

ಖ್ಯಾತ ಬಾಲಿವುಡ್ ಗಾಯಕ ಅರಿಜಿತ್ ಸಿಂಗ್ ಸದ್ಯ ದೇಶದ ಹಲವೆಡೆ ಸಂಗೀತ ಕಾರ್ಯಕ್ರಮ ನೀಡುತ್ತಿದ್ದಾರೆ. ಇದೇ ನ. 26ರಂದು ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾವಿರಾರು ಜನ ಸೇರಿದ್ದರು. ಆ ಬಳಿಕ ಹೈದರಾಬಾದ್, ಅಹ್ಮದಾಬಾದ್, ದೆಹಲಿ, ಕೊಲ್ಕತ್ತಾ, ಪುಣೆ ಜತೆಗೆ ಬೆಂಗಳೂರಿನಲ್ಲು ಅರಿಜಿತ್ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಮ್ಯಾಜಿಕಲ್ ಕಂಠದಿಂದ ಅಪಾರ ಅಭಿಮಾನಿ ಬಳಗ ಹೊಂದಿರುವ ಅರಿಜಿತ್ ಸಿಂಗ್ರನ್ನು ಲೈವ್ ಆಗಿ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಹೀಗಾಗಿ ಸಂಗೀತ ಕಾರ್ಯಕ್ರಮದ ಟಿಕೆಟ್ಗಳು ಲಕ್ಷ ಲಕ್ಷ ರೂಪಾಯಿಗೆ ಮಾರಾಟವಾಗುತ್ತಿವೆ.
2023ರ ಜನವರಿ 27ರಂದು ಪುಣೆಯಲ್ಲಿ ಅರಿಜಿತ್ ಕಾರ್ಯಕ್ರಮ ನೀಡಲಿದ್ದು, ಆನ್ಲೈನ್ನಲ್ಲಿ ಟಿಕೆಟ್ ಬುಕ್ಕಿಂಗ್ ಮಾಡುವ ಅವಕಾಶವಿದೆ. ಆದರೆ, ಅಭಿಮಾನಿಗಳು ಟಿಕೆಟ್ ದರ ನೋಡಿ ಬೆಚ್ಚಿಬಿದ್ದಿದ್ದಾರೆ. 999 ರೂ.ನಿಂದ ಆರಂಭವಾಗುವ ಟಿಕೆಟ್ ದರ ಬರೋಬ್ಬರಿ 16 ಲಕ್ಷ ರೂ.ವರೆಗೂ ನಿಗದಿಪಡಿಸಲಾಗಿದೆ. ಪುಣೆ ಸಂಗೀತ ಕಾರ್ಯಕ್ರಮದ ಟಿಕೆಟ್ ದರಪಟ್ಟಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, 999 ರೂ.ಗಳ ಬ್ರಾಂಜ್ ಮತ್ತು 1999 ರೂ.ಗಳ ಸಿಲ್ವರ್ ವಿಭಾಗಗಳಲ್ಲಿ ನಿಂತು ಕಾರ್ಯಕ್ರಮ ವೀಕ್ಷಿಸಬಹುದಾಗಿದೆ. 3999 ರೂ. ಗೋಲ್ಡ್, 4999 ರೂ. ಗಳ ಪ್ಲಾಟಿನಂ 8999 ರೂ.ಗಳ ಡೈಮಂಡ್ ವಿಭಾಗಗಳಲ್ಲಿ ಆಸನಗಳ ವ್ಯವಸ್ಥೆ ಮಾಡಲಾಗಿದೆ.
ಬಳಿಕ ನಾಲ್ಕು ಪ್ರೀಮಿಯಮ್ ಲಾಂಜ್ಗಳಿದ್ದು, ಪ್ರತಿ ಲಾಂಜ್ನಲ್ಲಿ 40 ಜನ ಕೂರಬಹುದಾಗಿದೆ. ಪಿಎಲ್ 4ಗೆ 10 ಲಕ್ಷ ರೂ., ಪಿಎಲ್ 3ಗೆ 12 ಲಕ್ಷ ರೂ., ಪಿಎಲ್ 2ಗೆ 14 ಲಕ್ಷ ರೂ. ಹಾಗೂ ಪಿಎಲ್ 1ಗೆ 16 ಲಕ್ಷ ರೂ.ಗಳನ್ನು ನಿಗದಿಪಡಿಸಲಾಗಿದೆ. ಸದ್ಯ ಟಿಕೆಟ್ ದರದ ವಿರುದ್ಧ ಅರಿಜಿತ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. -ಏಜೆನ್ಸೀಸ್