

ಬೆಂಗಳೂರು: ಜನಾಂಗೀಯ ಘರ್ಷಣೆ ಸುತ್ತ ಹೆಣೆದಿರುವ ‘ಇನಾಮ್ದಾರ್’ ಶೀರ್ಷಿಕೆಯ ಸಿನಿಮಾ ಚಂದನವನದಲ್ಲಿ ಸೆಟ್ಟೇರಿದೆ. ಕೆಲ ವರ್ಷಗಳ ಹಿಂದೆ ‘ಕತ್ತಲೆಕೋಣೆ’ ಸಿನಿಮಾ ನಿರ್ದೇಶನ ಮಾಡಿದ್ದ ಸಂದೇಶ್ ಶೆಟ್ಟಿ ಅಜ್ರಿ, ಇದೀಗ ‘ಇನಾಮ್ದಾರ್’ ಮೂಲಕ ಆಗಮಿಸಿದ್ದಾರೆ. ಈ ಚಿತ್ರದಲ್ಲಿ ರಂಜನ್ ಛತ್ರಪತಿ ನಾಯಕನಾಗಿ ನಟಿಸಿದರೆ, ಭೂಮಿ ಶೆಟ್ಟಿ ನಾಯಕಿಯಾಗಿದ್ದಾರೆ.
ಹಾಗಾದರೆ ಏನಿದು ‘ಇನಾಮ್ದಾರ್’? ಈ ಬಗ್ಗೆ ಮಾಹಿತಿ ನೀಡುವ ನಿರ್ದೇಶಕರು, ‘ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ವಾಸಿಸುವ ಕಾಡಿನ ಜನರಿಗೆ ಮತ್ತು ಉತ್ತರ ಕರ್ನಾಟಕದ ಇನಾಮ್ದಾರ್ ಕುಟುಂಬಕ್ಕೆ ಇರುವ ನಂಟನ್ನು ಈ ಸಿನಿಮಾದಲ್ಲಿ ಹೇಳುತ್ತಿದ್ದೇನೆ. ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಇನಾಮ್ದಾರ್ ಕುಟುಂಬಗಳಿವೆ. ನಾವಿಲ್ಲಿ ಶಿವಾಜಿ ಮಹಾರಾಜರ ಮಗ ಶಂಭು ಮಹಾರಾಜ ವಂಶಸ್ಥರ ಕಥೆಯನ್ನು ಆಯ್ಕೆ ಮಾಡಿದ್ದೇವೆ. ಫೆಬ್ರವರಿ ಎರಡನೇ ವಾರ ಶೂಟಿಂಗ್ ಶುರುವಾಗಲಿದೆ’ ಎನ್ನುತ್ತಾರೆ ಸಂದೇಶ್.
ಎಸ್ತರ್ ನರೋನಾ, ಪ್ರಮೋದ್ ಶೆಟ್ಟಿ, ಶರತ್ ಲೋಜಿತಾಶ್ವ, ರಘು ಪಾಂಡೇಶ್ವರ್, ಎಂ.ಕೆ ಮಠ ಸೇರಿ ಹಲವರು ಈ ಚಿತ್ರದಲ್ಲಿರಲಿದ್ದಾರೆ. ಸುನೀಲ್ ನರಸಿಂಹಮೂರ್ತಿ ಛಾಯಾಗ್ರಹಣ, ರಾಕಿ ಸೋನು ಸಂಗೀತ, ಶಿವರಾಜ ಮೇಹು ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ಬಾಲಚಂದ್ರ ಇನಾಮ್ದಾರ್ ಈ ಚಿತ್ರ ನಿರ್ವಿುಸುತ್ತಿದ್ದಾರೆ.