

ಒಂದು ಸಿನಿಮಾ ಯಶಸ್ಸು ಕಂಡರೆ ಸಾಕು ನಟ, ನಟಿಯರು ಹೊಸ ಚಿತ್ರಕ್ಕೆ ಸಂಭಾವನೆ ಹೆಚ್ಚಿಸಿಕೊಳ್ಳುವುದು ಸಾಮಾನ್ಯ. ಹಾಗೆಯೇ ಅತಿಥಿ ಪಾತ್ರ ಹಾಗೂ ವಿಶೇಷ ಸಾಂಗ್ ನೃತ್ಯಕ್ಕೆ ಕೋಟಿ ಕೋಟಿ ರೂಪಾಯಿ ಸಂಭಾವನೆ ನಿರೀಕ್ಷಿಸುತ್ತಾರೆ. ಆದರೆ, ಇಲ್ಲೊಬ್ಬ ನಟಿ ಯಶಸ್ಸಿನ ಉತ್ತುಂಗದಲ್ಲಿರುವಾಗಲೇ, ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬಿಜಿಯಾಗಿರುವ ಮಧ್ಯೆಯೇ ಹಿಂದಿ ಸಿನಿಮಾದ ವಿಶೇಷ ಹಾಡಿನ ನೃತ್ಯಕ್ಕೆ ಒಂದು ರೂಪಾಯಿ ಕೂಡ ಸಂಭಾವನೆ ಪಡೆದಿಲ್ಲವಂತೆ. ‘ಗ್ಯಾಂಗ್ಸ್ ಆ್ ವಸ್ಸೇಪುರ್’ ಸರಣಿ, ‘ಗಂಗೂಬಾಯಿ ಕಥಿಯಾವಾಡಿ’ ಸೇರಿ 20ಕ್ಕೂ ಅಧಿಕ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಹುಮಾ ಖುರೇಷಿ,ರಾಜಕುಮಾರ್ ರಾವ್ ನಾಯಕನಾಗಿರುವ ‘ಮಾಲಿಕ್’ ಚಿತ್ರದಲ್ಲಿ ‘ದಿಲ್ ಥಾಮ್ ಕೆ’ ಎಂಬ ವಿಶೇಷ ಹಾಡಿಗೆ ನೃತ್ಯ ಮಾಡಿದ್ದಾರೆ. ಅದಕ್ಕೆ ಸಂಭಾವನೆ ಪಡೆಯದೇ ಗೆಳೆತನ ನಿಭಾಯಿಸಿದ್ದಾರಂತೆ. ಈ ಬಗ್ಗೆ ಖುದ್ದು ಹೇಳಿಕೊಂಡಿರುವ ಹುಮಾ, ‘ಹೌದು, ಸ್ನೇಹಿತರಿಂದ ಹಣ ಪಡೆಯವುದು ಎಷ್ಟು ಸರಿ? ಅದು ಬೇರೆ ಕೇವಲ ಎರಡು ದಿನಗಳ ಶೂಟಿಂಗ್ ಅಷ್ಟೇ. ಅದಕ್ಕೆ ಸಂಭಾವನೆ ಪಡೆಯುವ ಅಗತ್ಯವಿಲ್ಲ ಅಂತ ಅನ್ನಿಸಿತು. ದೋಸ್ತಿಗಾಗಿ ನಾವು ಅಷ್ಟೂ ಮಾಡದಿದ್ದರೆ ಹೇಗೆ?’ ಎಂದು ಉತ್ತರಿಸಿದ್ದಾರೆ. ಹಾಗೆಯೇ ಈ ಹಾಡಿಗಾಗಿ ಅವರು ನಿರಂತರ 16 ತಾಸುಗಳ ಕೆಲಸ ಮಾಡಿದ್ದಾರೆ. ಇಡೀ ಕೆಲಸವನ್ನು ಮುಗಿಸಿಕೊಟ್ಟ ನಂತರವೇ ಅವರು ತೆರಳಿದ್ದಾರೆ. ನಟಿಯ ದೋಸ್ತಿಯ ವಿಚಾರಕ್ಕೆ ಅಭಿಮಾನಿಗಳು ಶಹಬ್ಬಾಶ್ ಅಂದಿದ್ದಾರೆ. ಸದ್ಯ ಹುಮಾ ಖುರೇಷಿ ಸದ್ಯ ಯಶ್ ಅಭಿನಯದ ‘ಟಾಕ್ಸಿಕ್’ ಹಾಗೂ ಹಿಂದಿಯ ‘ಜಾಲಿ ಎಲ್‌ಎಲ್‌ಬಿ 3’, ‘ಪೂಜಾ ಮೇರಿ ಜಾನ್’ ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. -ಏಜೆನ್ಸೀಸ್