

ಬೆಂಗಳೂರು: ರಕ್ಷಿತ್ ಶೆಟ್ಟಿ ತಮ್ಮ ಹೊಸ ಚಿತ್ರ 'ರಿಚ್ಚಿ'ಯ ಚಿತ್ರಕಥೆ ತಿದ್ದುವುದಕ್ಕೆ ಮತ್ತು ಲೊಕೇಶನ್ ಹುಡುಕುವುದಕ್ಕೆ ಅತ್ತ ಗೋವಾದಲ್ಲಿದ್ದರೆ, ಈ ಕಡೆ ಹೇಮಂತ್ ಎನ್ನುವವರು 'ರಿಚ್ಚಿ' ಎಂಬ ಶೀರ್ಷಿಕೆ ತಮ್ಮ ಬಳಿ ಇರುವುದರಿಂದ ರಕ್ಷಿತ್ ಆ ಹೆಸರಿನ ಚಿತ್ರ ಮಾಡುವುದಕ್ಕೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ರಕ್ಷಿತ್ ಶೆಟ್ಟಿ, ತಮ್ಮ 'ಉಳಿದವರು ಕಂಡಂತೆ' ಚಿತ್ರದ ರಿಚ್ಚಿ ಪಾತ್ರವನ್ನು ಪ್ರಧಾನವಾಗಿಟ್ಟುಕೊಂಡು ಚಿತ್ರ ಮಾಡುತ್ತಿದ್ದು, ಚಿತ್ರಕ್ಕೆ 'ರಿಚ್ಚಿ' ಎಂಬ ಹೆಸರಿಟ್ಟಿದ್ದಾರೆ. ಆ ಹೆಸರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ರಿಜಿಸ್ಟರ್ ಆಗಿದೆಯೋ ಇಲ್ಲವೋ ಗೊತ್ತಿಲ್ಲ. ಒಟ್ಟಿನಲ್ಲಿ, ಕೆಲವು ವರ್ಷಗಳಿಂದ ಆ ಹೆಸರಿನ ಚಿತ್ರ ಮಾಡುವುದಾಗಿ ಹೇಳುತ್ತಲೇ ಬಂದಿದ್ದು, ಈಗ ಚಿತ್ರದ ಕೆಲಸಗಳು ಭರದಿಂದ ಸಾಗಿವೆ.
ಈ ಮಧ್ಯೆ, ಹೇಮಂತ್ ಎಂಬುವವರು 'ರಿಚ್ಚಿ' ಎಂಬ ಹೆಸರಿನ್ನಿಟ್ಟು ಚಿತ್ರ ಮಾಡುತ್ತಿದ್ದಾರಂತೆ. ಈಗಾಗಲೇ ಶೇ. 80ರಷ್ಟು ಚಿತ್ರೀಕರಣವಾಗಿದ್ದು, ರಕ್ಷಿತ್ ಶೆಟ್ಟಿ ಅವರು ಆ ಹೆಸರಿನಲ್ಲಿ ಚಿತ್ರ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು 'ವಿಜಯವಾಣಿ'ಯೊಂದಿಗೆ ಮಾತನಾಡಿರುವ ಅವರು, 'ನಾನು ಮೂರು ವರ್ಷಗಳ ಹಿಂದೆಯೇ ಈ ಹೆಸರಿನ ಚಿತ್ರ ಪ್ರಾರಂಭಿಸಿದ್ದೆ. ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿತ್ತು. ಅಷ್ಟರಲ್ಲಿ ರಕ್ಷಿತ್ ಶೆಟ್ಟಿ ಅವರು 'ರಿಚ್ಚಿ' ಎಂಬ ಹೆಸರಿನ ಚಿತ್ರ ಮಾಡುತ್ತಿರುವುದು ಗೊತ್ತಾಯಿತು. ಟೈಟಲ್ ನನ್ನ ಬಳಿ ಇರುವುದರಿಂದ, ನೀವು ಚಿತ್ರ ಮಾಡುವಂತಿಲ್ಲ ಎಂದು ಅವರ ಗಮನಕ್ಕೆ ತಂದಿದ್ದೇನೆ. ಈ ವಿಷಯವಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೂ ದೂರು ನೀಡಿದ್ದೇನೆ. ಅಷ್ಟಾದರೂ, ಅವರು ಅದೇ ಹೆಸರಿನ ಚಿತ್ರ ಹೇಗೆ ಘೋಷಿಸಿದರೋ ಗೊತ್ತಿಲ್ಲ' ಎನ್ನುತ್ತಾರೆ ಹೇಮಂತ್.
ಈ ಚಿತ್ರವನ್ನು ಅವರೇ ನಿರ್ಮಿಸಿ-ನಿರ್ದೇಶಿಸುವುದರ ಜತೆಗೆ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. ಅವರ ಜತೆಗೆ ನಿಷ್ಕಳ, ಮನೋಜ್ ಮಿಶ್ರ, ರಮೇಶ್ ಪಂಡಿತ್, ಮಿಮಿಕ್ರಿ ಗೋಪಿ ಮುಂತಾದವರು ನಟಿಸಿದ್ದು, ಅಗಸ್ತ್ಯ ಸಂತೋಷ್ ಎನ್ನುವವರು ಸಂಗೀತ ಸಂಯೋಜಿಸುತ್ತಿದ್ದಾರೆ.