ಇದು ಚರಿತ್ರೆ ಬದಲಿಸೋ ಅವತಾರ

nagathi halli jan 2020
Published on

ಬೆಂಗಳೂರು: ಹಿಸ್ಟರಿ, ಮಿಸ್ಟರಿ, ಪ್ರೀತಿ-ಪ್ರೇಮ, ದೇಶಪ್ರೇಮ, ಮತ್ಸರ, ವಂಚನೆ, ದೇಶ-ವಿದೇಶಗಳ ಮೇಲಾಟ, ಕೊನೆಗೆ ಭಾರತವೇ ಮಿಗಿಲು ಎಂದು ಸಾಧಿಸುವ ಹಠ.. ಎಲ್ಲವನ್ನೂ ಒಟ್ಟೊಟ್ಟಿಗೇ ಪರದೆ ಮೇಲೆ ಮೂಡಿಸಿದ್ದಾರೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ. ಸಾಮಾನ್ಯವಾಗಿ ಪ್ರೀತಿಯೇ ಪ್ರಧಾನವಾಗಿರುವ ಸಿನಿಮಾ ಮಾಡುವ ನಾಗತಿಹಳ್ಳಿಯವರಿಲ್ಲಿ ಪ್ರೀತಿ ಹಾಗೂ ದೇಶಭಕ್ತಿಯನ್ನು ಒಂದು ಡೈಮಂಡ್ ಇಟ್ಟುಕೊಂಡು ಹದವಾಗಿ ಬ್ಲೆಂಡ್ ಮಾಡಿದ್ದಾರೆ.

ಭಾರತದಲ್ಲೊಬ್ಬ ದೇಶಭಕ್ತ ಜೆಮಾಲಜಿಸ್ಟ್ (ಅನಂತನಾಗ್), ಆತನಿಗೆ ಡೈಮಂಡ್​ನಂಥ ಮೊಮ್ಮಗಳು (ಮಾನ್ವಿತಾ). ಇಂಗ್ಲೆಂಡ್​ನಲ್ಲಿ ಅನಿವಾಸಿ ಭಾರತೀಯ ದಂಪತಿ. (ಸುಮಲತಾ-ಪ್ರಕಾಶ್ ಬೆಳವಾಡಿ). ವಿಡಿಯೋ ಬ್ಲಾಗರ್ ಆಗಿರುವ ಅವರ ಪುತ್ರನಿಗೆ ಪ್ರಪಂಚ ಪರ್ಯಟನೆ ಹುಚ್ಚು. ಹಾಗೆ ಭಾರತಕ್ಕೆ ಬರುವ ಆತ (ವಸಿಷ್ಠ ಸಿಂಹ) ನೇರವಾಗಿ ತಲುಪುವುದೇ ಆ ಜೆಮಾಲಜಿಸ್ಟ್ ಮನೆಗೆ, ಅಲ್ಲಿಂದ ಶುರುವಾಗುತ್ತದೆ ಡೈಮಂಡ್ ಮೊಮ್ಮಗಳು ಮೇದಿನಿ ಹಾಗೂ ವ್ಲಾಗರ್ ಅಲೆಮಾರಿ ಕನಿಷ್ಕ ನಡುವೆ ಕಿತ್ತಾಟ. ಭಾರತದಲ್ಲಿ ಬ್ರಿಟಿಷರ ಕೊಡುಗೆ ಇರುವ ಸ್ಥಳಗಳಿಗೆಲ್ಲ ಕರೆದೊಯ್ಯುವಂತೆ ಮೇದಿನಿಗೆ ಕನಿಷ್ಕ ಹೇಳುತ್ತಾನೆ. ಅಲ್ಲೆಲ್ಲ ಆತ ಬ್ರಿಟಿಷರ ಪರವಾಗಿ ಮಾತನಾಡಿದಾಗ ಅಸಲಿ ಇತಿಹಾಸ ಹೇಳಿ ವಾದಿಸುತ್ತ ಭಾರತದ ಹಿರಿಮೆ ವಿವರಿಸುತ್ತಾಳೆ ಮೇದಿನಿ. ಹೀಗೆ ಭಾರತದ ಬಗ್ಗೆ ಆತನ ನಿಲುವು ಬದಲಾಗುವ ಜತೆಗೆ ಆಕೆಯತ್ತ ಒಲವು ಕೂಡ ಉಂಟಾಗುತ್ತದೆ.

ಇದೇ ಪ್ರಪ್ರಥಮ ಬಾರಿಗೆ ನಾಯಕ ಆಗಿ ಕಾಣಿಸಿಕೊಂಡಿರುವ ವಸಿಷ್ಠ ಸಿಂಹ ಎಂದಿನಂತೆಯೇ ನಟನೆಯಲ್ಲಿ ಸೈ ಎನಿಸಿಕೊಂಡಿದ್ದಾರೆ. ನೆಗೆಟಿವ್ ಮಾತ್ರವಲ್ಲ ಪಾಸಿಟಿವ್ ಪಾತ್ರದಲ್ಲೂ ಕಲಾವಿದನೇ ಎಂದು ಅಭಿನಯದ ಮೂಲಕ ತೋರಿದ್ದಾರೆ. ಅನಂತನಾಗ್ ಎಂದಿನಂತೆ ಇಲ್ಲಿ ನಟನೆಯಲ್ಲಿ ರಿಯಲ್ ಜೆಮ್ ಮೊಮ್ಮಗಳಾಗಿ ಮಾನ್ವಿತಾ ಡೈಮಂಡ್​ನಂತೆ ಮಿಂಚಿದ್ದಾರೆ. ಎನ್​ಆರ್​ಐ ದಂಪತಿ ಪಾತ್ರಕ್ಕೆ ಸುಮಲತಾ-ಪ್ರಕಾಶ್ ಬೆಳವಾಡಿ ಸೂಕ್ತ ಆಯ್ಕೆ. ಜೋಕರ್ ಸ್ಮಗ್ಲರ್ ಆಗಿ ಸಾಧು ಕಾಣಿಸಿಕೊಂಡಾಗೆಲ್ಲ ನಗಿಸುತ್ತಾರೆ.

ಅಂದಹಾಗೆ ಕನಿಷ್ಕ ಭಾರತಕ್ಕೆ ಬಂದಾಗ ಆತನ ಬ್ಯಾಗ್​ನೊಳಕ್ಕೆ ಸೇರಿಕೊಳ್ಳುವ ಕಳ್ಳಸಾಗಣೆಯ ಡೈಮಂಡ್ ಆತನಿಗೆ ದೇಶದ್ರೋಹಿ ಎಂಬ ಅಪವಾದ ತರುತ್ತದೆ. ಅಪರಾಧಿ ನಾನಲ್ಲ ಎಂದು ಸಾಬೀತು ಪಡಿಸಲು ಅಸಲಿ ಡೈಮಂಡ್​ನ ಬೆನ್ನತ್ತಿ ಹೋಗುವ ಕನಿಷ್ಕನ ಹುಡುಕಾಟ ಪ್ರೇಕ್ಷಕರಿಗೆ ಅಸಲಿ ಇತಿಹಾಸವನ್ನು ತೆರೆದಿಡುತ್ತದೆ. ಇತಿಹಾಸದ ಪುಟದಲ್ಲಿ ದಾಖಲಾಗಿರುವುದಷ್ಟೇ ನಿಜವಲ್ಲ ಎಂಬುದನ್ನು ಅನಾವರಣಗೊಳಿಸುತ್ತದೆ. ಹೀಗೆ ಇತಿಹಾಸದ ಬಗ್ಗೆ ಹೊಸ ದೃಷ್ಟಿಕೋನ ಮೂಡಿಸುವ ನಿಟ್ಟಿನಲ್ಲಿ ಪಾತ್ರ ಹಾಗೂ ಸನ್ನಿವೇಶಗಳನ್ನು ಹೆಣೆಯುವಲ್ಲಿ ನಾಗತಿಹಳ್ಳಿ ಚಂದ್ರಶೇಖರ ಇಲ್ಲಿ ಗೆದ್ದಿದ್ದಾರೆ. ಅಲ್ಲಲ್ಲಿ ಕೆಲವು ರ್ತಾಕ ಲೋಪಗಳು ಕಾಣಿಸಿದರೂ ಚಿತ್ರದಲ್ಲಿನ ಪಾಸಿಟಿವ್ ಅಂಶಗಳ ಮುಂದೆ ಅವು ನಗಣ್ಯ ಎನಿಸುತ್ತವೆ. ಉಳಿದಂತೆ ಈ ಚಿತ್ರ ಚರಿತ್ರೆ ಬದಲಿಸೋ ಅವತಾರವೇ.

ಚಿತ್ರ: ಇಂಡಿಯಾ ವರ್ಸಸ್ ಇಂಗ್ಲೆಂಡ್ ನಿರ್ದೇಶನ: ನಾಗತಿಹಳ್ಳಿ ಚಂದ್ರಶೇಖರ ನಿರ್ವಣ: ವೈ.ಎನ್. ಶಂಕರೇಗೌಡ ಮತ್ತು ಮಿತ್ರರು ಪಾತ್ರವರ್ಗ: ವಸಿಷ್ಠ ಸಿಂಹ, ಮಾನ್ವಿತಾ ಕಾಮತ್,ಅನಂತನಾಗ್, ಸುಮಲತಾ, ಪ್ರಕಾಶ್ ಬೆಳವಾಡಿ, ಸಾಧು ಕೋಕಿಲ ಮತ್ತಿತರರು.

ರವಿಕಾಂತ ಕುಂದಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net