ಇಂಗ್ಲೆಂಡ್​ನಲ್ಲೂ ಇಂಡಿಯಾ ಹವಾ; ವಿದೇಶಿಗರಿಗಾಗಿ ಪುನಃ ಪ್ರದರ್ಶನ

India Vs England22 Jan 20
Published on

ಬೆಂಗಳೂರು: ನಾಗತಿಹಳ್ಳಿ ಚಂದ್ರಶೇಖರ ನಿರ್ದೇಶನದ ‘ಇಂಡಿಯಾ ವರ್ಸಸ್ ಇಂಗ್ಲೆಂಡ್’ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆ ಆಗುವುದಕ್ಕೆ ಸಜ್ಜಾಗಿದೆ. ಮೇಷ್ಟ್ರು ಮತ್ತು ಚಿತ್ರತಂಡದವರು ಸಹ ಪ್ರಚಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಚಿತ್ರವನ್ನು ಸಾಧ್ಯವಾದಷ್ಟೂ ಜನರಿಗೆ ತಲುಪಿಸುವುದಕ್ಕೆ ಮುಂದಾಗಿದ್ದಾರೆ. ಈ ಮಧ್ಯೆ, ಚಿತ್ರ ಬರೀ ಇಂಡಿಯಾದಲ್ಲಿ ಮಾತ್ರ ಬಿಡುಗಡೆ ಆಗುತ್ತಿಲ್ಲ, ಇಂಗ್ಲೆಂಡ್​ನಲ್ಲಿ ಸಹ ಶುಕ್ರವಾರವೇ ತೆರೆ ಕಾಣಲಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಇಂಗ್ಲೆಂಡ್ ಜನರಿಗೆ ‘ಇಂಡಿಯಾ ವರ್ಸಸ್ ಇಂಗ್ಲೆಂಡ್’ ಚಿತ್ರ ಹೊಸದೇನಲ್ಲ. ಏಕೆಂದರೆ, ಕೆಲವು ತಿಂಗಳುಗಳ ಹಿಂದೆ ಲಂಡನ್​ನಲ್ಲಿ ಚಿತ್ರದ ಪ್ರೀಮಿಯರ್ ನಡೆದಿತ್ತು. ಆಗ ಸಾಕಷ್ಟು ಜನ ನೋಡಿದ್ದರು. ಈಗ ಇನ್ನಷ್ಟು ಜನ ನೋಡಲಿ, ಅನಿವಾಸಿ ಭಾರತೀಯರ ನಡುವೆ ಚಿತ್ರ ತಲುಪಲಿ ಎನ್ನುವ ಕಾರಣಕ್ಕೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ಅವರು ಇಂಗ್ಲೆಂಡ್​ನ ಪ್ರಮುಖ ನಗರಗಳಲ್ಲಿ ಚಿತ್ರವನ್ನು ಸತತವಾಗಿ ಬಿಡುಗಡೆ ಮಾಡುವುದಕ್ಕೆ ಸಿದ್ಧತೆ ನಡೆಸಿದ್ದಾರೆ.

‘ಇಂಡಿಯಾ ವರ್ಸಸ್ ಇಂಗ್ಲೆಂಡ್’ ಚಿತ್ರವು ವಸಿಷ್ಠ ಸಿಂಹ ಪೂರ್ಣಪ್ರಮಾಣದಲ್ಲಿ ನಾಯಕನಾಗಿ ನಟಿಸಿದ ಮೊದಲ ಸಿನಿಮಾ. ಈ ಚಿತ್ರಕ್ಕೆ ಅವರು ಇಮೇಜ್ ಚೇಂಜ್ ಓವರ್ ಮಾಡಿಕೊಂಡಿದ್ದು, ರೊಮ್ಯಾಂಟಿಕ್ ಹೀರೋ ಆಗಿ ಕಾಣಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಇನ್ನು ಅವರಿಗೆ ನಾಯಕಿಯಾಗಿ ಮಾನ್ವಿತಾ ಕಾಮತ್ ನಟಿಸಿದ್ದು, ಮಿಕ್ಕಂತೆ ಅನಂತನಾಗ್, ಸುಮಲತಾ ಅಂಬರೀಷ್, ಪ್ರಕಾಶ್ ಬೆಳವಾಡಿ, ಸಾಧು ಕೋಕಿಲ ಮುಂತಾದವರು ನಟಿಸಿದ್ದಾರೆ. ನಾಗತಿಹಳ್ಳಿ ಚಂದ್ರಶೇಖರ ಅವರ ಪುತ್ರಿ ಕನಸು ಬರೆದಿರುವ ‘ಅಕ್ಷಾಂಶ-ರೇಖಾಂಶ’ ಎಂಬ ಕಾದಂಬರಿಯನ್ನು ಈ ಚಿತ್ರ ಆಧರಿಸಿದೆ. ಆ ಕಥೆಯನ್ನು ಮೂಲವಾಗಿಟ್ಟುಕೊಂಡು ಅದಕ್ಕೆ ಪೂರಕ ಚಿತ್ರಕಥೆ, ಸಂಭಾಷಣೆ ರಚಿಸಿ ಸಿನಿಮಾ ಆಗಿಸಿದ್ದಾರೆ ನಿರ್ದೇಶಕರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net