

Kili Paul : ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವವರಿಗೆ ಕಿಲಿ ಪಾಲ್ ಪರಿಚಯ ಇದ್ದೇ ಇರುತ್ತೆ. ತಾಂಜಾನಿಯಾ ಮೂಲದ ಸೋಶಿಯಲ್ ಮೀಡಿಯಾ ಸ್ಟಾರ್ ಕಿಲಿ ಪಾಲ್ ಭಾರತೀಯರಿಗೂ ಪರಿಚಿತ. ಇಲ್ಲಿನ ಸಿನಿಮಾ ಹಾಡುಗಳಿಗೆ ಲಿಪ್ ಸಿಂಕ್ ಮಾಡಿ ನೃತ್ಯ ಮಾಡುವ ಕಿಲಿ ಪಾಲ್, ಕೆಲವೊಂದು ದೃಶ್ಯಗಳಿಗೆ ಅಚ್ಚುಕಟ್ಟಾಗಿ ನಟನೆ ಕೂಡ ಮಾಡಿದ್ದಾರೆ. ಈ ಮೂಲಕ ಭಾರತೀಯರ ಮನಸ್ಸನ್ನು ಗೆದ್ದಿದ್ದಾರೆ.
ತಾಜಾ ಸಂಗತಿ ಏನೆಂದರೆ, ಕಿಲಿ ಪಾಲ್ ಇತ್ತೀಚೆಗಷ್ಟೇ ಭಾರತಕ್ಕೆ ಬಂದಿದ್ದರು. ಸಿನಿಮಾ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಕೇರಳಕ್ಕೆ ಬಂದಿದ್ದರು. ಅಚ್ಚರಿಯ ಸಂಗತಿ ಏನೆಂದರೆ, ಮಲಯಾಳಂ ಸಿನಿಮಾವೊಂದರಲ್ಲಿ ಕಿಲಿ ಪಾಲ್ ನಟಿಸಿದ್ದಾರೆ. ಆ ಸಿನಿಮಾದ ಶೀರ್ಷಿಕೆ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಆ ಸಿನಿಮಾದ ಹೆಸರು ಇನ್ನೊಸೆಂಟ್.
ಇನ್ನೊಸೆಂಟ್ ಸಿನಿಮಾದಲ್ಲಿ ಅಲ್ತಾಫ್ ಸಲೀಮ್ ಮತ್ತು ಅನಾರ್ಕಲಿ ಮರಕ್ಕರ್ ನಟಿಸಿದ್ದಾರೆ. ಈ ಚಿತ್ರವನ್ನು ಸತೀಶ್ ತನ್ವಿ ಎಂಬುವರು ನಿರ್ದೇಶಿಸಿದ್ದಾರೆ. ಈ ಚಿತ್ರದ ಶೀರ್ಷಿಕೆ ಬಿಡುಗಡೆ ಸಮಾರಂಭ ಕೊಚ್ಚಿಯ ಲುಲು ಮಾಲ್‌ನಲ್ಲಿ ನಡೆಯಿತು. ಈ ಸಮಾರಂಭದಲ್ಲಿ ಕಿಲಿ ಪಾಲ್ ಆಡಿದ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ನಟಿ ಶೋಭನಾ ಅವರು ನನ್ನ ನೆಚ್ಚಿನ ಮಲಯಾಳಂ ನಟಿ ಎಂದು ಕಿಲಿ ಪಾಲ್ ಹೇಳಿದರು. ಅಲ್ಲದೆ, ಮೋಹನ್ ಲಾಲ್, ಮಮ್ಮುಟ್ಟಿ, ಉನ್ನಿ ಮುಕುಂದನ್ ಮತ್ತು ಫಹಾದ್ ಫಾಸಿಲ್ ಅವರನ್ನು ತುಂಬಾ ಇಷ್ಟಪಡುತ್ತೇನೆ ಎಂದರು. ಇದೇ ವೇಳೆ ‘ಪುಲಿವಾಲ್ ಕಲ್ಯಾಣಂ’ ಚಿತ್ರದ ‘ಆರು ಕುದ್ದು, ಆರು ಕುದ್ದು’ ಹಾಡನ್ನು ಹಾಡುವ ಮೂಲಕ ಅಲ್ಲಿ ನೆರದಿದ್ದ ಪ್ರೇಕ್ಷಕರ ಮನಸೂರೆಗೊಂಡರು.
ತಮ್ಮ ಮಾತಿನ ಕೊನೆಯಲ್ಲಿ ಕಿಲಿ ಪಾಲ್ ತಮಗಿರುವ ಒಂದು ಆಸೆಯನ್ನು ಹಂಚಿಕೊಂಡರು. ನನಗೆ ಮಲಯಾಳಿ ಹುಡುಗಿಯರೆಂದರೆ ತುಂಬಾ ಇಷ್ಟ. ಒಂದೊಳ್ಳೆ ಮಲಯಾಳಿ ಹುಡುಗಿಯನ್ನು ಹುಡುಕಿ ಮದುವೆಯಾಗಲು ಸಾಧ್ಯವಾದರೆ, ನಾನು ಕೇರಳದಲ್ಲೇ ಮದುವೆಯಾಗಲು ಬಯಸುತ್ತೇನೆಂದು ಹೇಳಿದರು.
ಇನ್ನು ಕಿಲಿ ಪಾಲ್ ಬರುವ ವಿಚಾರ ಗೊತ್ತಾಗಿ, ಅವರನ್ನು ಭೇಟಿ ಮಾಡಲು ಅನೇಕ ಜನರು ಲುಲು ಮಾಲ್‌ನಲ್ಲಿ ಜಮಾಯಿಸಿದರು. ಸ್ವತಃ ಕಿಲಿ ಪಾಲ್ ಕೂಡ ಇಷ್ಟೊಂದು ಜನರನ್ನು ನಿರೀಕ್ಷಿಸಿರಲಿಲ್ಲ. ಭಾರತದಲ್ಲಿ ತನ್ನ ಖ್ಯಾತಿಯನ್ನು ನೋಡಿ ಕಿಲಿ ಪಾಲ್ ತುಂಬಾ ಖುಷಿಯಾದರು. ತನ್ನನ್ನು ನೋಡಲು ಬಂದ ಎಲ್ಲರಿಗೂ ಇದೇ ಸಂದರ್ಭದಲ್ಲಿ ಕಿಲಿ ಪಾಲ್ ಕೃತಜ್ಞತೆಯನ್ನು ಸಲ್ಲಿಸಿದರು. (ಏಜೆನ್ಸೀಸ್)