

ಬೆಂಗಳೂರು: 'ನಾನೊಬ್ನೇ ಒಳ್ಳೇವ್ನು' ಖ್ಯಾತಿಯ ವಿಜಯ್ ಮಹೇಶ್ ಅಭಿನಯದ 'ಜಸ್ಟ್ ಮಿಸ್' ಎಂಬ ಚಿತ್ರವೊಂದು ಕಳೆದ ತಿಂಗಳಷ್ಟೇ ಸೆಟ್ಟೇರಿತ್ತು. ಈಗ ಇನ್ನೂ ಒಂದು ಚಿತ್ರ ಗುರುವಾರವಷ್ಟೇ ಅಧಿಕೃತವಾಗಿ ಪ್ರಾರಂಭವಾಗಿದೆ. ಅದೇ 'ಹುಷಾರ್'.
ಕಳೆದ ಮೂರು ದಶಕಗಳಿಂದ ಸಿನಿಮಾ, ಕಿರುತೆರೆ ಸೇರಿ ಬಣ್ಣದ ಲೋಕದ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡಿದ ಅನುಭವ ಇರುವ ಸತೀಶ್ ರಾಜ್ ಇದೀಗ 'ಹುಷಾರ್' ಸಿನಿಮಾ ಮೂಲಕ ಆಗಮಿಸುತ್ತಿದ್ದಾರೆ. ಈ ಚಿತ್ರದ ಮುಹೂರ್ತಕ್ಕೆ, ಹಿರಿಯ ನಿರ್ದೇಶಕ ಭಗವಾನ್ ಮತ್ತು ಎನ್.ಎಂ ಸುರೇಶ್ ಆಗಮಿಸಿ ಕ್ಲಾಪ್ ಮಾಡಿ ಹೊಸಬರ ಈ ನೂತನ ಪ್ರಯತ್ನಕ್ಕೆ ಶುಭ ಹಾರೈಸಿದರು.
ಇದನ್ನೂ ಓದಿ: ನಾಪತ್ತೆಯಾದ ದೀಪಿಕಾ ಪಡುಕೋಣೆ ಮ್ಯಾನೇಜರ್ ಕರಿಷ್ಮಾ …
ತಮ್ಮ ಹೊಸ ಸಿನಿಮಾದ ಕುರಿತು ಮಾತನಾಡುವ ಸತೀಶ್ ರಾಜ್, ‘ಸಿನಿಮಾ, ಕಿರುತೆರೆ, ನಾಟಕದಲ್ಲಿ ನಟಿಸಿದ್ದೇನೆ. ಇದೀಗ ನಿರ್ದೇಶನ ಮತ್ತು ನಿರ್ಮಾಣಕ್ಕಿಳಿದಿದ್ದೇನೆ. ಸತೀಶ್ ರಾಜ್ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ಮೂಡಿಬರಲಿದೆ. ಚಿತ್ರದ ಶೀರ್ಷಿಕೆಯೇ ಹೇಳುವಂತೆ ಸಾಮಾಜಿಕ ಕಳಕಳಿಯ ಹಿನ್ನೆಲೆಯಲ್ಲಿ ಸಿನಿಮಾ ಸಿದ್ಧವಾಗಲಿದೆ. ಹಳ್ಳಿಗಾಡಿನಲ್ಲಿ ನಡೆಯುವ ಕಥೆ ಇದಾಗಿದ್ದು, ಸಾಮಾಜಿಕ ಜವಾಬ್ದಾರಿಯುಳ್ಳ ಯುವಕ ಹೇಗೆ ಬದಲಾವಣೆಗೆ ನಾಂದಿ ಹಾಡುತ್ತಾನೆ ಎಂಬುದೇ ಹುಷಾರು ಚಿತ್ರ ಒಂದೆಳೆ’ ಎಂದು ಮಾಹಿತಿ ನೀಡುತ್ತಾರೆ.
ವಿಜಯ್ ಮಹೇಶ್ ಇದುವರೆಗೂ ಗ್ರಾಮೀಣ ಸೊಗಡಿನ ಚಿತ್ರದಲ್ಲಿ ನಟಿಸಿರಲಿಲ್ಲವಂತೆ. ಅದು ಈ ಚಿತ್ರದಲ್ಲಿ ಸಾಧ್ಯವಾಗಿದೆ ಎನ್ನುವ ಅವರು, ‘ಇಲ್ಲಿಯವರೆಗೂ ಎಲ್ಲ ಬಗೆಯ ಸಿನಿಮಾಗಳಲ್ಲಿ ನಟಿಸಿದ್ದೇನೆ. ಗ್ರಾಮೀಣ ಸೊಗಡಿನ ಸಿನಿಮಾದಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ಆ ಅವಕಾಶ ಹುಷಾರ್ ಚಿತ್ರದ ಮೂಲಕ ಸಿಕ್ಕಿದೆ. ಕಾಮಿಡಿ ಎಳೆಯಿಂದ ಶುರುವಾಗುವ ಕಥೆ, ನಿಧಾನಕ್ಕೆ ಹಾರರ್ ಅವತಾರ ತಾಳುತ್ತದೆ. ಒಂದಾದ ಮೇಲೋಂದರಂತೆ ಟ್ವಿಸ್ಟ್ಗಳು ಎದುರಾಗುತ್ತವೆ. ಕಮರ್ಷಿಯಲ್ ಅಂಶಗಳೂ ಸಿನಿಮಾದಲ್ಲಿರಲಿವೆ’ ಎಂಬುದು ವಿಜಯ್ ಮಹೇಶ್ ಮಾತು.
ಇದನ್ನೂ ಓದಿ: ಬಾಲಿವುಡ್ ಚಿತ್ರದ ಹಾಡಿಗೆ ಧ್ವನಿಯಾದ ತಮಿಳು ನಟ ಧನುಷ್
ಈ ಚಿತ್ರದಲ್ಲಿ ವಿಜಯ್ ಮಹೇಶ್ಗೆ ಸುಲಕ್ಷಾ ಕೈರ ಮತ್ತು ರಚನಾ ಮಲ್ನಾಡ್ ಎಂಬ ಇಬ್ಬರು ನಾಯಕಿಯರಿದ್ದಾರೆ. 'ಸೇಡು', 'ಜಲ್ಲಿಕಟ್ಟು', 'ಅಂದುಕೊಂಡಂತಲ್ಲ ಜೀವನ' ಚಿತ್ರಗಳಲ್ಲಿ ನಟಿಸಿರುವ ಸುಲಕ್ಷಾ ಕೈರ ಈ ಚಿತ್ರದಲ್ಲಿ ಸಾಂಪ್ರದಾಯಿಕ ಹುಡುಗಿಯಾಗಿ ಕಾಣಿಸಿಕೊಂಡರೆ, ಮತ್ತೋರ್ವ ನಟಿ ರಚನಾ ಮಲ್ನಾಡ್ ಕೊಂಚ ಬೋಲ್ಡ್ ಅವತಾರದಲ್ಲಿಯೇ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇದಲ್ಲದೆ, ಲಯ ಕೋಕಿಲ, ಗಣೇಶ್ ರಾವ್, ಪಿ. ಮೂರ್ತಿ, ಸತೀಶ್ ರಾಜ್, ಪುಷ್ಪ ಸ್ವಾಮಿ, ರತ್ನಮಾಲ, ಮೂಗು ಸುರೇಶ್, ಪ್ರಶಾಂತ್ ನಟನ, ವೆಂಕಟೇಶ್ ಹೇರೊಹಳ್ಳಿ, ವಸಂತ್ ಕುಮಾರ್ ಸೇರಿ ಮುಂತಾದವರು ಪಾತ್ರವರ್ಗದಲ್ಲಿದ್ದಾರೆ. ನವೆಂಬರ್ ಎರಡನೇ ವಾರದಲ್ಲಿ ಶೃಂಗೇರಿ, ಹೊರನಾಡು, ಕುದುರೆಮುಖ ಸೇರಿ ಹಲವೆಡೆ 25 ದಿನ ಚಿತ್ರೀಕರಣ ನಡೆಯಲಿದೆ.