಷ

ತಾರಾಗಣ: ಶಶಿರಾಜ್​, ಸುಕೇಶ್​, ಪ್ರಜ್ವಲ್​, ಸಹನಾ, ಚೈತ್ರ, ರಂಗನಾಥ್​, ದಾನಮ್​ ಮತ್ತಿತರರು

ಒಂದೇ ಹೆಸರಿನ ಇಬ್ಬರು, ಮೂವರು ಹುಡುಗರು, ಹುಡುಗಿಯರು ಒಂದೇ ಊರು, ತರಗತಿಯಲ್ಲಿ ಸೇರುವುದು ಅಪರೂಪದಲ್ಲೇ ಅಪರೂಪ. ಆದರೆ, ಮೂವರೂ ಒಂದೇ ತಂಡ ಕಟ್ಟಿಕೊಂಡು ಮನೆಗೆ, ಕ್ಲಾಸಿಗೆ, ಊರಿಗೆ ಹಾವಳಿ ಇಡುವುದು ಅತಿ ಅಪರೂಪ. ಮಲೆನಾಡಿದ ಗುಡ್ಡೇಕೊಪ್ಪದಲ್ಲಿ ಅಂತಹ ಒಂದು ಟೀಮ್​ ಇರುತ್ತದೆ. ಒಬ್ಬ ಗಣೇಶ್​ ಎಸ್​ (ಶಶಿ), ಇನ್ನೊಬ್ಬ ಗಣೇಶ್​ ಯು (ಪ್ರಜ್ವಲ್​) ಮತ್ತೊಬ್ಬ ಗಣೇಶ್​ ಟಿ (ಸುಕೇಶ್​). ಶಾಲಾದಿನಗಳಿಂದಲೇ ಮೂವರೂ ತ್ರಿಮೂರ್ತಿಗಳಂತೆ ಒಟ್ಟಾಗಿರುತ್ತಾರೆ. ಬೆಳೆದು ಕಾಲೇಜಿಗೆ ಹೋದಂತೆ, ಅವರ ಗಲಾಟೆಗಳೂ ಜೋರಾಗುತ್ತವೆ.

ಹಾಗೂ ಹೀಗೂ ಇಂಜಿನಿಯರಿಂಗ್​ ಮುಗಿಸಿದರೂ, ಕೆಲಸಕ್ಕೆ ಹೋಗದೇ ಭೂಮಿಗೆ, ಅಪ್ಪನಿಗೆ ಭಾರವಾಗಿರುತ್ತಾರೆ. ಲೋಕಲ್​ ಲೀಡರ್​ಗಳ ಹಿಂದೆ ಓಡಾಡಿಕೊಂಡು, ಅವರಿವರ ತಲೆಸವರಿ ಅಂದಿನ ಖರ್ಚು ಸರಿದೂಗಿಸಿಕೊಂಡು ಹೋಗುವ ಖತರ್ನಾಕ್​ ಕಿಲಾಡಿಗಳಾಗಿರುತ್ತಾರೆ. ಆದರೆ, ಸೋಮಾರಿತನವೇ ಅವರಿಗೆ ಮುಳುವಾಗಿ ಊರು ಬಿಡುವ ದುಸ್ಥಿತಿ ನಿರ್ಮಾಣವಾಗುತ್ತದೆ. ಬೆಂಗಳೂರು ಸೇರುವ ಅವರು, ಇಲ್ಲೂ ಹಲವು ದಿನಗಳ ಕಾಲ ಕೆಲಸಕ್ಕಾಗಿ ಸೈಕಲ್​ ಹೊಡೆಯುತ್ತಾರೆ. ಮುಂದೆ? ಬೆಂಗಳೂರಲ್ಲಿ ಕೆಲಸ ಸಿಕ್ಕಿ, ದುಡಿದು, ಹಣ ಗಳಿಸಿ ಶ್ರೀಮಂತರಾಗಿ ಊರಿಗೆ ಹೋಗುತ್ತಾರಾ? ಬೇರೆ ಸಿನಿಮಾ ಆಗಿದ್ದರೆ, ಹಾಗಾಗುತ್ತಿತ್ತೇನೋ? ಆದರೆ, ಇದು "ಇಂರ್ಟವಲ್​'. ನಾವು ಊಹಿಸುವಂತೇನೂ ನಡೆಯುವುದಿಲ್ಲ. ಹಾಗಾದರೆ ಮುಂದಿನ ಕಥೆ? "ಇಂರ್ಟವಲ್​' ನೋಡಿ...

ಪ್ರಾರಂಭದಿಂದ ಕ್ಲೆಮ್ಯಾಕ್ಸ್​ವರೆಗೂ ಬಹುತೇಕ ನಗಿಸುತ್ತಾ ಸಾಗುವ ಚಿತ್ರ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಭರತವರ್ಷ. ಬೋರ್​ ಆಗದಂತೆ ನೋಡಿಸಿಕೊಂಡು ಹೋಗುವ 142 ನಿಮಿಷಗಳ ಕಥೆಯಿದು. ಎಲ್ಲಿಂದ ಪ್ರಾರಂಭವಾಗಿತ್ತೋ, ಅಲ್ಲೇ ಹೋಗಿ ನಿಂತರೂ, ಅದರ ನಡುವೆ ಮೂವರು ಸೋಮಾರಿ ಹುಡುಗರ ರೋಲರ್​ ಕೋಸ್ಟರ್​ ಜರ್ನಿಯ ಅನಾವರಣ ಮಾಡಿದ್ದಾರೆ. ಕೆಲವೆಡೆ ಡಬಲ್​ ಮೀನಿಂಗ್​ ಡೈಲಾಗ್​ ಇದ್ದರೂ, ಪಕ್ಕಾ ಮಲೆನಾಡ ಪಡ್ಡೆಗಳ ಸಂಭಾಷಣೆಯಾದ ಕಾರಣ ಸುಕೇಶ್​ ಬರವಣಿಗೆ ಇರುಸುಮುರುಸು ಎನಿಸುವುದಿಲ್ಲ. ಶಶಿ, ಪ್ರಜ್ವಲ್​ ಮತ್ತು ಸುಕೇಶ್​ ಚಿತ್ರವನ್ನು ಸರಾಗವಾಗಿ ಹೆಗಲ ಮೇಲೆ ಹೊತ್ತೊಯ್ದಿದ್ದಾರೆ. ಕಾಮಿಡಿ ಟೈಮಿಂಗ್​, ಡೈಲಾಗ್​ ಡೆಲಿವರಿ, ನಟನೆ ಎಲ್ಲೂ ಅವರು ಹೊಸಬರು ಅಂತ ಅನ್ನಿಸುವುದಿಲ್ಲ. ಸಂಗೀತ, ಛಾಯಾಗ್ರಹಣ ಚಿತ್ರಕ್ಕೆ ಪೂರಕವಾಗಿವೆ. ಒಂದೊಳ್ಳೆ ಕಂಟೆಂಟ್​ ಇರುವ ಕಾಮಿಡಿ ಸಿನಿಮಾ ನೋಡಬೇಕು ಅಂತ ಇಚ್ಛಿಸುವವರಿಗೆ "ಇಂರ್ಟವಲ್​' ಈ ವಾರದ ಉತ್ತಮ ಆಯ್ಕೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net