ಒಂದೇ ಚಿತ್ರ ಎಷ್ಟು ವರ್ಷ ಮಾಡುತ್ತೀರಿ?; ಆರ್. ಚಂದ್ರುಗೆ ಶಿವಣ್ಣ ಪ್ರಶ್ನೆ

Chandru
Published on

ಬೆಂಗಳೂರು: ಎರಡು ವರ್ಷವೇ ಆಯಿತು ಆರ್. ಚಂದ್ರು ನಿರ್ದೇಶನದ ‘ಕಬ್ಜ’ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿ. ಉಪೇಂದ್ರ ಅಭಿನಯದ ಈ ಚಿತ್ರಕ್ಕೆ ಇದುವರೆಗೂ 120ಕ್ಕೂ ಹೆಚ್ಚು ದಿನಗಳ ಕಾಲ ಚಿತ್ರೀಕರಣ ಆಗಿದ್ದರೂ, ಚಿತ್ರ ಇನ್ನೂ ಮುಗಿದಿಲ್ಲ. ಯಾವಾಗ ಮುಗಿಯುತ್ತದೆ ಎಂಬುದೂ ಗೊತ್ತಿಲ್ಲ. ಜನ ಕಾಯುತ್ತಿರುವುದರಿಂದ, ಆದಷ್ಟು ಬೇಗ ಚಿತ್ರ ಮುಗಿಸಿ ಎಂದು ಶಿವರಾಜಕುಮಾರ್ ಸಲಹೆ ನೀಡಿದ್ದಾರೆ.

‘ಸಲಗ’ ಚಿತ್ರವು ಯಶಸ್ವಿಯಾಗಿ ಪ್ರದರ್ಶನ ಕಂಡ ಹಿನ್ನೆಲೆಯಲ್ಲಿ ಚಿತ್ರತಂಡದವರು, ಚಿತ್ರಕ್ಕಾಗಿ ದುಡಿದ ಕಲಾವಿದರು ಮತ್ತು ತಂತ್ರಜ್ಞರಿಗೆ ಪಾರಿತೋಷಕ ನೀಡಿ ಇತ್ತೀಚೆಗೆ ಗೌರವಿಸಿದ್ದಾರೆ. ಈ ಸಮಾರಂಭದಲ್ಲಿ ಶಿವರಾಜ ಕುಮಾರ್ ಮತ್ತು ಚಂದ್ರು ಇಬ್ಬರೂ ಇದ್ದರು. ಈ ಸಂದರ್ಭದಲ್ಲಿ ನಾಯಕಿ ಸಂಜನಾ ಆನಂದ್ ಹೆಸರು ಪ್ರಸ್ತಾಪವಾಯಿತು. ಸಂಜನಾ ಈ ಹಿಂದೆ ಶಿವರಾಜಕುಮಾರ್ ಮಗಳು ನಿವೇದಿತಾ ನಿರ್ವಿುಸಿದ ವೆಬ್​ಸೀರೀಸ್​ನಲ್ಲಿ ನಟಿಸಿದ್ದರು.

ಈ ಕುರಿತು ಮಾತನಾಡಿದ ಶಿವಣ್ಣ, ‘ನಮ್ಮ ಆರ್. ಚಂದ್ರು ಎಲ್ಲ ಕಡೆ ನಾಯಕಿಯನ್ನು ಹುಡುಕುತ್ತಿರುತ್ತಾರೆ. ನಮ್ಮಲ್ಲೇ ಸಾಕಷ್ಟು ಜನ ಪ್ರತಿಭಾವಂತರಿದ್ದಾರೆ. ಅದನ್ನು ಸ್ವಲ್ಪ ಮನಸ್ಸಿನಲ್ಲಿಟ್ಟುಕೊಳ್ಳಿ’ ಎಂದು ಲೈಟ್ ಆಗಿ ಕಾಲೆಳೆದರು. ‘ಕಬ್ಜ’ ಕುರಿತು ಮಾತನಾಡಿದ ಅವರು, ‘ದೊಡ್ಡ ಸಿನಿಮಾ ಮಾಡುತ್ತಿದ್ದೀರಾ. ಆದಷ್ಟು ಬೇಗ ಚಿತ್ರ ಮುಗಿಸಿ. ಎಲ್ಲರೂ ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಜನರಿಗೆ ಬೇಗ ಚಿತ್ರ ತೋರಿಸಿ. ಒಳ್ಳೆಯ ನಿರ್ದೇಶಕರು ನೀವು. ಒಂದೇ ಚಿತ್ರಕ್ಕೆ ಸಿಕ್ಕಿ ಹಾಕಿಕೊಳ್ಳಬೇಡಿ. ಒಂದೇ ಚಿತ್ರವನ್ನು ಎಷ್ಟು ವರ್ಷ ಮಾಡುತ್ತೀರಿ? ನಿಮ್ಮಂತಹ ನಿರ್ದೇಶಕರು 10 ಸಿನಿಮಾ ಮಾಡಬೇಕು. ಜಗತ್ತು ಬಹಳ ವೇಗದಲ್ಲಿದೆ. ಏನಾಗುತ್ತದೋ ಹೇಳೋದು ಕಷ್ಟ. ನೀವು ಸಹ ಫಾಸ್ಟ್ ಆಗಿ ಕೆಲಸ ಮಾಡಬೇಕು. ಇದನ್ನು ಸ್ವಲ್ಪ ಮನಸ್ಸಿನಲ್ಲಿಟ್ಟುಕೊಳ್ಳಿ’ ಎಂದರು. ಅಂದಹಾಗೆ, ‘ಕಬ್ಜ’ ಚಿತ್ರದ ನಾಯಕಿಯ ಭಾಗದ ಚಿತ್ರೀಕರಣದ ಹೊರತಾಗಿ, ಮಿಕ್ಕಂತೆ ಬಹುತೇಕ ಚಿತ್ರೀಕರಣ ಮುಗಿಸಿದ್ದಾರಂತೆ ಚಂದ್ರು. ನಾಯಕಿಯ ಆಯ್ಕೆ ಆಗಿದ್ದು, ಸದ್ಯದಲ್ಲೇ ಹೆಸರು ಬಹಿರಂಗಪಡಿಸುವುದಾಗಿ ಚಂದ್ರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net