ನಾನ್ಯಾವತ್ತೂ ಕನ್ನಡದ ಆಸಾಮಿ...

Puneeth
Published on

ಬೆಂಗಳೂರು: "ಹಿಡ್ಕೊಂಡು ಹೇಳುವೆ ಅನ್ನದ ತುತ್ತು, ಕನ್ನಡ ತಾಯಿಗೆ ನನ್ನ ನಿಯತ್ತು ...' ಪುನೀತ್​ ಈ ಹಾಡು ಹೇಳಿದ್ದು, ಸಾವಿರಾರು ಜನರ ಮಧ್ಯೆ ಸಂಭ್ರಮಿಸಿದ್ದು ಬರೀ ಬಿಲ್ಡಪ್​ಗೋಸ್ಕರವೇನಲ್ಲ. ಅದನ್ನು ಅಕ್ಷರಶಃ ಕಾರ್ಯರೂಪಕ್ಕೆ ತಂದವರು ಅವರು. "ನನಗ್ಯಾವ ಅಡ್ರೆಸ್​ ಬೇಕಾಗಿಲ್ಲ, ನಾನ್ಯಾವತ್ತೂ ಕನ್ನಡದ ಆಸಾಮಿ ...' ಎಂದ ಅವರು ಅಕ್ಷರಶಃ ತಮ್ಮ ಮಾತನ್ನು ಉಳಿಸಿಕೊಂಡರು. ಕೊನೆಯವರೆಗೂ ಕನ್ನಡದ ಆಸಾಮಿಯಾಗಿಯೇ ಬದುಕಿದರು.

ಪುನೀತ್​ ಈ ವಿಷಯದಲ್ಲಿ ತಂದೆಗೆ ತಕ್ಕ ಮಗ. ಡಾ. ರಾಜಕುಮಾರ್​ ಕೊನೆಯವರೆಗೂ ಹೇಗೆ ಕನ್ನಡವನ್ನೇ ಉಸಿರಾಡಿದರೋ, ಕನ್ನಡ ಚಿತ್ರಗಳಲ್ಲೇ ನಟಿಸಿದರೋ, ಅದೇ ದಾರಿಯಲ್ಲಿ ಪುನೀತ್​ ಸಹ ಸಾಗಿದರು. ಪುನೀತ್​ ಇದುವರೆಗೂ 30ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಪೈಕಿ ಕೆಲವು ಚಿತ್ರಗಳು ಬೇರೆ ಭಾಷೆಗಳಿಗೆ ಡಬ್​ ಆಗಿದ್ದು ಬಿಟ್ಟರೆ, ಅವರೆಂದೂ ಬೇರೆ ಭಾಷೆಗಳಿಗೆ ಹೋದವರಲ್ಲ. ಅವರಿಗೆ ಬೇರೆ ಚಿತ್ರರಂಗಗಳಲ್ಲಿ ಒಳ್ಳೆಯ ಪರಿಚಯವಿತ್ತು, ಅಲ್ಲಿನ ಸ್ಟಾರ್​ ನಟರ ಒಡನಾಟವಿತ್ತು, ಅವರು ಒಪ್ಪಿದ್ದರೆ ಅವಕಾಶಗಳು ಸಿಗುತ್ತಿತ್ತು. ಆದರೆ, ಪುನೀತ್​ ಮಾತ್ರ ಆ ಬಗ್ಗೆ ಎಂದೂ ಯೋಚಿಸಿದವರಲ್ಲ. ಇನ್ನು, ಕನ್ನಡದ ವಿಷಯವಾಗಿ ಪುನೀತ್​ ಸುಮ್ಮನೆ ಪ್ರಚಾರ ತೆಗೆದುಕೊಂಡವರಲ್ಲ. ಸನ್ನಿವೇಶ ಸಂದರ್ಭಕ್ಕೆ ತಕ್ಕಂತೆ ಕನ್ನಡದ ಕುರಿತಾದ ನಾಡು&ನುಡಿಯ ಕುರಿತಾದ ಸಂಭಾಷಣೆಗಳನ್ನು ಕೆಲವು ಚಿತ್ರಗಳಲ್ಲಿ ಹೇಳಿದ್ದು ಬಿಟ್ಟರೆ, ಮಿಕ್ಕಂತೆ ಪ್ರಚಾರಕ್ಕೆಂದು ಎಂದೂ ಅವರು ಕನ್ನಡವನ್ನು ಬಳಸಿಕೊಳ್ಳಲಿಲ್ಲ. ಇನ್ನು ಹಾಡುಗಳಲ್ಲೂ ಅಷ್ಟೇ. ಅವರ ಚಿತ್ರಗಳಲ್ಲಿ ಕನ್ನಡದ ಕುರಿತಾದ ಹಾಡು ಎಂದು ಸಿಗುವುದು ಬಹಳ ಕಡಿಮೆ.

"ಮೌರ್ಯ' ಚಿತ್ರದ "ಸಿಂಪಲ್ಲಾಗ್​ ಹೇಳ್ತೀನಿ ಕೇಳೇ ಕನ್ನಡ ಭಾಷೆ ...', "ದೊಡ್ಮನೆ ಹುಡ್ಗ' ಚಿತ್ರದ "ಅಭಿಮಾನಿಗಳೇ ನಮ್ಮನೆ ದೇವು ನಿಮ್ಮಿಂದಲೇ ನಮ್ಮದೆ ಉಸಿರು ...' ಸೇರಿದಂತೆ ಒಂದೆರಡು ಹಾಡುಗಳನ್ನು ಬಿಟ್ಟರೆ, ಮಿಕ್ಕಂತೆ ಪುನೀತ್​ ಚಿತ್ರಗಳಲ್ಲಿ "ಕನ್ನಡ' ಹಾಡುಗಳನ್ನು ಸುಮ್ಮನೆ ತುರುಕಿಲ್ಲ ಎಂದು ಗಮನಿಸಬೇಕಾದ ವಿಷಯ. ಕೆಲವರು ಆಡಿ ತೋರಿಸಿದರೆ, ಪುನೀತ್​ ಮಾತ್ರ ಮಾಡಿ ತೋರಿಸಿದರು. "ದೊಡ್ಮನೆ ಹುಡ್ಗ' ಅಂದರೆ ಸುಮ್ಮನೆ ಅಲ್ಲ ಎನ್ನುವುದು ಇದಕ್ಕೇ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net