ವಿಜಯವಾಣಿ ಸಿನಿಮಾ ವಿಮರ್ಶೆ: ಹೆಣಗಾಟದಲ್ಲಿಯೇ ಮುಗಿದ ಹುಟ್ಟುಹಬ್ಬ

Hutdabba
Published on

| ಮಂಜು ಕೊಟಗುಣಸಿ

ಕೊಲೆಯನ್ನು ಕೇಂದ್ರವಾಗಿಸಿಕೊಂಡ ಬಹುತೇಕ ಚಿತ್ರಗಳು ಮರ್ಡರ್ ಮಿಸ್ಟರಿ, ಥ್ರಿಲ್ಲರ್ ಕಥಾನಕಗಳಾಗಿ ಆ ಕ್ಷಣಕ್ಕೆ ರಂಜಿಸಿ ಕಣ್ಮರೆಯಾಗುವುದು ಸಾಮಾನ್ಯ ಸಂಗತಿ. ಅದೇ ರೀತಿ ‘ಹುಟ್ಟುಹಬ್ಬದ ಶುಭಾಶಯಗಳು’ ಸಿನಿಮಾ ಹತ್ತರಲ್ಲಿ ಹನ್ನೊಂದಾಗಿದೆ. ಥ್ರಿಲ್ಲರ್ ಶೈಲಿಯ ಸಿನಿಮಾ ಎಂದು ಅನಿಸಿಕೊಳ್ಳುವ ಎಲ್ಲ ಲಕ್ಷಣಗಳಿದ್ದರೂ, ಅದೇಕೋ ನೋಡುಗನ ಮನಸ್ಸಿನ ಆಳಕ್ಕಿಳಿಯುವಲ್ಲಿ ಸಿನಿಮಾ ಕೊಂಚ ತಡವರಿಸಿದೆ. ಹಾಗಾಗಿ, ಈ ‘ಹುಟ್ಟು’ ಹಬ್ಬದಂತೆ ಕಾಣಿಸುವುದಿಲ್ಲ!

ಮೇಲೆ ಹೇಳಿದಂತೆ ಇದೊಂದು ಕೊಲೆ ಹಿನ್ನೆಲೆಯಲ್ಲಿ ಸಾಗುವ ಸಿನಿಮಾ. ಸ್ನೇಹಿತನ ಹುಟ್ಟುಹಬ್ಬ ಆಚರಿಸಲು ಹಳೆಯ ಸ್ನೇಹಿತರೆಲ್ಲ ಒಂದೆಡೆ ಸೇರುತ್ತಾರೆ. ಚಿತ್ರ

ಆರಂಭವಾದ ಹತ್ತೇ ನಿಮಿಷಕ್ಕೆ ಕೊಲೆಯೂ ನಡೆಯುತ್ತದೆ. ಅದರ ಹಿಂದಿನ ಮಾಸ್ಟರ್​ವೆುೖಂಡ್ ಯಾರೆಂಬುದೂ ಪ್ರೇಕ್ಷಕರಿಗೆ ಗೊತ್ತಾಗುತ್ತದೆ. ಹಾಗಾಗಿ, ಆ ರೋಚಕತೆಯ
ಓಟ ಆರಂಭವಾಯ್ತು ಎನ್ನುವಷ್ಟರಲ್ಲಿಯೇ ಪೂರ್ಣವಿರಾಮ ಬೀಳುತ್ತದೆ. ಬಳಿಕ ಕೊಲೆಯಾದ ವ್ಯಕ್ತಿಯ ಮೃತ ದೇಹವನ್ನು ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಸಾಗಿಸುವ ‘ಹೆಣಗಾಟ’ದ ಪ್ರಹಸನದಲ್ಲಿಯೇ ಇಡೀ ಸಿನಿಮಾ ಅಂತ್ಯ ಕಾಣುತ್ತದೆ. ಹಾಗಾದರೆ, ಕೊಲೆ ನಡೆದಿದ್ದೇಕೆ? ಅಪರಾಧಿ ಸಿಕ್ಕಿಬೀಳ್ತಾನಾ? ಹೀಗೊಂದಿಷ್ಟು ಕುತೂಹಲಗಳನ್ನು ನಿರ್ದೇಶಕರು ಕ್ಲೈಮ್ಯಾಕ್ಸ್ ವರೆಗೂ ತಳ್ಳಿಕೊಂಡು ಬಂದಿದ್ದಾರೆ. ಈ ಚಿತ್ರದ ದೊಡ್ಡ ಮೈನಸ್ ಪಾಯಿಂಟ್ ಎಂದರೆ ತರ್ಕ ಮಿಸ್ ಆಗಿರುವುದು. ಒಂದು ಥ್ರಿಲ್ಲರ್ ಕಥೆಯಲ್ಲಿ ಭಯ, ಆತಂಕ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ, ಇದ್ಯಾವುದೂ ಇಲ್ಲದೆ ಚಿತ್ರ ನೀರಸವಾಗಿ ಸಾಗುತ್ತಿರುತ್ತದೆ. ಪ್ರೇಕ್ಷಕನನ್ನು ಸೀಟಿನ ತುದಿಗೆ ಕೂರಿಸಬೇಕಿದ್ದ ನಿರ್ದೇಶಕರು, ಈ ವಿಷಯದಲ್ಲಿ ಸೋತಿದ್ದು, ಕೊಲೆಗಾರನ ಕಳ್ಳಾಟವನ್ನೇ ಇಡೀ ಚಿತ್ರದಲ್ಲಿ ಎತ್ತಿ ಹಿಡಿದಿದ್ದಾರೆ. ಅರ್ಜುನ್ ಪಾತ್ರದಲ್ಲಿ ಎದುರಾಗುವ ದಿಗಂತ್, ಒಂದೇ ಶೇಡ್​ನ ಎರಡು ಮುಖಗಳಾಗಿದ್ದಾರೆ. ಸ್ನೇಹಿತನಾಗಿ ಮಡೇನೂರ್ ಮನು ತೆರೆಮೇಲೆ ‘ಓವರ್’ ಸ್ಪೇಸ್ ಗಿಟ್ಟಿಸಿಕೊಂಡಿದ್ದಾರೆ. ಕವಿತಾ ಗೌಡ, ಶನಾಯಾ ಸೇರಿ ಹಲವರಿಗೆ ‘ಹುಟ್ಟುಹಬ್ಬ’ದಲ್ಲಿ ಹೆಚ್ಚೇನೂ ಕೆಲಸವಿಲ್ಲ. ಕಾಮಿಡಿಗೆ ಒತ್ತು ನೀಡಿದ್ದರೂ, ಸಹಜ ನಗು ಉಕ್ಕುವುದಿಲ್ಲ. ಒಂದೇ ಹಾಡು ತೇಲಿಬಂದರೂ ಅದು ನೆನಪಿನಲ್ಲಿ ಉಳಿಯುವುದಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net