

ಶಿವರಾಜಕುಮಾರ್ ಅಭಿನಯದ ‘ದ್ರೋಣ’ ಇಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅವರು ಚಿತ್ರರಂಗಕ್ಕೆ ಕಾಲಿಟ್ಟು ಈಗಾಗಲೇ 34 ವರ್ಷಗಳಾಗಿರುವುದು ಎಲ್ಲರಿಗೂ ಗೊತ್ತೇ ಇದೆ. ಈ ಸಂದರ್ಭದಲ್ಲಿ ಅವರ ಅಭಿನಯದ ಚಿತ್ರವೊಂದು ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ಸ್ಕೂಲ್ ಮೇಷ್ಟ್ರ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅವರು, ಇದು ಸಿನಿಮಾ ಎನ್ನುವುದಕ್ಕಿಂತ ಹೆಚ್ಚಾಗಿ ಒಂದು ಅನುಭವ ಎನ್ನುತ್ತಾರೆ. ಈ ಅನುಭವದ ಜತೆಗೇ, ಚಿತ್ರರಂಗದಲ್ಲಿನ 34 ವರ್ಷಗಳ ಸುದೀರ್ಘ ಅನುಭವವನ್ನೂ ಅವರು ‘ಸಿನಿವಾಣಿ’ಯ ಜತೆಗೆ ಹಂಚಿಕೊಂಡಿದ್ದಾರೆ.
ಬೆಂಗಳೂರು: ಈ ವಾರ ರಿಲೀಸ್ ಆಗುತ್ತಿರುವ ‘ದ್ರೋಣ’ಚಿತ್ರ ನಿರ್ದೇಶಕ ಪ್ರಮೋದ್ ಚಕ್ರವರ್ತಿಯವರ ಸ್ನೇಹಕ್ಕಾಗಿ ಮಾಡಿದ್ದು. ಪ್ರಮೋದ್ ನನಗೆ 15 ವರ್ಷಗಳಿಂದ ಪರಿಚಯ. ಆಗಿನಿಂದಲೂ ಸಿನಿಮಾ ಮಾಡಬೇಕು ಎಂದು ಹೇಳುತ್ತಲೇ ಇದ್ದರು. ಈಗ ಅದು ಕಾರ್ಯರೂಪಕ್ಕೆ ಬಂದಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಭೇದ ಭಾವ ಬಹಳ ಇದೆ. ಸರ್ಕಾರಿ ಶಾಲೆಗಳು ಅಂದರೆ ಹೀಗೆ ಇರುತ್ತವೆ ಎಂಬ ಆಲೋಚನೆ ಎಲ್ಲರಲ್ಲೂ ಇರುತ್ತದೆ. ಅಂತಹ ಒಂದು ಶಾಲೆಯನ್ನು ನಾಯಕ ಹೇಗೆ ಬದಲಾಯಿಸುತ್ತಾನೆ ಎಂಬುದೇ ‘ದ್ರೋಣ’. ಬರೀ ವಿದ್ಯಾರ್ಥಿಗಳಿಗೆ ಶಿಕ್ಷಕನಾಗದೇ, ಅಲ್ಲಿರುವ ಜಡ್ಡುಗಟ್ಟಿದ ವ್ಯವಸ್ಥೆಗೂ ಆತ ಶಿಕ್ಷಕನಾಗಿ ಕೆಲಸ ಮಾಡುತ್ತಾನೆ. ನನಗೆ ಸಾಕಷ್ಟು ಜನ ಶಿಕ್ಷಕರು ಪಾಠ ಮಾಡಿದ್ದಾರೆ. ಅವರೆಲ್ಲ ಕಲಿಸಿಕೊಟ್ಟ ಪಾಠಗಳನ್ನು ನಾನು ಇಲ್ಲಿ ಪ್ರೆಸೆಂಟ್ ಮಾಡಿದ್ದೇನೆ. ಹಾಗಾಗಿ ‘ದ್ರೋಣ’ನನಗೆ ಸಿನಿಮಾ ಎನ್ನುವುದಕ್ಕಿಂತ ಒಂದು ಅನುಭವ ಎನ್ನುತ್ತೇನೆ. ಈ ಚಿತ್ರದಲ್ಲಿ ನಾನು ಬಲಗೈಗೆ ವಾಚ್ ಕಟ್ಟಿಕೊಂಡಿರುತ್ತೇನೆ. ಅದರರ್ಥ ನನ್ನ ಸಮಯ ಕೂಡ ‘ರೈಟ್ ವೇ’ನಲ್ಲಿದೆ ಎಂದು. ಪ್ರಮೋದ್ ಚಕ್ರವರ್ತಿ ಸೂಕ್ಷ್ಮವಾದ ವಿಷಯವನ್ನು ಬಹಳ ಸರಳವಾಗಿ ಮತ್ತು ಜನರಿಗೆ ಮನಮುಟ್ಟುವಂತೆ ಹೇಳಿದ್ದಾರೆ.
ಆನಂದ್ ಚಿತ್ರದಿಂದ ಇಲ್ಲಿಯವರೆಗೂ ನೋಡಿಕೊಂಡು ಬಂದ ಹಾಗೆ ನಾನು ಎಲ್ಲ ರೀತಿಯ ಚಿತ್ರಗಳನ್ನು ಮಾಡಿಕೊಂಡು ಬಂದಿದ್ದೇನೆೆ. ಇದಕ್ಕೆ ಎಲ್ಲರ ಸಹಕಾರ ಒಂದು ಕಾರಣವಾದರೆ, ನನ್ನ ಅದೃಷ್ಟ ಮತ್ತೊಂದು ಕಾರಣ ಇರಬಹುದು. ‘ಆನಂದ್’ ಚಿತ್ರಕ್ಕೆ ಅಮ್ಮ ಇಟ್ಟ ಒಳ್ಳೆಯ ಮುಹೂರ್ತ ಸಹ ಇರಬಹುದೇನೋ. ನಾನು ಹಿರಿಯ ನಿರ್ದೇಶಕ ಸಿಂಗೀತಂ ಶ್ರೀನಿವಾಸ್ ರಾವ್ ಅವರಿಂದ ಹಿಡಿದು ಚೊಚ್ಚಲ ನಿರ್ದೇಶನಕ್ಕೆ ರೆಡಿಯಾಗುತ್ತಿರುವ ನಮ್ಮ ಮನೆಯ ಹುಡುಗ ಲಕ್ಕಿಯಂಥ ಕಿರಿಯ ನಿರ್ದೇಶಕರವರೆಗೂ ಕೆಲಸ ಮಾಡಿದ್ದೇನೆ. ಅದೇ ನನ್ನ ಅದೃಷ್ಟ. ಹಾಗಾಗಿ ಕಳೆದ 34 ವರ್ಷಗಳಿಂದಲೂ ನಾನು ಅದೃಷ್ಟವಂತ.
ಒಂದೇ ರೀತಿಯ ಚಿತ್ರಗಳನ್ನು ಮಾಡಿಲ್ಲ: ನನ್ನ ಇಷ್ಟು ವರ್ಷದ ಜರ್ನಿಯಲ್ಲಿ ನಾನು ಒಂದೇ ರೀತಿಯ ಚಿತ್ರಗಳನ್ನು ಮಾಡಿಕೊಂಡು ಬಂದಿಲ್ಲ. ನನ್ನ ಕರಿಯರ್ನಲ್ಲಿ ಫ್ಯಾಮಿಲಿ, ಹಾರರ್, ಥ್ರಿಲ್ಲರ್, ಆಕ್ಷನ್, ಲವ್ಸ್ಟೋರಿ ಸೇರಿದಂತೆ ಎಲ್ಲ ಫಾರ್ವ್ಯಾಟ್ನ ಸಿನಿಮಾಗಳಿವೆ. ಹಾಗಾಗಿ ಜನ ಇನ್ನೂ ಶಿವರಾಜಕುಮಾರ್ ಅವರ ಸಿನಿಮಾಗಳನ್ನು ಚಿತ್ರಮಂದಿರಕ್ಕೆ ಬಂದು ನೋಡುತ್ತಾರೆ ಅನಿಸುತ್ತದೆ.
ಸೋಲು ಗೆಲುವು ಸಮಾನ: ಸಾಕಷ್ಟು ಬಾರಿ ಸಿನಿಮಾಗಳು ದೊಡ್ಡ ಹಿಟ್ ಆಗುತ್ತವೆ, ಮತ್ತೆ ಕೆಲವು ಬಾರಿ ಸೋಲುತ್ತವೆ. ನಾನು ಯಾವಾಗಲೂ ಎರಡನ್ನೂ ಸಮಾನವಾಗಿ ಸ್ವೀಕರಿಸಿದ್ದೇನೆ. ಅದೇ ನನಗೆ ಪ್ಲಸ್ ಆಗಿದೆ ಎನಿಸುತ್ತದೆ. ತುಂಬ ನಿರೀಕ್ಷೆ ಇಟ್ಟ ಸಿನಿಮಾಗಳು ಬೇರೆ ಬೇರೆ ಕಾರಣಗಳಿಗೆ ಸೋತಿವೆ. ಇದು ನನ್ನ ತಪ್ಪಲ. ಜನ ಬೇಡ ಎಂದರೆ ಬೇಡ ಅಷ್ಟೇ.
ನಿರ್ದೇಶನಕ್ಕೆ ಪ್ಲಾನಿಂಗ್: ನಾನು ಸದ್ಯದಲ್ಲೇ ನಿರ್ದೇಶನ ಮಾಡಬೇಕು ಎಂದು ಪ್ಲಾ್ಯನ್ ಮಾಡಿಕೊಂಡಿದ್ದೇನೆ. ಒಂದಷ್ಟು ವ್ಯಕ್ತಿಗಳ ಜರ್ನಿಯನ್ನು ಆ ಸಿನಿಮಾದಲ್ಲಿ ಹೇಳುತ್ತೇನೆ. ಆ ಎಲ್ಲ ವ್ಯಕ್ತಿಗಳ ಬದುಕು, ಎಮೋಷನ್ಸ್ ಎಲ್ಲವನ್ನೂ ಹೇಳುತ್ತಲೇ ಒಂದು ಪಾಯಿಂಟ್ನಲ್ಲಿ ಕನೆಕ್ಟ್ ಮಾಡುತ್ತೇನೆ. ರಫ್ ಆಗಿ ಕಥೆ ರೆಡಿಯಾಗಿದೆ. ಎರಡು ಮೂರು ತಿಂಗಳಲ್ಲಿ ಅಧಿಕೃತವಾಗಿ ಅನೌನ್ಸ್ ಮಾಡುತ್ತೇನೆ.
ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು: ಸಾಕಷ್ಟು ಜನ ಚಿತ್ರರಂಗದಲ್ಲಿ ನಾಯಕತ್ವದ ಕೊರತೆ ಇದೆ ಎಂದು ಹೇಳುತ್ತಿದ್ದಾರೆ. ಸಮಯ ಬಂದಾಗ ನಾನು ನಾಯಕತ್ವ ವಹಿಸಿಕೊಳ್ಳುತ್ತೇನೆ. ಆದರೆ, ನಾನು ಯಾವುದೇ ಹುದ್ದೆಗೆ ಆಸೆ ಪಟ್ಟು ನಾಯಕನಾಗುತ್ತೇನೆ ಎನ್ನುತ್ತಿಲ್ಲ. ಬದಲಿಗೆ ಚಿತ್ರರಂಗದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡಲು ಇಷ್ಟಪಡುತ್ತೇನೆ. ನನಗೆ ‘ರಾಜಕುಮಾರ್ ಅವರ ಹಿರಿಯ ಪುತ್ರ’ ಎಂಬ ಹುದ್ದೆಯೇ ದೊಡ್ಡದು.
ಚಿತ್ರತಂಡಗಳ ಎಡವಿಟ್ಟಿಗೆ ಬೇಸರ: ಶಿವರಾಜಕುಮಾರ್ ಜತೆಗೆ ಒಂದು ಸಿನಿಮಾ ಮಾಡಬೇಕು ಎಂದು ಬರುವವರು, ಇಷ್ಟು ಹಣ ಹಾಕಿದರೆ ಇಷ್ಟು ವಾಪಸ್ ಬರುತ್ತದೆ ಎಂಬ ಆಲೋಚನೆಯಲ್ಲಿಯೇ ಬರುತ್ತಾರೆ. ಯಾರು ಸಹ ಸ್ನೇಹಕ್ಕಾಗಿ, ವಿಶ್ವಾಸಕ್ಕಾಗಿ ಸುಮ್ಮನೆ ನನ್ನ ಮೇಲೆ ಹಣ ಸುರಿಯುವುದಿಲ್ಲ. ನನ್ನಿಂದ ಯಾವುದೇ ಕಾರಣಕ್ಕೂ ಶೂಟಿಂಗ್ ತಡವಾಗುವುದಿಲ್ಲ. ಬೆಳಿಗ್ಗೆ ಸಮಯಕ್ಕೆ ಸರಿಯಾಗಿ ಶೂಟಿಂಗ್ಗೆ ಹೋಗುತ್ತೇನೆ. ಸಮಯಕ್ಕೆ ಸರಿಯಾಗಿ ಮುಗಿಸುತ್ತೇನೆ. ಅದಾದ ಮೇಲೆ ಚಿತ್ರವನ್ನು ಸರಿಯಾದ ಸಮಯಕ್ಕೆ ರಿಲೀಸ್ ಮಾಡಬೇಕಾದದ್ದು ಚಿತ್ರತಂಡದವರ ಕೆಲಸ. ಇತ್ತೀಚೆಗೆ ಬಿಡುಗಡೆಯಾದ ‘ಆಯುಷ್ಮಾನ್ಭವ’ ಹೇಳಿದ ದಿನಾಂಕವೊಂದು, ಬಿಡುಗಡೆ ಮಾಡಿದ ದಿನಾಂಕವೊಂದು. ಇದರಿಂದ ಅಭಿಮಾನಿಗಳು ಬೇಸರಗೊಂಡರು. ಸಿನಿಮಾದ ರಿಸಲ್ಟ್ಗೆ ಹೊಡೆತ ಬಿತ್ತು. ಅದೇ ರೀತಿ ‘ಕವಚ’ ಕೂಡ ಸಮಸ್ಯೆಯಾಯಿತು. ನಾನು ಬಹಳ ಇಷ್ಟಪಟ್ಟು ಮಾಡಿದ ಪಾತ್ರ ಅದು. ‘ಟಗರು’ ಮಾಡುವ ಸಮಯದಲ್ಲಿ ಸೂರಿ ಬಂದು ಸ್ವಲ್ಪ ಲೇಟಾಗುತ್ತದೆ ಎಂದು ಕೇಳಿಕೊಂಡರು ಹಾಗಾಗಿ ನಾನು ಸಮಯ ಕೊಟ್ಟೆ. ಆದರೆಅದರ ರಿಸಲ್ಟ್ ಬಹಳ ಚೆನ್ನಾಗಿತ್ತು.
ಹೊಸ ಆಲೋಚನೆಗಳಿಗೆ ನಿರ್ಮಾಣ ಸಂಸ್ಥೆ: ನಾನು ನಿರ್ಮಾಣ ಸಂಸ್ಥೆ ಆರಂಭಿಸಿದ್ದೇ ಹೊಸ ಹೊಸ ಆಲೋಚನೆಗಳಿಗಾಗಿ. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಮಂದಿ ಹೊಸಬರು ಹೊಸ ಹೊಸ ಆಲೋಚನೆಗಳೊಂದಿಗೆ ಬರುತ್ತಾರೆ. ಅವರನ್ನು ಬೇರೆ ಕಡೆ ಕಳಿಸುವುದಕ್ಕಿಂತಲೂ ನಾನೇ ಅವರ ಬೆನ್ನೆಲುಬಾಗಿ ನಿಂತರೆ ಹೇಗೆ ಎಂದು ಯೋಚಿಸಿದಾಗ ಹುಟ್ಟಿಕೊಂಡಿದ್ದೇ ‘ಶ್ರೀಮುತ್ತು ಸಿನಿ ಕ್ರಿಯೇಷನ್ಸ್’. ಈಗಾಗಲೇ ಮೂರು ವೆಬ್ ಸೀರಿಸ್ಗಳು ಮುಗಿದಿವೆ. ನನ್ನ ನಾಯಕತ್ವದ ಸಿನಿಮಾ ಸದ್ಯದಲ್ಲೇ ಆರಂಭವಾಗುತ್ತದೆ. ಅದರ ನಡುವೆಯೇ ಮತ್ತೊಬ್ಬರು ಕಥೆ ಹೇಳಿದ್ದಾರೆ. ಅದನ್ನು ಸಹ ನಮ್ಮ ಸಂಸ್ಥೆಯಲ್ಲಿಯೇ ನಿರ್ಮಾಣ ಮಾಡುತ್ತೇನೆ.
ಮೊದಲಿನಂತೆ ಒಪ್ಪಿಕೊಳ್ಳುವುದಿಲ್ಲ: ‘ಭಜರಂಗಿ-2’ ಇನ್ನೆರೆಡು ದಿನ ಶೂಟಿಂಗ್ ಮಾಡಿದರೆ ಮುಗಿದೇ ಹೋಗುತ್ತದೆ. ‘ಆರ್ಡಿಎಕ್ಸ್’ ಆರಂಭವಾಗಬೇಕು. ನಾನು ಮೊದಲಿನಿಂತೆ ಸಿನಿಮಾಗಳನ್ನು ಒಪ್ಪಿಕೊಳ್ಳುವುದಿಲ್ಲ. ಒಂದು ಮುಗಿಸಿ ಮತ್ತೊಂದಕ್ಕೆ ಹೋಗುತ್ತೇನೆ. ಇದರ ಜತೆಗೆ ಸದ್ಯದಲ್ಲೇ ನಮ್ಮ ಲಕ್ಕಿಯ ಸಿನಿಮಾ ಆರಂಭಿಸುತ್ತೇವೆ. ಆಮೇಲೆ ನನ್ನ ಪ್ರೊಡಕ್ಷನ್ ಹೌಸ್ನಲ್ಲಿನ ಸಿನಿಮಾ.
ವಿಶ್ವಾಸಂ ರಿಮೇಕ್ ಬಂದಿತ್ತು : ಈ ಹಿಂದೆ ಸತ್ಯಜ್ಯೋತಿ ಫಿಲಮ್್ಸ ಬ್ಯಾನರ್ನಿಂದ ‘ವಿಶ್ವಾಸಂ’ ಚಿತ್ರವನ್ನು ರಿಮೇಕ್ ಮಾಡುವಂತೆ ಆಫರ್ ಬಂದಿತ್ತು. ಆಗ ನಿರ್ವಪಕರು ‘ಆರ್ಡಿಎಕ್ಸ್’ ಕಥೆಯನ್ನು ಹೇಳಿದರು. ನಾನು ರಿಮೇಕ್ ಯಾಕೆ ಇದನ್ನೇ ಮಾಡೋಣ ಎಂದು ಹೇಳಿದೆ. ಆ ಮೀಟಿಂಗ್ ನಂತರ ನಿರ್ದೇಶಕ ರವಿ ಅರಸು ಬಂದು ಕಥೆ ಹೇಳಿದರು, ರೋಚಕವಾದ ಕಥೆ, ಅದು ನನ್ನ ಕರಿಯರ್ನಲ್ಲಿ ಬೇರೆ ರೀತಿಯ ಚಿತ್ರವಾಗುತ್ತದೆ.
ಹೊಸತನಕ್ಕೆ ಯಾವಾಗಲೂ ಓಪನ್: ಎರಡು ವರ್ಷಗಳಿಂದ ನಾನು ನಟಿಸುವ ಸಿನಿಮಾಗಳ ಸಂಖ್ಯೆಯನ್ನು ಕಡಿಮೆ ಮಾಡಿಕೊಂಡಿದ್ದೇನೆ. ಮುಂದೆಯೂ ಅಷ್ಟೇ, ಒಳ್ಳೆ ಸಿನಿಮಾಗಳನ್ನಷ್ಟೇ ಮಾಡುವುದು. ಶಿವಣ್ಣ ಸದಾ ಹೊಸತನಕ್ಕೆ ತೆರೆದುಕೊಂಡಿರುತ್ತಾರೆ. ಹೊಸ ರೀತಿಯ ಕಥೆಗಳು, ಹೊಸ ಆಲೋಚನೆಗಳನ್ನು ನಾನು ಬಹಳ ಇಷ್ಟಪಡುತ್ತೇನೆ.
ಶಿವರಾಜಕುಮಾರ್ ಬದಲಾಗಿಲ್ಲ: 34 ವರ್ಷಗಳಲ್ಲಿ ಸಿನಿಮಾ ಮಾಡುವ ವಿಧಾನ ಬಹಳಷ್ಟು ಬದಲಾಗಿದೆ. ಆದರೆ, ಶಿವರಾಜ್ಕುಮಾರ್ ಬದಲಾಗಿಲ್ಲ. ಅಂದು ಹೇಗೆ ಹೊಸ ಪಾತ್ರಗಳಲ್ಲಿ ಜನರನ್ನು ರಂಜಿಸಬೇಕು ಎಂದುಕೊಳ್ಳುತ್ತಿದ್ದೆನೋ, ಇಂದಿಗೂ ಸಹ ಚಿತ್ರದಿಂದ ಚಿತ್ರಕ್ಕೆ ವಿಭಿನ್ನವಾಗಿ ಕಾಣಿಸಿಕೊಳ್ಳಬೇಕು ಎಂದು ಇಷ್ಟಪಡುತ್ತೇನೆ.
ನಾನು ಇಷ್ಟಪಟ್ಟ ಸಿನಿಮಾಗಳು
ಸಾಕಷ್ಟು ಸಿನಿಮಾಗಳು ನನ್ನ ನೆನಪಿನಲ್ಲಿವೆ. ಅದರಲ್ಲಿ ‘ಚಿಗುರಿದ ಕನಸು’, ‘ಭೂಮಿ ತಾಯಿಯ ಚೊಚ್ಚಲ ಮಗ’, ‘ಜನುಮದ ಜೋಡಿ’, ‘ಓಂ’, ‘ಅಣ್ಣ ತಂಗಿ’, ‘ಕಡ್ಡಿಪುಡಿ’, ‘ಜೋಗಿ’, ‘ಭಜರಂಗಿ’ ... ಹೀಗೆ ಸಾಕಷ್ಟು ಸಿನಿಮಾಗಳು ಇಷ್ಟಪಟ್ಟಿದ್ದೇನೆ. ಅದರಲ್ಲೂ ‘ಚಿಗುರಿದ ಕನಸು’ ಲೈಫ್ ಟೈಮ್ ಸಿನಿಮಾ ಎನ್ನುತ್ತೇನೆ. ಇನ್ನು ‘ಕಿಲ್ಲಿಂಗ್ ವೀರಪ್ಪನ್’ ಕೊಂಚ ಎಮೋಶನಲ್ ಆಗಿ ಕನೆಕ್ಟ್ ಆದ ಚಿತ್ರ. ಏಕೆಂದರೆ, ಅಪ್ಪಾಜಿಯವರ ಕಿಡ್ನಾಪ್ ಮತ್ತು ವೀರಪ್ಪನ್ ಮಾಡುತ್ತಿದ್ದ ಅನಾಹುತಗಳು ಇವೆಲ್ಲವೂ ಕನೆಕ್ಟ್ ಆಗಿತ್ತು. ಕೇವಲ 20 ದಿನಗಳಲ್ಲಿ ಚಿತ್ರೀಕರಣ ಮಾಡಿದ ಸಿನಿಮಾ ಅದು. ಹಾಗಾಂತ ಬೇರೆ ಸಿನಿಮಾಗಳು ಇಷ್ಟವಿಲ್ಲ ಅಂತಲ್ಲ. ಎಲ್ಲವೂ ನನ್ನ ಸಿನಿಮಾಗಳೇ.
ವರದಪ್ಪಾಜಿಯ ನೆನಪು
ನನ್ನ 34 ವರ್ಷದ ಕರಿಯರ್ನಲ್ಲಿ ನಮ್ಮ ಚಿಕ್ಕಪ್ಪ ವರದಪ್ಪಾಜಿಯವರನ್ನ ನೆನೆಯಲು ಇಷ್ಟಪಡುತ್ತೇನೆ. ನಮ್ಮ ಪ್ರೊಡಕ್ಷನ್ ಹೌಸ್, ಸಿನಿಮಾಗಳು ಹೀಗೆ ಎಲ್ಲ ವಿಚಾರದಲ್ಲಿಯೂ ಅವರು ಹಾಕಿಕೊಟ್ಟ ಹಾದಿಯಲ್ಲಿ ಸಾಗುತ್ತಿದ್ದೇನೆ. ಜತಗೆ ನಮ್ಮಣ್ಣನಿಗೆ ಹತ್ತು ವರ್ಷದ ನಂತರ ಹುಟ್ಟಿದ ಮಗ ಎಂಬ ಕಾರಣಕ್ಕೆ ಅವರಿಗೆ ನನ್ನ ಮೇಲೆ ವಿಶೇಷ ಪ್ರೀತಿ ಇತ್ತು.
ಹರೀಶ್ ಬಸವರಾಜ್