ಬಾಲಿವುಡ್​ನತ್ತ ಹೊಂಬಾಳೆ ಫಿಲಂಸ್​; ಸದ್ಯದಲ್ಲೇ ಹಿಂದಿ ಚಿತ್ರ ನಿರ್ಮಾಣ

Hombale - Vijay Kumar Kiragandur
Published on

ಮುಂಬೈ: 'ಕಾಂತಾರ' ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ ಹೊಂಬಾಳೆ ಫಿಲಂಸ್​ ಸಂಸ್ಥೆಯು ಕನ್ನಡದಲ್ಲಿ ಇನ್ನಷ್ಟು ಚಿತ್ರಗಳನ್ನು ನಿರ್ಮಿಸುತ್ತಿದೆ. ಈ ಮಧ್ಯೆ, ಬಾಲಿವುಡ್​ ಚಿತ್ರವೊಂದನ್ನು ನಿರ್ಮಿಸುವತ್ತ ಹೊಂಬಾಳೆ ಫಿಲಂಸ್​ ಹೆಜ್ಜೆ ಇಟ್ಟಿದ್ದು, ಸದ್ಯದಲ್ಲೇ ವಿಜಯ್​ ಕುಮಾರ್​ ಕಿರಗಂದೂರು ನಿರ್ಮಾಣದಲ್ಲಿ ಹಿಂದಿ ಚಿತ್ರವೊಂದು ಸೆಟ್ಟೇರಲಿದೆ ಎಂಬ ಸುದ್ದಿಯೊಂದು ಕೇಳಿ ಬರುತ್ತಿದೆ.

ಈಗಾಗಲೇ ತೆಲುಗಿನಲ್ಲಿ ಪ್ರಭಾಸ್ ಅಭಿನಯದ ‘ಸಲಾರ್’ ಚಿತ್ರವನ್ನು ವಿಜಯ್​ ಕುಮಾರ್​ ಕಿರಗಂದೂರು ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, 2023ರ ಸೆಪ್ಟೆಂಬರ್​ನಲ್ಲಿ ಚಿತ್ರ ಬಿಡುಗಡೆಯಾಗಲಿದೆ. ತಮಿಳಿನಲ್ಲಿ ಎರಡು ಚಿತ್ರಗಳನ್ನು ಹೊಂಬಾಳೆ ನಿರ್ಮಿಸುತ್ತಿದ್ದು, ಈ ಪೈಕಿ ಒಂದು ಚಿತ್ರವನ್ನು ‘ಸೂರರೈ ಪೊಟ್ರು’ ಖ್ಯಾತಿಯ ಸುಧಾ ಕೊಂಗರಾ ನಿರ್ದೇಶನ ಮಾಡಿದರೆ, ಇನ್ನೊಂದರ ಘೋಷಣೆ ಶೀಘ್ರದಲ್ಲೇ ಆಗಲಿದೆ. ಮಲಯಾಳಂನಲ್ಲೂ ಹೊಂಬಾಳೆ ಫಿಲಂಸ್ ವತಿಯಿಂದ ಎರಡು ಚಿತ್ರ ನಿರ್ಮಾಣವಾಗುತ್ತಿವೆ. ಫಹಾದ್ ಫಾಸಿಲ್ ಅಭಿನಯದ ‘ಧೂಮಂ’ ಚಿತ್ರದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದ್ದರೆ, ಪೃಥ್ವಿರಾಜ್ ಸುಕುಮಾರನ್ ನಟಿಸಿ-ನಿರ್ದೇಶಿಸಲಿರುವ ‘ಟೈಸನ್’ ಚಿತ್ರವು ಮುಂದಿನ ವರ್ಷ ಪ್ರಾರಂಭವಾಗಲಿದೆ. ಇದೆಲ್ಲದರ ಜತೆಗೆ, ಹಿಂದಿ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ಶುರುವಾಗಲಿದ್ದು, ಸದ್ಯದಲ್ಲೇ ಅಧಿಕೃತ ಘೋಷಣೆಯಾಗಲಿದೆ.

ಒಂದಕ್ಕಿಂತ ಹೆಚ್ಚು ಭಾಷೆಗಳಲ್ಲಿ ಚಿತ್ರ ನಿರ್ಮಿಸಿರುವ ಕೆಲವು ಸಂಸ್ಥೆಗಳು ಭಾರತೀಯ ಚಿತ್ರರಂಗದಲ್ಲಿವೆ. ಆದರೆ, ಒಂದೇ ಸಂಸ್ಥೆಯಿಂದ ಐದು ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರ ನಿರ್ಮಾಣ ಮಾಡುತ್ತಿರುವುದು ಭಾರತೀಯ ಚಿತ್ರರಂಗದಲ್ಲೇ ಇದೊಂದು ಹೊಸ ದಾಖಲೆ ಎಂದರೆ ತಪ್ಪಿಲ್ಲ.

ಹೊಂಬಾಳೆ ಫಿಲಂಸ್​ ಸಂಸ್ಥೆಯು ಈಗಾಗಲೇ ಕನ್ನಡದಲ್ಲಿ ಜಗ್ಗೇಶ್ ಅಭಿನಯದಲ್ಲಿ ‘ರಾಘವೇಂದ್ರ ಸ್ಟೋರ್ಸ್’ ಚಿತ್ರವನ್ನು ನಿರ್ಮಿಸಿದೆ. ಸಂತೋಷ್ ಆನಂದರಾಮ್ ನಿರ್ದೇಶಿಸಿರುವ ಈ ಚಿತ್ರ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಶ್ರೀಮುರಳಿ ಅಭಿನಯದಲ್ಲಿ ಡಾ. ಸೂರಿ ನಿರ್ದೇಶಿಸುತ್ತಿರುವ ‘ಬಘೀರ’ ಚಿತ್ರವು ಚಿತ್ರೀಕರಣ ಹಂತದಲ್ಲಿದೆ. ರಕ್ಷಿತ್ ಅಭಿನಯದ ಮತ್ತು ನಿರ್ದೇಶನದ ‘ರಿಚರ್ಡ್ ಆಂಟೋನಿ’ ಮತ್ತು ಯುವ ರಾಜಕುಮಾರ್​​ಗಾಗಿ ಸಂತೋಷ್ ಆನಂದರಾಮ್ ನಿರ್ದೇಶಿಸಲಿರುವ ಹೊಸ ಚಿತ್ರಗಳು ಸದ್ಯದಲ್ಲೇ ಶುರುವಾಗಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net