ತಮ್ಮ ದೊಡ್ಡ ನಿರ್ಧಾರವನ್ನು ಹಿಂಪಡೆದ ನಟ ರವಿ ಮೋಹನ್​: ಅಭಿಮಾನಿಗಳಿಗೆ ಖುಷಿಯೋ ಖುಷಿ! Ravi Mohan

ತಮ್ಮ ದೊಡ್ಡ ನಿರ್ಧಾರವನ್ನು ಹಿಂಪಡೆದ ನಟ ರವಿ ಮೋಹನ್​: ಅಭಿಮಾನಿಗಳಿಗೆ ಖುಷಿಯೋ ಖುಷಿ! Ravi Mohan
ತಮ್ಮ ದೊಡ್ಡ ನಿರ್ಧಾರವನ್ನು ಹಿಂಪಡೆದ ನಟ ರವಿ ಮೋಹನ್​: ಅಭಿಮಾನಿಗಳಿಗೆ ಖುಷಿಯೋ ಖುಷಿ! Ravi Mohan
Published on

ಪ್ರಮುಖ ಮುಖ್ಯಾಂಶಗಳು

  • ವಿಚ್ಛೇದನ ವಿವಾದದ ನಡುವೆಯೇ ಯು-ಟರ್ನ್ ಹೊಡೆದ ತಮಿಳು ನಟ!
  • ಸಿನಿಮಾ ಬಿಡುವ ದಿಢೀರ್​ ನಿರ್ಧಾರವನ್ನು ಹಿಂಪಡೆದ ಜಯಂ ರವಿ
  • ಜೆಎಫ್‌ಡಬ್ಲ್ಯೂ ಅವಾರ್ಡ್ಸ್ ವೇದಿಕೆಯಲ್ಲಿ ಜಯಂ ರವಿ ಭಾವುಕ
  • ಹಳೇ ವಿವಾದ ಮರೆತು ಹೊಸ ಇನಿಂಗ್ಸ್ ಆರಂಭಿಸಲು ಸಜ್ಜಾದ ರವಿ ಮೋಹನ್
Ravi Mohan : ತಮ್ಮ ವೈಯಕ್ತಿಕ ಬದುಕಿನ ಏರುಪೇರು ಹಾಗೂ ವಿಚ್ಛೇದನ ಪ್ರಕ್ರಿಯೆಗಳು ಮುಗಿಯುವವರೆಗೂ ಚಿತ್ರರಂಗದಿಂದ ದೂರ ಉಳಿಯುವುದಾಗಿ ಘೋಷಿಸಿದ್ದ ತಮಿಳಿನ ಖ್ಯಾತ ನಟ 'ಜಯಂ' ರವಿ (ರವಿ ಮೋಹನ್), ಇದೀಗ ತಮ್ಮ ನಿರ್ಧಾರವನ್ನು ಹಿಂಪಡೆದಿದ್ದಾರೆ.
ನಿನ್ನೆ ನಡೆದ ಪ್ರತಿಷ್ಠಿತ 'ಜೆಎಫ್‌ಡಬ್ಲ್ಯೂ ಅಚೀವರ್ಸ್ ಅವಾರ್ಡ್ಸ್' ಸಮಾರಂಭದಲ್ಲಿ ಬಹಿರಂಗವಾಗಿ ಮಾತನಾಡಿರುವ ಅವರು, ತಾವು ಚಿತ್ರರಂಗಕ್ಕೆ ಕಂಪ್ಲೀಟ್ ಕಮ್‌ಬ್ಯಾಕ್ ಮಾಡಲಿರುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳ ಒತ್ತಾಯದ ಮೇರೆಗೆ ತಾವು ಈ ಭಾವನಾತ್ಮಕ ನಿರ್ಧಾರವನ್ನು ಬದಲಾಯಿಸಿಕೊಂಡಿರುವುದಾಗಿ ತಿಳಿಸಿರುವ ನಟನ ಈ ಹೊಸ ನಡೆ ಸದ್ಯ ಸೌತ್ ಸಿನಿ ದುನಿಯಾದಲ್ಲಿ ಭಾರಿ ಸಂಚಲನ ಮೂಡಿಸಿದೆ.
ಪ್ರಶಸ್ತಿ ಪ್ರದಾನ ಸಮಾರಂಭದ ವೇದಿಕೆಯಲ್ಲಿ ತಮ್ಮ ನಿರ್ಧಾರದ ಬಗ್ಗೆ ಮುಕ್ತವಾಗಿ ಮಾತನಾಡಿದ ಜಯಂ ರವಿ, ನನಗೆ ಈ ವರ್ಷ 45 ವರ್ಷ ತುಂಬಲಿದ್ದು, ನನ್ನ ಜೀವನದ ಅರ್ಧದಷ್ಟು ಭಾಗವನ್ನು ಅಂದರೆ ಬರೋಬ್ಬರಿ 23 ವರ್ಷಗಳನ್ನು ನಾನು ಚಿತ್ರರಂಗದಲ್ಲೇ ಕಳೆದಿದ್ದೇನೆ. ಅಂದು ನಾನು ಭಾವುಕನಾಗಿ ಚಿತ್ರರಂಗದಿಂದ ದೂರವಿರುವ ನಿರ್ಧಾರ ಪ್ರಕಟಿಸಿದ್ದೆ. ನನ್ನ ಆ ಒಂದು ಸಣ್ಣ ತಪ್ಪು ನಿಮ್ಮೆಲ್ಲರಿಗೂ ಇಷ್ಟೊಂದು ನೋವುಂಟು ಮಾಡಿದ್ದಕ್ಕೆ ನಾನು ಕ್ಷಮೆ ಕೇಳುತ್ತೇನೆ. ನನಗೆ ನನ್ನ ವೈಯಕ್ತಿಕ ಜೀವನ ಮತ್ತು ವೃತ್ತಿಪರ ಜೀವನ ಎರಡೂ ಸಮಾನವಾಗಿವೆ ಎಂದು ತಮ್ಮ ಹಳೆಯ ನಿರ್ಧಾರದ ಬಗ್ಗೆ ವಿಷಾದ ವ್ಯಕ್ತಪಡಿಸಿದರು.
ತಾವು ಚಿತ್ರರಂಗಕ್ಕೆ ಮರಳಲು ಸಿನಿಮಾ ಇಂಡಸ್ಟ್ರಿಯ ಪ್ರಮುಖರೇ ಕಾರಣ ಎಂದು ಬಹಿರಂಗಪಡಿಸಿದ ಅವರು, ನಾನು ನಟನೆಗೆ ಬ್ರೇಕ್ ಹಾಕಿದ ದಿನದಿಂದ ಚಿತ್ರರಂಗದ ಹಿರಿಯರು ಮತ್ತು ಸ್ನೇಹಿತರು ನನ್ನನ್ನು ಸತತವಾಗಿ ಸಂಪರ್ಕಿಸಿದರು. ನೀನು ಏನೇ ನಿರ್ಧಾರ ತಗೊಂಡ್ರೂ ನಾವು ಒಪ್ಕೋತೀವಿ, ಆದ್ರೆ ಸಿನಿಮಾದಿಂದ ಮಾತ್ರ ದೂರ ಹೋಗಬೇಡ ಎಂದು ನನಗೆ ಧೈರ್ಯ ತುಂಬಿದರು. ಅವರೆಲ್ಲರ ಪ್ರೀತಿಗಾಗಿ ನಾನು ತಲೆಬಾಗುತ್ತಿದ್ದೇನೆ. ಇನ್ಮುಂದೆ ನನ್ನ ಅಭಿಮಾನಿಗಳಿಗೆ ನಿರಾಸೆ ಮಾಡುವುದಿಲ್ಲ, ಖಂಡಿತವಾಗಿಯೂ ಬೆಳ್ಳಿಪರದೆಗೆ ಮರಳುತ್ತೇನೆ ಎಂದು ವಿಶ್ವಾಸದಿಂದ ನುಡಿದರು.
ಕಳೆದ ಮೇ ತಿಂಗಳಿನಲ್ಲಿ ಜಯಂ ರವಿ ಅವರು ತಮ್ಮ ಪತ್ನಿ ಆರತಿ ಜೊತೆಗಿನ ವಿಚ್ಛೇದನ ಪ್ರಕ್ರಿಯೆಗಳು ನ್ಯಾಯಾಲಯದಲ್ಲಿ ಪೂರ್ಣಗೊಳ್ಳುವವರೆಗೂ ಯಾವುದೇ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದು ದಿಢೀರ್ ಘೋಷಿಸಿದ್ದರು. ಪತ್ನಿಯಿಂದ ಬೇರ್ಪಡುವ ತೀವ್ರ ಮಾನಸಿಕ ಒತ್ತಡದ ನಡುವೆ ಅವರು ಕೈಗೊಂಡಿದ್ದ ಈ ನಿರ್ಧಾರ ಅವರ ಕೋಟ್ಯಂತರ ಅಭಿಮಾನಿಗಳಿಗೆ ದೊಡ್ಡ ಆಘಾತ ನೀಡಿತ್ತು, ಆದರೆ ಕೇವಲ ಒಂದೆರಡು ತಿಂಗಳಲ್ಲೇ ನಟ ಆ ನಿರ್ಧಾರವನ್ನು ಬದಲಾಯಿಸಿಕೊಂಡಿರುವುದು ಚಿತ್ರರಂಗದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ.
2009ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಜಯಂ ರವಿ ಮತ್ತು ಆರತಿ 15 ವರ್ಷಗಳ ಯಶಸ್ವಿ ಸಂಸಾರದ ಬಳಿಕ 2024ರಲ್ಲಿ ಅಧಿಕೃತವಾಗಿ ಬೇರ್ಪಡುವುದಾಗಿ ಘೋಷಿಸಿದ್ದರು. ಆ ನಂತರದ ದಿನಗಳಲ್ಲಿ ಗಾಯಕಿ ಕೆನಿಶಾ ಫ್ರಾನ್ಸಿಸ್ ಜೊತೆ ಜಯಂ ರವಿ ಹೆಸರು ಕೇಳಿಬಂದಾಗ ವಿವಾದ ಮತ್ತಷ್ಟು ದೊಡ್ಡದಾಗಿತ್ತು. ಇತ್ತೀಚೆಗಷ್ಟೇ ಕೆನಿಶಾ ಅವರು ರವಿ ಮೋಹನ್ ಜೊತೆಗಿನ ಸ್ನೇಹವನ್ನು ಸಂಪೂರ್ಣವಾಗಿ ಕೊನೆಗೊಳಿಸಿರುವುದಾಗಿ ಪ್ರಕಟಿಸಿದ್ದರು. ಈ ಸಾಲು ಸಾಲು ವೈಯಕ್ತಿಕ ಬಿರುಗಾಳಿಗಳ ನಂತರ ಇದೀಗ ಜಯಂ ರವಿ ಅವರು ತಮ್ಮ ನೆಚ್ಚಿನ ಚಿತ್ರರಂಗದತ್ತ ಮುಖ ಮಾಡಿದ್ದು, ಹಳೇ ವಿವಾದಗಳನ್ನು ಮರೆತು ಹೊಸ ಇನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net