

ಮುಂಬೈ: ಹಾಲಿವುಡ್ ಚಿತ್ರಗಳಿಗೆ ಹೃತಿಕ್ ರೋಶನ್ ಹೇಳಿ ಮಾಡಿಸಿದಂತಿದ್ದು, ಅವರ್ಯಾಕೆ ಹಾಲಿವುಡ್ನಲ್ಲಿ ಟ್ರೈ ಮಾಡಬಾರದು ಎಂಬ ಮಾತು ಹಲವು ವರ್ಷಗಳಿಂದ ಕೇಳಿಬರುತ್ತಲೇ ಇದೆ. ಈ ವಿಷಯವನ್ನು ಹೃತಿಕ್ ಗಂಭೀರವಾಗಿ ಪರಿಗಣಿಸಿಲ್ಲವೋ ಅಥವಾ ಪರಿಗಣಿಸಿದ್ದರೂ ಸೂಕ್ತ ಅವಕಾಶಗಳು ಸಿಗಲಿಲ್ಲವೋ ಗೊತ್ತಿಲ್ಲ.
ಆದರೆ, ಇತ್ತೀಚೆಗೆ ಹೃತಿಕ್ ರೋಶನ್ ಅವರು ಅಮೇರಿಕಾದ ಗರ್ಶ್ ಏಜನ್ಸಿ ಜತೆಗೆ ಒಪ್ಪಂದ ಮಾಡಿಕೊಂಡಿದ್ದು, ಈ ಸಂಸ್ಥೆಯು ಹೃತಿಕ್ ಹಾಲಿವುಡ್ ಜನರಿಗೆ ಪರಿಚಯಿಸುವ ಮತ್ತು ಚಿತ್ರಗಳಲ್ಲಿ ಅವಕಾಶಗಳನ್ನು ಕೊಡಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿದೆಯಂತೆ.
ಈ ಸಂಬಂಧ ಹೃತಿಕ್ ಈಗಾಗಲೇ ಒಂದು ಹಾಲಿವುಡ್ ಚಿತ್ರದಲ್ಲಿ ನಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹಾಲಿವುಡ್ನ ದೊಡ್ಡ ನಿರ್ಮಾಣ ಸಂಸ್ಥೆಯೊಂದು ಅಂತಾರಾಷ್ಟ್ರೀಯ ಮಟ್ಟದ ಸ್ಪೈ ಥ್ರಿಲ್ಲರ್ ಚಿತ್ರದ ನಿರ್ಮಾಣಕ್ಕೆ ಕೈಹಾಕಿದ್ದು, ಆ ಚಿತ್ರಕ್ಕೆ ಹೃತಿಕ್ ರೋಶನ್ ಅವರನ್ನು ಪರಿಗಣಿಸುವ ಸಾಧ್ಯತೆ ಇದೆಯಂತೆ.
ಈ ನಿಟ್ಟಿನಲ್ಲಿ ಹೃತಿಕ್ ರೋಶನ್ ಒಂದು ಆಡಿಶನ್ ಸಹ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ನಿಯಮದ ಪ್ರಕಾರ ಲಾಸ್ ಆಂಜಲೀಸ್ನಲ್ಲಿ ಹೃತಿಕ್ ಅವರು ಆಡಿಷನ್ ಕೊಡಬೇಕಿತ್ತು. ಆದರೆ, ಕರೊನಾ ಭಯವಿರುವುದರಿಂದ, ಅವರು ತಮ್ಮ ಮುಂಬೈನ ಮನೆಯಲ್ಲೇ ಆಡಿಷನ್ನಲ್ಲಿ ಭಾಗವಿಸಿದ್ದಾರಂತೆ. ಇನ್ನು, ಹೃತಿಕ್ಗೆ ಚಿತ್ರದಲ್ಲೊಂದು ಅವಕಾಶ ಕೊಡಬೇಕೋ ಬೇಡವೋ ಎಂಬ ನಿರ್ಧಾರವನ್ನು ನಿರ್ಮಾಣ ಸಂಸ್ಥೆ ತೆಗೆದುಕೊಳ್ಳಲಿದೆ.
ಕಳೆದ ವರ್ಷ 'ಸೂಪರ್ 30' ಮತ್ತು 'ವಾರ್' ಎಂಬ ಎರಡು ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ಹೃತಿಕ್ ರೋಶನ್, ಮುಂದಿನ ವರ್ಷ 'ಕ್ರಿಶ್ 4' ಚಿತ್ರದಲ್ಲಿ ನಟಿಸಲಿದ್ದು, ಆ ಚಿತ್ರದ ನಂತರ ಹಾಲಿವುಡ್ ಚಿತ್ರಗಳಲ್ಲಿ ನಟಿಸುವ ಸಾಧ್ಯತೆ ಇದೆ.