ಭರತ ‘ಕೆಂಡ’: ಬೆಂಗಳೂರಿನ ಪುಡಿರೌಡಿಗಳ ಬಗ್ಗೆ ಅಂತಾರಾಷ್ಟ್ರೀಯ ಚಿತ್ರ

bharath kenda
Published on

ಬೆಂಗಳೂರು: ರೂಪಾ ರಾವ್ ನಿರ್ದೇಶನದ ‘ಗಂಟುಮೂಟೆ’ ಚಿತ್ರದ ಛಾಯಾಗ್ರಾಹಕನಾಗಿ ಕೆಲಸ ಮಾಡಿದ್ದ ಸಹದೇವ್ ಕೆಲವಡಿ ಮೊದಲ ಬಾರಿಗೆ ‘ಕೆಂಡ’ದ ಮೂಲಕ ನಿರ್ದೇಶಕರ ಕ್ಯಾಪ್ ತೊಟ್ಟಿದ್ದಾರೆ. ಈಗಾಗಲೇ ಸ್ಟಿಜರ್‌ಲ್ಯಾಂಡ್ ಇಂಟರ್‌ನ್ಯಾಷನಲ್ ಫಿಲಂ ಫೆಸ್ಟಿವಲ್ ಹಾಗೂ ಲಂಡನ್‌ನಲ್ಲಿ ಪ್ರೀಮಿಯರ್ ಶೋ ಕಂಡಿರುವ ‘ಕೆಂಡ’ ಇಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಉಪೇಂದ್ರ ನಟಿಸಿ, ನಿರ್ದೇಶಿಸಿದ್ದ ‘ಸೂಪರ್’ ಹಾಗೂ ‘ಸುಗ್ರೀವ’ ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಬಿ.ವಿ.ಭರತ್ ‘ಕೆಂಡ’ದಲ್ಲಿ ಚೊಚ್ಚಲ ಬಾರಿಗೆ ನಾಯಕನಾಗಿದ್ದು, ಸಿನಿಮಾ ಹಾಗೂ ಪಾತ್ರದ ಕುರಿತು ಮಾತನಾಡಿದ್ದಾರೆ.

ಜನಸಾಮಾನ್ಯನ ದೃಷ್ಟಿಕೋನದ ಕಥೆ: ‘ಕೆಂಡ’ದಲ್ಲಿ ಕಾರ್ಮಿಕನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಭರತ್, ‘ವೃತ್ತಿಯ ಜತೆಗೆ ರಂಗಭೂಮಿಯಲ್ಲಿ ಸಕ್ರಿಯನಾಗಿರುವ ನನಗೆ ಹಲವು ವರ್ಷಗಳ ಬಳಿಕ ‘ಕೆಂಡ’ದಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸುವ ಅವಕಾಶ ದೊರೆಯಿತು. ಕೇಶವ ಎಂಬ ಕಾರ್ಮಿಕ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ. ಸ್ನೇಹಿತರಿಂದ ಬರುವ ಆರ್‌ನಿಂದ ಆತನ ಜೀವನ ಹೇಗೆ ತಿರುವು ಪಡೆದುಕೊಳ್ಳುತ್ತದೆ ಎಂಬುದೇ ಕಥೆ. ಇದು ನಾಯಕನ ಕಥೆಯಲ್ಲ, ಬದಲಾಗಿ ಜನಸಾಮಾನ್ಯನ ಬದುಕಿನ ಕಥೆ. ಸಾಮಾನ್ಯರ ದೃಷ್ಟಿಕೋನದಲ್ಲಿಯೇ ಪಾತ್ರಗಳನ್ನು ನಿರೂಪಿಸಲಾಗಿದೆ’ಎನ್ನುತ್ತಾರೆ.

ಸಾಮಾನ್ಯನಾಗಿ ಬದುಕಿದೆ: ಪಾತ್ರದ ಸಿದ್ಧತೆ ಕುರಿತು, ‘ಈ ಸಿನಿಮಾದಲ್ಲಿ ಪಾತ್ರದ ಮೂಲಕ ನಾನು ಜನಸಾಮಾನ್ಯನಾಗಬೇಕಿತ್ತು. ಇದಕ್ಕಾಗಿ ಹಲವು ರೀತಿಯ ಸಿದ್ಧತೆ ಮಾಡಿಕೊಂಡಿದ್ದೆ. ಮೊದಲಿಗೆ ಮೊಬೈಲ್‌ನಿಂದ ದೂರ ಉಳಿದೆ. ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಿ, ಕೂಲಿ ಕಾರ್ಮಿಕರ ಬದುಕನ್ನು ಅನ್ವೇಷಿಸಲು ಮುಂದಾದೆ. ಕಾರ್ಖಾನೆಗಳಿಗೆ ಭೇಟಿ ನೀಡಿ, ಅಲ್ಲಿ ಅವರ ಕೆಲಸಗಳನ್ನು ನೋಡಿಕೊಂಡೆ. ಇದರಿಂದಾಗಿ ಕೇಶವ ಪಾತ್ರದಲ್ಲಿ ಜೀವಿಸಲು ಕಾರಣವಾಯಿತು’ಎನ್ನುತ್ತಾರೆ ಭರತ್.

ವಿಭಿನ್ನ, ವಿಶೇಷ ಕಥೆ: ಈಗಾಗಲೇ ಕನ್ನಡದಲ್ಲಿ ಪುಡಿರೌಡಿಗಳ ಕಥೆಯಾಧಾರಿಸಿ ಹಲವು ಚಿತ್ರಗಳು ಬಂದಿರುವ ಬಗ್ಗೆ ಭರತ್, ‘ಈ ತರಹದ ಕಥೆಗಳು ಈಗಾಗಲೇ ಬಂದಿರಬಹುದು. ಆದರೆ, ಇದು ವಿಭಿನ್ನವಾದುದು. ಈ ಸಿನಿಮಾ ಜಪಾನ್ ಹಾಗೂ ಫ್ರೆಂಚ್​ ಸಿನಿಮಾಗಳ ಪರಿಕಲ್ಪನೆಯನ್ನು ಆಧರಿಸಿ ಕಥೆ ರಚಿಸಲಾಗಿದೆ. ಅಂದರೆ ಜನಸಾಮಾನ್ಯರಿಗೂ ಒಂದು ಗೌರವದ ಬದುಕು ಇದೆ. ಕುಟುಂಬ, ಸಂಬಂಧ ಹಾಗೂ ಹೊಣೆಗಾರಿಕೆಗಳು ಇದ್ದೇ ಇರುತ್ತವೆ. ಈ ನಡುವೆ, ಅವರ ಬದುಕು ಏಕೆ ಅನಿರೀಕ್ಷಿತಗಳಿಗೆ ಸಾಕ್ಷಿಯಾಗುತ್ತದೆ ಎಂಬುದನ್ನು ತೋರಿಸಲಾಗಿದೆ’ ಎನ್ನುತ್ತಾರೆ ಭರತ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net