

ಬೆಂಗಳೂರು: ‘ಹಂಬಲ್ ಪೊಲಿಟಿಷಿಯನ್ ನೊಗ್ರಾಜ್’ ಚಿತ್ರದ ಮೂಲಕ ಹೊಟ್ಟೆ ಹುಣ್ಣಾಗುವಂತೆ ನಗಿಸಿದ್ದ ದಾನಿಶ್ ಸೇಠ್, ಸದ್ಯ ನೊಗ್ರಾಜನ ಗುಂಗಲ್ಲೇ ಇದ್ದಾರೆ. ಅಂದರೆ, ಇತ್ತೀಚೆಗಷ್ಟೇ ‘ಹಂಬಲ್ ಪೊಲಿಟಿಷಿಯನ್ ನೊಗ್ರಾಜ್’ ಸಿನಿಮಾದ ಮುಂದುವರಿದ ಭಾಗವೆಂಬಂತೆ ವೆಬ್ ಸೀರಿಸ್ ಮಾಡಿಕೊಳ್ಳುವುದಾಗಿ ತಂಡ ಹೇಳಿಕೊಂಡಿತ್ತು. ಅದರಂತೆ ಆ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ದೇವಸ್ಥಾನವೊಂದರಲ್ಲಿ ಸರಳವಾಗಿ ಮುಹೂರ್ತ ಮುಗಿಸಿಕೊಂಡು, ಶೂಟಿಂಗ್ಗೂ ಚಾಲನೆ ನೀಡಿದ್ದಾರೆ ನಿರ್ದೇಶಕ ಸಾದ್ ಖಾನ್.
‘...ನೊಗ್ರಾಜ್’ಗೆ ಆಕ್ಷನ್-ಕಟ್ ಹೇಳಿದ್ದ ಸಾದ್ ಅವರೇ ಈ ವೆಬ್ ಸೀರಿಸ್ ನಿರ್ದೇಶಕರು. 10 ಎಪಿಸೋಡ್ನ ಈ ವೆಬ್ ಸೀರಿಸ್ 38 ದಿನಗಳಲ್ಲಿ ಚಿತ್ರೀಕರಿಸುವ ಯೋಜನೆ ಇದೆ. ಪ್ರತಿ ಎಪಿಸೋಡ್ ಕನಿಷ್ಠ 21 ನಿಮಿಷಗಳದ್ದಾಗಿರುತ್ತದೆ. ಮೈಸೂರಿನಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ’ ಎಂದು ಮಾಹಿತಿ ಹಂಚಿಕೊಂಡರು ನಟ ದಾನಿಶ್ ಸೇಠ್. ‘..ನೊಗ್ರಾಜ್’ ಚಿತ್ರಕ್ಕೆ ನೆಟ್ಫ್ಲಿಕ್ಸ್, ಅಮೆಜಾನ್ ಪ್ರೖೆಮ್ ಮೂಲಕ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಇಂದಿನ ಯುವಪೀಳಿಗೆ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುವುದು ಕಡಿಮೆ. ಆನ್ಲೈನ್ನಲ್ಲೇ ಹೆಚ್ಚು ಸಕ್ರಿಯರಾಗಿರುತ್ತಾರೆ. ಹೀಗಾಗಿ ಇವರನ್ನು ಗಮನದಲ್ಲಿಟ್ಟುಕೊಂಡು ವೆಬ್ ಸೀರಿಸ್ ಮಾಡುತ್ತಿದ್ದೇವೆ. ಅಲ್ಲದೆ, ಸಿನಿಮಾ ಅವಧಿ ಕಡಿಮೆ ಆಗಿದ್ದರಿಂದ ಪಾತ್ರವನ್ನು ಹೆಚ್ಚು ಪ್ರಯೋಗಕ್ಕೆ ಒಳಪಡಿಸುವ ಅವಕಾಶ ಇರುವುದಿಲ್ಲ. ಹೀಗಾಗಿ ವೆಬ್ ಸೀರಿಸ್ಗೆ ಉತ್ಸುಕತೆ ತೋರಿದ್ದೇವೆ’ ಎಂಬುದು ದಾನಿಶ್ ಮಾತು. ಮುಂಬೈನ ಅಪ್ಲಾಜ್ ಎಂಟರ್ಟೇನ್ವೆುಂಟ್ ಕಂಪನಿಯು ಈ ವೆಬ್ ಸೀರಿಸ್ ನಿರ್ಮಾಣ ಮಾಡುತ್ತಿದ್ದು, ಈ ಹಿಂದೆ ‘ಮೈಂಡ್ ಮಲ್ಹೋತ್ರಾ’, ‘ದಿ ಆಫೀಸ್’ ವೆಬ್ ಸೀರಿಸ್ಗಳಿಗೂ ಇದು ಬಂಡವಾಳ ಹೂಡಿತ್ತು.
ಕಾಪೋರೇಟರ್ ನಾಗರಾಜ್ ಶಾಸಕ ಆಗುವುದಕ್ಕೆ ಏನೆಲ್ಲ ಸಾಹಸ ಮಾಡುತ್ತಾನೆ ಎಂಬುದನ್ನು ಹಾಸ್ಯಮಯವಾಗಿ ತಿಳಿಸುವ ಕಥೆಯನ್ನು ‘..ನೊಗ್ರಾಜ್’ ಚಿತ್ರ ಹೊಂದಿತ್ತು. ಈ ವೆಬ್ ಸೀರಿಸ್ ಕೂಡ ರಾಜಕೀಯ ವಿಷಯ ಕುರಿತ ಕಥಾವಸ್ತು ಒಳಗೊಂಡಿದ್ದು, ಮನರಂಜನೆ ನೀಡಲಿದೆ. ನಿರ್ದೇಶಕರ ಜತೆ ಸೇರಿ ನಾನೇ ಕಥೆ ಬರೆದಿದ್ದೇನೆ. | ದಾನಿಶ್ ಸೇಠ್ ನಟ