

ಬೆಂಗಳೂರು: ತಾರಾಗಣದ ಮೂಲಕವೇ ಗಮನ ಸೆಳೆದಿರುವ ‘ಹೊಂದಿಸಿ ಬರೆಯಿರಿ’ ತಂಡ, ಇದೀಗ ಬಹುದಿನಗಳ ಬಳಿಕ ಪ್ರೇಕ್ಷಕರೆದುರು ಬಂದಿದೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಇಡೀ ತಂಡ ಕಳೆದ ನಾಲ್ಕು ತಿಂಗಳಿಂದ ಎಲ್ಲ ಕೆಲಸಗಳನ್ನು ಬದಿಗೊತ್ತಿ ಕ್ವಾರಂಟೈನ್ ಆಗಿದ್ದರು. ಇದೀಗ ಸಿನಿಮಾ ಸಂಬಂಧಿ ಕೆಲಸಗಳು ಸಡಿಲವಾದ ಹಿನ್ನೆಲೆಯಲ್ಲಿ ಚಿತ್ರದ ಪುಟಾಣಿ ಪ್ರೀ ಪ್ರೊಡಕ್ಷನ್ ಟೀಸರ್ ಹೆಸರಿನ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ ಚಿತ್ರತಂಡ.
ಹೌದು, ಇಲ್ಲಿಯವರೆಗೂ ಸಿನಿಮಾ ಸಂಬಂಧಿ ಟೀಸರ್ಗಳನ್ನು ಸಿನಿಮಾ ತಂಡಗಳು ಬಿಡುಗಡೆ ಮಾಡುತ್ತಿದ್ದವು. ಇದೀಗ ಪ್ರಿ ಪ್ರೊಡಕ್ಷನ್ ವೇಳೆಯ ದೃಶ್ಯಗಳನ್ನು ಟೀಸರ್ ರೂಪದಲ್ಲಿ ಬಿಡುಗಡೆ ಮಾಡಿದ್ದಾರೆ ನಿರ್ದೇಶಕ ಆರ್. ರಾಮೇನಹಳ್ಳಿ ಜಗನ್ನಾಥ್.
ಬಹುತಾರಾಗಣದ ಈ ಚಿತ್ರದಲ್ಲಿ ಕಲಾವಿದರ ದಂಡೇ ಇದೆ. ಪ್ರವೀಣ್ ತೇಜ, ನವೀನ್ ಶಂಕರ್, ಶ್ರೀ ಮಹದೇವ್, ಅನಿರುದ್ಧ ಆಚಾರ್ಯ, ಭಾವನಾ ರಾವ್, ಸಂಯುಕ್ತಾ ಹೊರನಾಡು, ಐಶಾನಿ ಶೆಟ್ಟಿ, ಅರ್ಚನಾ ಜೋಯಿಸ್, ಸೆಸ್ಸಿಲ್ಲಾ ಪಾತ್ರವರ್ಗದಲ್ಲಿದ್ದಾರೆ.
ಸಂಡೇ ಸಿನಿಮಾಸ್ ಸಂಸ್ಥೆ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು, ಶಾಂತಿ ಸಾಗರ್ ಕ್ಯಾಮರಾಮನ್, ಜೋ ಕಾಸ್ಟ್ ಸಂಗೀತ, ಮಾಸ್ತಿ ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆದಿದ್ದಾರೆ. ಕೆ. ಕಲ್ಯಾಣ್, ಹೃದಯಶಿವ, ರಾಮೇನಹಳ್ಳಿ ಜಗನ್ನಾಥ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ.