

ಬೆಂಗಳೂರು: ವೃತ್ತಿಯಲ್ಲಿ ಆಟೋ ಚಾಲಕ, ಸಮಾಜ ಸೇವಕ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಶಂಕರ್ ನಾಗ್ ಅವರ ಕಟ್ಟಾ ಅಭಿಮಾನಿಯಾಗಿರುವ ಆಟೋ ರಾಮಣ್ಣ, ಈಗ ತಮ್ಮದೇ ಹೆಸರಿನಲ್ಲಿ ಸದ್ದಿಲ್ಲದೆ ಒಂದು ಚಿತ್ರವನ್ನು ಮಾಡಿ ಮುಗಿಸಿದ್ದಾರೆ. ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು, ನೃತ್ಯ, ಗಾಯನ, ಸಾಹಸ, ನಿರ್ವಣ, ನಿರ್ದೇಶನ ಮಾಡುವ ಜತೆಗೆ ನಾಯಕನಾಗಿಯೂ ನಟಿಸಿದ್ದಾರೆ. ಇತ್ತೀಚೆಗೆ ಈ ಚಿತ್ರದ ಹಾಡುಗಳು ಬಿಡುಗಡೆಯಾಗಿವೆ. ಚಿತ್ರದ 12 ಹಾಡುಗಳ ಪೈಕಿ, ಹಿರಿಯ ಸಾಹಿತಿ ಡಾ. ದೊಡ್ಡರಂಗೇಗೌಡ ಅವರು ಆರು ಹಾಡುಗಳನ್ನು ಬರೆದಿದ್ದಾರೆ.
‘ರಾಜ್ಯದಲ್ಲಿ ಐದೂವರೆ ಲಕ್ಷ ಆಟೋಚಾಲಕರು ಇದ್ದು, ಇವರೆಲ್ಲರೂ ಒಂದು ಬಾರಿ ನೋಡಿದರೆ ಬಂಡವಾಳ ವಾಪಸ್ಸು ಬರುತ್ತದೆ’ ಎಂದು ಹೇಳಿದರು ದೊಡ್ಡರಂಗೇಗೌಡ. ಈ ಚಿತ್ರದಲ್ಲಿ ಮಹೇಂದ್ರ ಮುನೋತ್, ಮನ್ದೀಪ್ರಾಯ್, ಅಭಿನಯ, ಹೊನ್ನವಳ್ಳಿಕೃಷ್ಣ, ಲಕ್ಷೀದೇವಮ್ಮ ಮುಂತಾದವರು ನಟಿಸಿದ್ದಾರೆ. ರಾಮಣ್ಣ ಅವರಿಗೆ ನಾಯಕಿಯಾಗಿ ಯೋಗಶ್ರೀ ನಟಿಸಿದ್ದಾರೆ. ಮಾರ್ಚ್ ತಿಂಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ.