

ಚೆನ್ನೈ: ವಿಜಯ್ ಅಭಿನಯದ 'ಮಾಸ್ಟರ್' ಚಿತ್ರವು ಜನವರಿ ಎರಡನೇ ವಾರದಲ್ಲಿ ಬಿಡಗುಡೆಯಾಗಿದೆ. ಚಿತ್ರಮಂದಿರಗಳಲ್ಲಿ ಶೇ. 50ರಷ್ಟು ಹಾಜರಾತಿ ಇದ್ದರೂ, ಚಿತ್ರವು ಈ 17 ದಿನಗಳಲ್ಲಿ 239 ಕೋಟಿ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗುತ್ತಿದೆ.
ಈ ಮಧ್ಯೆ, ಚಿತ್ರವು ಅಮೇಜಾನ್ ಪ್ರೈಮ್ನಲ್ಲಿ ಶುಕ್ರವಾರ ಬಿಡಗುಡೆಯಾಗಿದೆ. ಚಿತ್ರಮಂದಿರಗಳಲ್ಲಿ ಚಿತ್ರ ನೋಡದವರು ಸಹ ಈ ಚಿತ್ರವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಷ್ಟಕ್ಕೂ ಅಮೇಜಾನ್ ಪ್ರೈಮ್ನಿಂದ ಚಿತ್ರತಂಡಕ್ಕೆ ಸಿಕ್ಕ ಹಣವೆಷ್ಟು. ಕೇಳಿದರೆ ನಿಜಕ್ಕೂ ಶಾಕ್ ಆಗ್ತೀರಾ. ಏಕೆಂದರೆ, ದಕ್ಷಿಣ ಭಾರತದಲ್ಲೇ ಇದೊಂದು ದಾಖಲೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಹೆಸರಿಗೆ ರಾಮ; ಶೌರ್ಯಕ್ಕೆ ಅರ್ಜುನ - ಚಿತ್ರ ವಿಮರ್ಶೆ
ಇದುವರೆಗೂ ಓಟಿಟಿಯಿಂದ ಅತೀ ಹೆಚ್ಚು ಹಣ ಪಡೆದ ಚಿತ್ರವೆಂದರೆ ಅದು ಅಕ್ಷಯ್ ಕುಮಾರ್ ಅಭಿನಯದ 'ಲಕ್ಷ್ಮೀ' ಎಂದು ಹೇಳಲಾಗುತ್ತಿದೆ. ಡಿಸ್ನಿ ಹಾಟ್ಸ್ಟಾರ್ನವರು ಈ ಚಿತ್ರವನ್ನು 115 ಕೋಟಿ ಕೊಂಡುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಭಾರತೀಯ ಚಿತ್ರರಂಗದಲ್ಲಿ ಯಾವೊಂದು ಚಿತ್ರಕ್ಕೆ ಸಹ ಅಷ್ಟೊಂದು ದೊಡ್ಡ ಮೊತ್ತ ಅದುವರೆಗೂ ಕೊಟ್ಟಿಲ್ಲದ ಕಾರಣ, ಅದು ದಾಖಲೆಯಾಗಿತ್ತು.
ಇನ್ನು ದಕ್ಷಿಣ ಭಾರತದ ಚಿತ್ರರಂಗದ ಬಗ್ಗೆ ಬರುವುದಾದರೆ, ವಿಜಯ್ ಅಭಿನಯದ 'ಮಾಸ್ಟರ್' ಚಿತ್ರ ದಾಖಲೆ ಮಾಡಿದೆ. ಈ ಚಿತ್ರದ ಡಿಜಿಟಲ್ ಹಕ್ಕುಗಳಿಗೆ ಅಮೇಜಾನ್ ಪ್ರೈಮ್ನವರು 51.5 ಕೋಟಿ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಇದುವರೆಗೂ ದಕ್ಷಿಣ ಭಾರತದಲ್ಲಿ ಯಾವೊಂದು ಚಿತ್ರದ ಡಿಜಿಟಲ್ ಹಕ್ಕುಗಳಿಗೂ ಇಷ್ಟೊಂದು ಮೊತ್ತ ಸಿಗದಿರುವುದರಿಂದ, 'ಮಾಸ್ಟರ್' ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ.
'ಮಾಸ್ಟರ್' ಚಿತ್ರಕ್ಕೆ ಅಮೇಜಾನ್ನವರು ಮೊದಲು ನಿಗದಿ ಮಾಡಿದ್ದ ದುಡ್ಡು 36 ಕೋಟಿ ರೂಗಳಾಗಿತ್ತು. ಅದರಂತೆ ಚಿತ್ರ ಬಿಡುಗಡೆಯಾದ ಒಂದು ತಿಂಗಳಿಗೆ ಓಟಿಟಿಯಲ್ಲಿ ಬಿಡುಗಡೆ ಎಂಬ ಒಪ್ಪಂದವಾಗಿತ್ತು. ಫೆಬ್ರವರಿ 12ಕ್ಕೆ ಓಟಿಟಿಯಲ್ಲಿ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ, ಜನವರಿ 29ರಂದೇ ಮುಂಚಿತವಾಗಿ ಚಿತ್ರ ಬಿಡುಗಡೆ ಮಾಡಿರುವುದರಿಂದ 16.5 ಕೋಟಿ ಹೆಚ್ಚಿಗೆ ನೀಡಲಾಗಿದೆಯಂತೆ. ಅಲ್ಲಿಗೆ, ಚಿತ್ರದ ಡಿಜಿಟಲ್ ಹಕ್ಕುಗಳಿಗೆ 51.5 ಕೋಟಿ ಮೊತ್ತ ನೀಡಲಾಗಿದೆ.
'ಮಾಸ್ಟರ್' ಚಿತ್ರದಲ್ಲಿ ವಿಜಯ್, ವಿಜಯ್ ಸೇತುಪತಿ, ಮಾಳವಿಕಾ ಮೋಹನನ್ ಮುಂತಾದವರು ನಟಿಸಿದ್ದು, ಲೋಕೇಶ್ ಕನಗರಾಜ್ ಚಿತ್ರದ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ.