ಕನ್ನಡತಿ ಚಿತ್ರಕ್ಕೆ ಇಳಯರಾಜನ ನಿನಾದ: 9 ವರ್ಷಗಳ ಬಳಿಕ ಮತ್ತೆ ಕನ್ನಡಕ್ಕೆ ಬಂದ ಸಂಗೀತ ಸಂತ

ranjini raghavan
Published on

ಬೆಂಗಳೂರು: ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಸೇರಿ 1000ಕ್ಕೂ ಅಧಿಕ ಸಿನಿಮಾಗಳ 7000ಕ್ಕೂ ಹೆಚ್ಚು ಹಾಡುಗಳಿಗೆ ಸಂಗೀತ ನಿರ್ದೇಶನ ಮಾಡಿದ ಖ್ಯಾತಿ ದಕ್ಷಿಣ ಭಾರತದ ಪ್ರಸಿದ್ಧ ಸಂಗೀತ ನಿರ್ದೇಶಕ ಇಳಯರಾಜ ಅವರಿಗೆ ಸಲ್ಲುತ್ತದೆ. ಕನ್ನಡದ ‘ಪಲ್ಲವಿ ಅನುಪಲ್ಲವಿ’, ‘ಗೀತಾ’, ‘ನಮ್ಮೂರ ಮಂದಾರ ಹೂವೇ’, ‘ಮೈತ್ರಿ’ ಸೇರಿ ಹಲವು ಸಿನಿಮಾಗಳಿಗೆ ಅವರು ಸಂಗೀತ ನೀಡಿದ್ದಾರೆ. 2016ರಲ್ಲಿ ತೆರೆಕಂಡಿದ್ದ ಪ್ರಕಾಶ್ ರಾಜ್ ನಿರ್ದೇಶನದ ‘ಇದೊಳ್ಳೆ ರಾಮಾಯಣ’ ಇಳಯರಾಜಾ ಸಂಗೀತ ನಿರ್ದೇಶಿಸಿದ ಕೊನೆಯ ಕನ್ನಡ ಸಿನಿಮಾ. ಇದೀಗ 9 ವರ್ಷಗಳ ಬಳಿಕ ಅವರು ಕನ್ನಡಕ್ಕೆ ಆಗಮಿಸುತ್ತಿದ್ದಾರೆ. ‘ಕನ್ನಡತಿ’ ಧಾರಾವಾಹಿ ಖ್ಯಾತಿಯ ನಟಿ ರಂಜಿನಿ ರಾಘವನ್ ಮೊದಲ ಬಾರಿಗೆ ನಿರ್ದೇಶಿಸುತ್ತಿರುವ ಚಿತ್ರಕ್ಕೆ ಇಳಯರಾಜ ಸಂಗೀತ ನೀಡಲಿದ್ದಾರೆ. ಈ ಮಾಹಿತಿಯನ್ನು ಸ್ವತಃ ನಿರ್ದೇಶಕಿ, ನಟಿ ರಂಜಿನಿ ರಾಘವನ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ. ‘ನಿರ್ದೇಶಕಿಯಾಗಬೇಕು ಎನ್ನುವ ಕನಸಿಗೆ ಇದೀಗ ಕಾಲ ಕೂಡಿಬಂದಿದೆ. ಈ ಚಿತ್ರದ ಸ್ಕ್ರಿಪ್ಟ್‌ಗಾಗಿ ಎರಡು ವರ್ಷಗಳಿಂದ ಕೆಲಸ ಮಾಡಿದ್ದೇನೆ. ಎಲ್ಲ ಪೂರ್ಣಗೊಂಡು ಮೊದಲ ಹಂತದ ಶೂಟಿಂಗ್ ಕೂಡ ಆರಂಭಿಸಲಾಗಿದೆ. ನಮ್ಮ ಸಿನಿಮಾದ ಮೂಲಕ ಸಂಗೀತ ನಿರ್ದೇಶಕ ಇಳಯರಾಜ ಮತ್ತೊಮ್ಮೆ ಕನ್ನಡಕ್ಕೆ ಬರುತ್ತಿರುವುದು ಹೆಮ್ಮೆಯ ವಿಚಾರ’ ಎಂದರು.

ಫೋಟೋಗಷ್ಟೇ ಹೋಗಿದ್ದು ಕಥೆ ಒಪ್ಪಿದರು: ರಂಜಿನಿ ರಾಘವನ್ ಚೆನ್ನೈನ ಸ್ನೇಹಿತರ ಮುಖಾಂತರ ಮೊದಲ ಬಾರಿಗೆ ಇಳಯರಾಜರನ್ನು ಭೇಟಿ ಮಾಡಿ, ಅವರಿಗೆ ಕಥೆ ಹೇಳಿದ್ದಾರೆ. ಕಥೆ ಕೇಳಿ, ಅವರೇ ಈ ಚಿತ್ರಕ್ಕೆ ಸಂಗೀತ ನೀಡುವೆ ಎಂದು ಒಪ್ಪಿಕೊಂಡರಂತೆ. ಈ ಬಗ್ಗೆ ರಂಜಿನಿ, ‘ಇಳಯರಾಜರನ್ನು ಭೇಟಿ ಮಾಡಿ ಅವರಿಗೆ ಕಥೆ ಹೇಳಿ ೆಟೋ ತೆಗೆಸಿಕೊಂಡು ಆಶೀರ್ವಾದ ಪಡೆಯಬೇಕು ಎಂದಷ್ಟೇ ತೆರಳಿದ್ದೆ. ಅವರಿಗೆ ಕಥೆ ಹೇಳಿದಾಗ ಮೆಚ್ಚುಗೆ ವ್ಯಕ್ತಪಡಿಸಿದರು. ಮೂರು ದಿನಗಳ ಬಳಿಕ ಈ ಸಿನಿಮಾ ನಾನು ಮಾಡಬೇಕು ಎಂದು ಹೇಳಿದರು. ಒಬ್ಬ ಮಹಿಳೆಯ ನಿರ್ದೇಶನ ಮಾಡುತ್ತಿದ್ದಾರೆ ಎಂಬ ಕಾರಣಕ್ಕೋ ಅಥವಾ ಕಥೆ ಚೆನ್ನಾಗಿದೆ ಎಂಬ ಕಾರಣಕ್ಕೋ ಅವರು ಒಪ್ಪಿದರು ಎಂಬುದು ಗೊತ್ತಿಲ್ಲ. ಸದ್ಯ ನಮಗೆ ಅವರೇ ದೊಡ್ಡ ಶಕ್ತಿ. ಅವರ ಸಂಗೀತದಲ್ಲಿ ಈ ಚಿತ್ರ ಚೆನ್ನಾಗಿ ಮೂಡಿಬರಲಿದೆ. ಒಟ್ಟು ನಾಲ್ಕು ಸಾಂಗ್ ಇರಲಿದ್ದು, ಕೆಲವು ಬಿಟ್ ಹಾಡುಗಳಿರುತ್ತವೆ. ಪಾತ್ರ, ತಾಂತ್ರಿಕ ವರ್ಗ, ಸಿನಿಮಾ ಟೈಟಲ್ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ನೀಡುತ್ತೇವೆ. ಈ ಚಿತ್ರದಲ್ಲಿ ನಾನು ನಟಿಸುತ್ತೀನಾ ಎಂಬುದನ್ನು ಕೂಡ ಕಾದು ನೋಡಬೇಕಿದೆ’ ಎನ್ನುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net