ಅವಳು ಅವಳಿಂದ ಅವಳಿಗಾಗಿ

international women's day
Published on

ಇಂದು ವಿಶ್ವ ಮಹಿಳಾ ದಿನ. ಈ ಸಂದರ್ಭದಲ್ಲಿ ಕನ್ನಡ ಹಿರಿತೆರೆ, ಕಿರುತೆರೆಯ ಜನಪ್ರಿಯ ನಟಿಯರು ತಮ್ಮ ಅನಿಸಿಕೆಗಳನ್ನು ಮತ್ತು ಅಂತಾರಾಷ್ಟ್ರೀಯ ಮಹಿಳಾ ದಿನದ ಅಗತ್ಯದ ಜತೆಗೆ ಇಂಥದ್ದೊಂದು ದಿನ ಎಷ್ಟು ಮಹತ್ವವೆಂಬ ತಮ್ಮ ಅಭಿಪ್ರಾಯಗಳನ್ನು, ನಮಸ್ತೆ ಬೆಂಗಳೂರು ಜತೆಗೆ ಮುಕ್ತವಾಗಿ ಹಂಚಿಕೊಂಡಿದ್ದಾರೆ.

ಮಹಿಳೆ ಪುರುಷನಷ್ಟೇ ಸಮಾನಳು

ಮಹಿಳಾ ದಿನ ಅಂದರೆ, ಮಾ. 8ರ ಒಂದೇ ದಿನಕ್ಕಷ್ಟೇ ಸೀಮಿತ ಎಂಬ ಮಾತಿದೆ. ನಿತ್ಯವೂ ಮಹಿಳೆಯರನ್ನು ಗೌರವಿಸಬೇಕು. ಮೇಲು-ಕೀಳು ಎಂಬ ಭಾವನೆ ಬದಿಗಿಟ್ಟು, ಪುರುಷರಷ್ಟೇ ಮಹಿಳೆಯೂ ಸಮಾನಳು ಎಂಬ ಮನೋಭಾವ ಬೆಳೆಸಿಕೊಳ್ಳಬೇಕು. ಸಮಾಜದಲ್ಲೂ ಪುರುಷನಿಗೆ ಸಿಗುವ ಸಮಾನತೆ ಮಹಿಳೆಗೆ ಸಿಗಬೇಕು. ಆಗ ಮಾತ್ರ ವಿಶ್ವ ಮಹಿಳಾ ದಿನಕ್ಕೂ ಒಂದು ಅರ್ಥ ಬಂದಂತಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಮಹಿಳೆ ಮೇಲಿನ ಕಿರುಕುಳ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇವೆ. ಅವುಗಳಿಗೆ ಕಡಿವಾಣ ಹಾಕುವುದು ಹೇಗೆ? ಬರೀ ಶಿಕ್ಷೆ ವಿಧಿಸಿದರೆ ಸಾಕಾ? ಇವೆಲ್ಲವುಗಳ ತಡೆಗೆ ಸರ್ಕಾರಗಳೂ ಕ್ರಮ ಕೈಗೊಳ್ಳಬೇಕು. ಅಂತಹ ಘಟನೆಗಳು ನಿಲ್ಲಬೇಕು. ಇದೆಲ್ಲದರ ಜತೆಗೆ ಭ್ರೂಣ ಹತ್ಯೆಯೂ ಮಹಾಮಾರಿಯಂತಾಗಿದೆ. ಹೆಣ್ಣು ಮಗು ಎಂದ ತಕ್ಷಣ ಭ್ರೂಣ ತೆಗೆಸುವ ಪದ್ಧತಿ ಕೊನೆಯಾಗಬೇಕು. ಅದು ನಿಂತಾಗಲೇ ಮಹಿಳಾ ದಿನಕ್ಕೆ ಸಾರ್ಥಕತೆ ಸಾಧ್ಯ.

| ಮೇಘಾ ಶೆಟ್ಟಿ ಜೊತೆ ಜೊತೆಯಲಿ ಧಾರಾವಾಹಿ ನಟಿ

ಕಾನೂನು ಮತ್ತಷ್ಟು ಕಠಿಣವಾಗಬೇಕು

ಮಹಿಳೆಯರಿಗೆ ಸಿಗಬೇಕಾದ ಗೌರವ, ಸುರಕ್ಷತೆ ವಿಚಾರದಲ್ಲಿ ಬದಲಾಗಬೇಕಿದೆ. ಹೆಣ್ಣನ್ನು ನೋಡುವ ದೃಷ್ಟಿ ಬದಲಾಗಬೇಕು. ಪುರುಷ ಪ್ರಧಾನ ಸಮಾಜ ಅಂದ ಮಾತ್ರಕ್ಕೆ ಎಲ್ಲವೂ ಅವರಿಂದಲೇ ಸಾಧ್ಯವಿಲ್ಲ. ಅಲ್ಲಿ ಮಹಿಳೆಗೂ ಸಮಾನ ಸ್ಥಾನವಿದೆ. ಆದರೆ ಅತ್ಯಾಚಾರ, ಕಿರುಕುಳದಂತಹ ಹೀನ ಕೃತ್ಯಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಮಹಿಳೆ ಅದೇ ರೀತಿ ದಿನದಿಂದ ದಿನಕ್ಕೆ ಅಸಹಾಯಕಳಾಗುತ್ತಿದ್ದಾಳೆ. ಪ್ರಕರಣ ಕೋರ್ಟ್ ಮೆಟ್ಟಿಲೇರಿದರೂ ಕಾನೂನುಬದ್ಧ ಕ್ರಮಕ್ಕೆ ಮುಂದಾಗುತ್ತಿಲ್ಲ. ಒಂದರ್ಥದಲ್ಲಿ ಈ ರೀತಿಯ ಪ್ರಕರಣಗಳನ್ನು ಇತ್ತೀಚಿನ ದಿನಗಳಲ್ಲಿ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಇಬ್ಬಗೆಯ ನೀತಿ ರಾಜಾರೋಷವಾಗಿದೆ. ಮಹಿಳೆಯೂ ಮತ್ತಷ್ಟು ಬುದ್ಧಿವಂತಳಾಗಬೇಕು. ಸಮಾಜವನ್ನು ಅರಿಯುವುದರ ಜತೆಗೆ ನಮ್ಮ ಕೈಲಾದ ಮಟ್ಟಿಗೆ ತಿದ್ದುವ ಕೆಲಸದಲ್ಲೂ ತೊಡಗಿಸಿಕೊಳ್ಳಬೇಕು. ಆಗ ಬದಲಾವಣೆಯ ಗಾಳಿ ಬೀಸಬಹುದು. ಇತ್ತೀಚೆಗೆ ಮಹಿಳೆಯರ ರಕ್ಷಣೆಗೆ ಅನೇಕ ಆಪ್​ಗಳು ಬಂದಿವೆ. ಅಂಥ ಆಪ್​ಗಳ ಬಳಕೆ ಹೆಚ್ಚಾಗಬೇಕು.

| ಅಮೂಲ್ಯ ಕಮಲಿ ಧಾರಾವಾಹಿ ನಟಿ

ಹೆಣ್ಣು ಈಗ ಗಂಡಿಗಿಂತಲೂ ಮುಂದೆ

ಇಷ್ಟು ದಿನ ಮಹಿಳೆಯರು ಗಂಡಿಗೆ ಸಮಾನವಾಗಿರಬೇಕು ಎಂದು ಹೇಳುತ್ತಿದ್ದರು. ಆದರೆ, ಈಗ ಹೆಣ್ಣು ಗಂಡಿಗೆ ಸಮ ಅಲ್ಲ, ಅವರಿಗಿಂತಲೂ ಮುಂದೆ ಇದ್ದಾಳೆ. ಹಾಗಾಗಿ ನನಗೆ ವೈಯಕ್ತಿಕವಾಗಿ ಬಹಳ ಖುಷಿ ಇದೆ. ಇತ್ತೀಚಿನ ದಿನಗಳಲ್ಲಿ ನಾನು ಆಟೋ ಓಡಿಸುವವರನ್ನು, ಕ್ಯಾಬ್ ಓಡಿಸುವ ಮಹಿಳೆಯರನ್ನು ನೋಡಿದ್ದೆ. ಮೊನ್ನೆ ಒಂದು ವಿಡಿಯೋದಲ್ಲಿ ಟ್ರೇನ್ ಸಹ ಓಡಿಸುತ್ತಿದ್ದರು. ಇದನ್ನು ನೋಡಿ ನಾನು ಬಹಳಷ್ಟು ಸಂಭ್ರಮಿಸಿದ್ದೇನೆ ಜತೆಗೆ ನಮ್ಮ ತಾಯಿಗೂ ಇದರ ಬಗ್ಗೆ ಹೇಳಿದ್ದೇನೆ. ಸಾಮಾನ್ಯವಾಗಿ ಗಂಡಸರು ಮನೆಯ ಹೊರಗಿನ ಕೆಲಸ ಮಾತ್ರ ನಿಭಾಯಿಸುತ್ತಾರೆ. ಆದರೆ ಮಹಿಳೆಯಾದವಳು ಮನೆಯ ಒಳಗೆ ಮಕ್ಕಳು, ಸಂಸಾರ, ಅಡುಗೆ ಹೀಗೆ ಎಲ್ಲವನ್ನು ನಿಭಾಯಿಸುವ ಜತೆಗೆ ಹೊರಗೆ ಅಂದರೆ ಕೆಲಸ ಮಾಡಲು ಹೋಗಿ, ಅಲ್ಲಿಯ ಒತ್ತಡವನ್ನು ಅದ್ಭುತವಾಗಿ ನಿಭಾಯಿಸುತ್ತಿದ್ದಾಳೆ. ಅಂತಹ ಎಲ್ಲ ಹೆಣ್ಣುಮಕ್ಕಳಿಗೂ ನನ್ನ ಕಡೆಯಿಂದ ದೊಡ್ಡ ಸಲಾಂ. ಅವರ ಬಗ್ಗೆ ನನಗೆ ಅತಿ ಹೆಚ್ಚಿನ ಗೌರವವಿದೆ. ಇಂತಹವರನ್ನು ನೋಡಿದಾಗ ನನಗೆ ಪ್ರತಿ ದಿನ ಮಹಿಳಾ ದಿನಾಚರಣೆ ಎನಿಸುತ್ತದೆ. ಈ ವರ್ಷದ ಮಹಿಳಾ ದಿನದ ಸಮಯದಲ್ಲಿ ಇಂತಹ ಸಾಧಕಿಯರ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿ ಎಂದು ನಾನು ಆಶಿಸುತ್ತೇನೆ.

| ಹರಿಪ್ರಿಯಾ ನಟಿ

ಮೆಲುಕು ಹಾಕುವಂತಹ ದಿನ

ಹಿಂದೂ ಸಂಸ್ಕೃತಿಯಲ್ಲಿ ಹೆಣ್ಣನ್ನು ಆದಿ ಶಕ್ತಿ, ಕಾಮಧೇನು, ಭೂಮಿತಾಯಿ ಹೀಗೆ ಯಾವುದರಲ್ಲಿ ಹೆಚ್ಚು ಶಕ್ತಿ ಅಡಗಿದೆಯೋ ಅದಕ್ಕೆಲ್ಲ ಹೋಲಿಸುತ್ತಾರೆ. ಆದರೆ ಅದಕ್ಕೆ ತಕ್ಕ ಗೌರವವನ್ನು ನಿಜ ಜೀವನದಲ್ಲಿ ನೀಡುವುದಿಲ್ಲ ಎನ್ನುವುದೇ ಬೇಸರದ ಸಂಗತಿ. ಪುರುಷರಿಗೆ ಶೋಷಣೆ ಆಗುವುದಿಲ್ಲ ಎಂದು ನಾನು ಹೇಳುವುದಿಲ್ಲ. ಆದರೆ, ಶೋಷಣೆಯ ಪ್ರಮಾಣ ಮಹಿಳೆಗೆ ಹೆಚ್ಚು. ಅಂತಹದ್ದನ್ನೆಲ್ಲ ತಡೆದು ಆಕೆಯನ್ನು ಬಲಪಡಿಸಿದಾಗ ಈ ದಿನಕ್ಕೊಂದು ಅರ್ಥ ಬರುತ್ತದೆ. ಪ್ರತಿ ದಿನ ಮಹಿಳಾ ದಿನಾಚರಣೆಯನ್ನು ನಾನು ಆಚರಿಸುತ್ತೇನೆ. ಮಾರ್ಚ್ 8ರಂದು ಆಕೆಯ ಸಾಧನೆ ಮತ್ತು ಆಕೆಯ ಬಗ್ಗೆ ಮಾತನಾಡಲು ಮತ್ತು ಮೆಲುಕು ಹಾಕಲು ಅವಕಾಶ ಸಿಗುತ್ತದೆ ಎಂಬುದೇ ನನಗೆ ಖುಷಿಯ ವಿಚಾರ. ಎಲ್ಲ ಮಹಿಳೆಯರಿಗೂ ನನ್ನ ಕಡೆಯಿಂದ ಮಹಿಳಾ ದಿನಾಚರಣೆಯ ಶುಭಾಶಯಗಳು. ಕಳೆದ ವರ್ಷಕ್ಕಿಂತಲೂ ಈ ವರ್ಷ ಇನ್ನಷ್ಟು ಸ್ಟ್ರಾಂಗ್ ಆಗಿ. ನಿಮ್ಮ ಶಕ್ತಿಯನ್ನು ಪ್ರಪಂಚಕ್ಕೆ ತೋರಿಸಿ.

| ಅದಿತಿ ಪ್ರಭುದೇವ ನಟಿ

ನಿರ್ದೇಶಕಿಯರು ಹೆಚ್ಚಾಗಬೇಕು

ಮಹಿಳಾ ದಿನಾಚರಣೆಯನ್ನು ನಾನು ಪ್ರತಿ ದಿನ ಆಚರಿಸುತ್ತೇನೆ. ಮಹಿಳೆಯಾಗಿ ಹುಟ್ಟಿದ್ದಕ್ಕೆ ನನಗೆ ಹೆಮ್ಮೆ ಇದೆ. ನಮ್ಮ ಅಜ್ಜಿ ಯಾವಾಗಲೂ ನನಗೆ ಹೇಳುತ್ತಿದ್ದರು. ಒಬ್ಬ ಮಹಿಳೆಗೆ, ಹತ್ತು ಕೈಗೆ ಇರುವ ಶಕ್ತಿ ಇರುತ್ತದೆ. ಮೈ ತುಂಬ ಕಣ್ಣಿರುತ್ತದೆ ಹಾಗಾಗಿ ಆಕೆ ಅತಿ ಹೆಚ್ಚು ಬಲಶಾಲಿ ಎಂದು. ಜತೆಗೆ ಆ ಎಲ್ಲ ಶಕ್ತಿಗಳನ್ನು ಪ್ರತಿಯೊಬ್ಬ ಹೆಣ್ಣು ಸಮರ್ಥವಾಗಿ ಬಳಸಿಕೊಳ್ಳಬೇಕು. ಆಗ ಮಾತ್ರ ಆಕೆಯ ಹುಟ್ಟಿಗೆ ಒಂದು ಬೆಲೆ ಸಿಗುತ್ತದೆ. ಈ ಪ್ರಪಂಚದಲ್ಲಿ ಮಹಿಳೆಗೆ ಮಾತ್ರ ವಿಭಿನ್ನ ಕೆಲಸಗಳನ್ನು ಮಾಡುವ ಶಕ್ತಿ ಇರುವುದು. ಇನ್ನು ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕಿಯರ ಸಂಖ್ಯೆ ಕಡಿಮೆಯಾಗಿದೆ. ಅದು ಹೆಚ್ಚಾಗಬೇಕು. ನಿರ್ವಪಕರೂ ಕೂಡ ನಿರ್ದೇಶಕಿಯರ ಮೇಲೆ ನಂಬಿಕೆ ಇಡಬೇಕು. ಈ ಮಹಿಳಾ ದಿನದಂದು ನಾನು ಹೇಳುವುದೇನೆಂದರೆ, ‘ನಿಮ್ಮಮನೆಯಲ್ಲಿರುವ ಮಹಿಳೆಗೆ ಗೌರವ ನೀಡಿ. ಆಕೆಯ ಕೆಲಸವನ್ನು ನೀವು ಶೇರ್ ಮಾಡಿಕೊಳ್ಳಿ. ಇದರಿಂದ ನಿಮ್ಮ ಗೌರವವೂ ಹೆಚ್ಚಾಗುತ್ತದೆ’.

| ಸೋನು ಗೌಡ ನಟಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net