IAM GOD MOVIE REVIEW: ಪ್ರೀತಿ-ಪ್ರೇಮದ ಕಪಟತನ ಬಹಿರಂಗಪಡಿಸುವ ‘ಗಾಡ್’

god
Published on

ಚಿತ್ರ: ಐ ಆ್ಯಮ್ ಗಾಡ್

ನಿರ್ದೇಶನ: ರವಿ ಗೌಡ

ತಾರಾಗಣ: ರವಿ ಗೌಡ, ವಿಜೇತಾ ಪಾರೀಕ್, ರವಿಶಂಕರ್, ಅವಿನಾಶ್, ಅರುಣಾ ಬಾಲರಾಜ್ ಮತ್ತಿತರರು.

ಶಿವ ಸ್ಥಾವರಮಠ

‘ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ’- ‘ಅಂಜದ ಗಂಡು’ ರವಿಚಂದ್ರನ್ ಪ್ರೀತಿಯನ್ನು ಹೀಗೆ ನಿರೂಪಿಸಿದ್ದರು. ಈಗ ನಟ, ನಿರ್ದೇಶಕ ರವಿಗೌಡ ತಮ್ಮದೇ ಸ್ಟೈಲ್‌ನಲ್ಲಿ ‘ಪ್ರೀತಿಯಲ್ಲಿ ಇರೋ ದುಃಖ ಗೊತ್ತೇ ಇರಲಿಲ್ಲ’ ಎಂಬಂತೆ ‘ಐ ಆ್ಯಮ್ ಗಾಡ್’ ಮೂಲಕ ಪ್ರೀತಿಯ ಇನ್ನೊಂದು ಮುಖವನ್ನು ತೋರಿಸಿದ್ದಾರೆ. ಪ್ರೀತಿ, ಪ್ರೇಮ ಹೆಸರಿನಲ್ಲಿ ನಡೆಯುವ ಕಪಟತನ, ವಂಚನೆಯನ್ನು ಈ ಕಥೆ ಬಹಿರಂಗಪಡಿಸುತ್ತದೆ. ದೇವ (ರವಿ ಗೌಡ) ಒರಟ. ಕಾಲೇಜಿನಲ್ಲಿ ಜಗಳಗಳ ಮೂಲಕವೇ ಇಡೀ ಆಡಳಿತ ಮಂಡಳಿಗೆ ತಲೆನೋವಾಗಿರುವ ವ್ಯಕ್ತಿ. ಇನ್ನು ಮನೆಗೆ ಕುಡಿದು ಬಂದರೂ ತಂದೆ- ತಾಯಿಗೆ ಸುಳ್ಳು ಹೇಳದ ಮಗ. ಇಂತಹ ಒರಟನಿಗೆ ಅದೇ ಕಾಲೇಜಿನ ಹುಡುಗಿ ಬಿಂದು (ವಿಜೇತಾ) ಒಲವಿನ ಮುಲಾಮು ಹಚ್ಚುತ್ತಾಳೆ. ಇಬ್ಬರು ಪ್ರೀತಿಯಲ್ಲಿ ಬಿದ್ದು, ಕಾಲೇಜ್ ಕ್ಯಾಂಪಸ್‌ನಲ್ಲಿಯೇ ಮುಜುಗರವಿಲ್ಲದೆ ರೊಮ್ಯಾನ್ಸ್ ಮಾಡುತ್ತಾರೆ. ಇಷ್ಟೆಲ್ಲಾ ನಡೆಯುತ್ತಿರುವಾಗಲೇ ಇಬ್ಬರ ನಡುವೆ ವಿರಸ ಮೂಡುತ್ತದೆ. ಇಬ್ಬರು ಬೇರೆಯಾಗಬೇಕು ಎನ್ನುವಾಗಲೇ ಬಿಂದು ತನ್ನ ಹಳೆಯ ಬಾಯ್ ್ರೆಂಡ್ ಜತೆ ಮದುವೆಗೆ ಸಿದ್ಧವಾಗುತ್ತಾಳೆ. ಅದು ದೇವನಿಗೆ ಹೆಚ್ಚು ಕೋಪ ತರಿಸಿ, ಮದುವೆ ಮನೆಗೆ ನುಗ್ಗಿ, ಮನೆಯವರನ್ನು ಒಪ್ಪಿಸಿ ಮೆಚ್ಚಿದ ಹುಡುಗಿ ಬಿಂದುಳನ್ನು ಮದುವೆಯಾಗುತ್ತಾನೆ. ಈ ಅಮರ ಪ್ರೇಮಿಗಳು ಇಷ್ಟಕ್ಕೆ ಒಂದಾಗಿದ್ದರೆ ‘ಐ ಆ್ಯಮ್ ಗಾಡ್’ ಸಾಮಾನ್ಯ ಕಥೆ ಎನಿಸಿಬಿಡುತ್ತಿತ್ತು. ‘ಸಿನಿಮಾ ಇನ್ಮುಂದೆ ಸ್ಮಾರ್ಟ್’ ಎಂಬಂತೆ ಅಲ್ಲಿಂದ ಕಥೆ ಇನ್ನೊಂದು ಹಾದಿ ಹಿಡಿಯುತ್ತದೆ. ದೇವನನ್ನು ಬಿಂದು ಬಿಟ್ಟು ಹೋಗುತ್ತಾಳೆ. ತಂದೆ-ತಾಯಿ ಆತ್ಮಹತ್ಮೆ ಮಾಡಿಕೊಳ್ಳುತ್ತಾರೆ. ಅದಕ್ಕೆ ಕಾರಣವೇನು? ತಿಳಿಯಲು ‘ಐ ಆ್ಯಮ್ ಗಾಡ್’ ವೀಕ್ಷಿಸಬೇಕು.

ನಾನ್ ಲೀನಿಯರ್ ಶೈಲಿಯಲ್ಲಿ ‘ಐ ಆ್ಯಮ್ ಗಾಡ್’ ಕಥೆ ನಿರೂಪಿಸಿದ್ದಾರೆ ನಿರ್ದೇಶಕ ರವಿ ಗೌಡ. ಒಂದೆಡೆ ಕಾಲೇಜು, ಫ್ಯಾಮಿಲಿ ಹಾಗೂ ಪ್ರೀತಿ- ಪ್ರೇಮ ಎಂದು ಸಾಗುತ್ತಿದ್ದರೆ, ಇನ್ನೊಂದು ಟ್ರ್ಯಾಕ್‌ನಲ್ಲಿ ಮಹಿಳೆಯರ ಸರಣಿ ಕೊಲೆ, ತನಿಖೆ, ‘ಐ ಆ್ಯಮ್ ಗಾಡ್’ ಎಂದು ಹೇಳಿಕೊಳ್ಳುವ ಮುಸುಕುಧಾರಿ ಅಟ್ಟಹಾಸ ನಡೆಯುತ್ತಿರುತ್ತದೆ. ಈ ಎರಡನ್ನು ಒಂದು ಫ್ರೇಮ್‌ನಡಿಯಲ್ಲಿ ತರುವ ಸಾಹಸದಲ್ಲಿ ನಿರ್ದೇಶಕರು ಯಶ ಕಂಡಿದ್ದಾರೆ. ಸುಳಿವು ಸಿಗದಂತೆ ಕಥೆಯನ್ನು ನಿರೂಪಿಸಿದ್ದಾರೆ. ಹದವಾದ ಪ್ರೀತಿ, ಇಷ್ಟವಾಗುವ ಸಾಂಗ್, ಕಥೆಯ ಕೌತುಕ, ಖಡಕ್ ಡೈಲಾಗ್ ಮೂಲಕ ಎಲ್ಲಿಯೂ ಬೋರ್ ಹೊಡೆಯದಂತೆ ಸಿನಿಮಾ ನೋಡಿಸಿಕೊಳ್ಳುತ್ತದೆ. ನಿರ್ದೇಶಕರು ಉಪೇಂದ್ರ ಗರಡಿಯಲ್ಲಿ ಪಳಗಿದ್ದು, ಅವರ ಛಾಯೆ ಈ ಕಥೆಯಲ್ಲಿ ಕಾಣಬಹುದು. ನಿರ್ದೇಶನದ ಜತೆಗೆ ರವಿ ಗೌಡ ನಟನೆಯಲ್ಲೂ ಮಿಂಚಿದ್ದಾರೆ. ಕ್ಲೈಮ್ಯಾಕ್ಸ್‌ನ ಕೆಲವು ದೃಶ್ಯಗಳಲ್ಲಿ ನಟನೆಗೆ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಾರೆ. ನಟಿ ವಿಜೇತಾ ಪಾರೀಕ್ ತುಂಬಾ ಚೆಂದವಾಗಿ ಕಾಣಿಸುವುದರ ಜತೆಗೆ ಕ್ಯೂಟ್ ಆಗಿ ನಟಿಸಿದ್ದಾರೆ. ರವಿಶಂಕರ್ ಖಡಕ್ ತನಿಖಾಧಿಕಾರಿಯಾಗಿ ಗಮನ ಸೆಳೆಯುತ್ತಾರೆ.

ರೇಟಿಂಗ್: 3.5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net