

ಬೆಂಗಳೂರು: ‘ಕೆಜಿಎಫ್‘ ಸರಣಿ, ‘ಕಾಂತಾರ’ ಹಾಗೂ ‘ಬಘೀರ’ ಸಿನಿಮಾಗಳನ್ನು ನಿರ್ಮಿಸಿರುವ ಹೊಂಬಾಳೆ ಫಿಲಂಸ್ ಸಂಸ್ಥೆಯು ಗಡಿ ದಾಟಿ, ಪರಭಾಷೆಯ ಚಿತ್ರಗಳಿಗೆ ಬಂಡವಾಳ ಹೂಡುತ್ತಿರುವ ವಿಚಾರ ಗೊತ್ತೇ ಇದೆ. ಈಗಾಗಲೇ ಮಲಯಾಳಂನ ‘ಧೂಮಂ’, ತೆಲುಗಿನ ‘ಸಲಾರ್: 1 ಸೀಸ್‌ಫೈರ್’, ತಮಿಳಿನ ‘ರಘು ತಾತ’ ಚಿತ್ರಗಳನ್ನು ನಿರ್ಮಿಸಿ ಸೈ ಎನಿಸಿಕೊಂಡಿದೆ. ಹಾಗೆಯೇ ಪ್ರಭಾಸ್‌ನ ಮುಂದಿನ ಮೂರು ಸಿನಿಮಾಗಳಿಗೆ ಈಗಾಗಲೇ ಅಡ್ವಾನ್ಸ್ ಬುಕ್ ಮಾಡಿಕೊಂಡಿದೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಸದ್ದು ಮಾಡುತ್ತಿರುವ ಈ ಸಂಸ್ಥೆಯು ಇದೀಗ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿದ್ದು, ಬಾಲಿವುಡ್ ಎಂಟ್ರಿ ಕೊಟ್ಟಿದೆ. ಹೌದು, ಹೊಂಬಾಳೆ ನಿರ್ಮಾಣ ಸಂಸ್ಥೆಯು ನಟ ಹೃತಿಕ್ ರೋಷನ್ ಜತೆ ಸಿನಿಮಾ ಘೋಷಿಸಿದೆ. ಇತ್ತೀಚೆಗೆಷ್ಟೆ ನಿರ್ಮಾಪಕ ವಿಜಯ್ ಕಿರಗಂದೂರು, ‘ಹೊಂಬಾಳೆ ಸಂಸ್ಥೆಯು ಸ್ಫೂರ್ತಿಯುತ ಹಾಗೂ ಗಡಿಗಳನ್ನು ಮೀರಿ ಕಥೆಗಳನ್ನು ಹೇಳಲು ಇಷ್ಟಪಡುತ್ತದೆ. ಅದರಲ್ಲಿ ಸಂಸ್ಥೆಯು ಹೃತಿಕ್ ರೋಷನ್ ಜತೆ ಮಾಡಿಕೊಂಡಿರುವ ಒಡಂಬಡಿಕೆಯು ಸಾಕಾರಗೊಳಿಸಲು ಒಂದು ಹೆಜ್ಜೆ ಮುಂದಿದೆ. ಒಂದು ಮೆಗಾ ಸಿನಿಮಾ ತೆರೆಗೆ ತರಲು ನಾವು ಮುಂದಾಗುತ್ತಿದ್ದೇವೆ. ಪ್ರೇಕ್ಷಕರಿಗೆ ಶಕ್ತಿಯುತ ಹಾಗೂ ಕಾಲಾತೀತ ಅನುಭವ ನೀಡಲು ಸಿದ್ಧರಾಗಿದ್ದೇವೆ’ ಎಂದು ಹೇಳಿಕೊಂಡಿದ್ದಾರೆ. ಈ ಹೊಸ ಚಿತ್ರದ ಟೈಟಲ್ ಹಾಗೂ ನಿರ್ದೇಶಕರು, ತಾಂತ್ರಿಕ ವರ್ಗ ಸೇರಿ ಹಲವು ವಿಚಾರಗಳು ಸದ್ಯದಲ್ಲೇ ಘೋಷಣೆಯಾಗಲಿವೆ.
ಹೃತಿಕ್‌ಗೆ ತ್ರಿಬಲ್ ಧಮಾಕಾ: ಬಾಲಿವುಡ್‌ನಲ್ಲಿ ಒಂದು ಬಿಗ್ ಹಿಟ್‌ಗಾಗಿ ಹೃತಿಕ್ ಕಾಯುತ್ತಿದ್ದಾರೆ. ಅವರ ನಟನೆಯ ‘ವಾರ್-2’ ಇದೇ ಅ.14ರಂದು ಬಿಡುಗಡೆಗೆ ಸಿದ್ಧವಾಗಿದೆ. ಅದರ ಬೆನ್ನಲ್ಲೇ ಇತ್ತೀಚೆಗೆ ತಮ್ಮದೇ ನಿರ್ದೇಶನದಲ್ಲಿ ‘ಕ್ರಿಷ್-4’ ಘೋಷಿಸಿದ್ದರು. ಇದೀಗ, ಹೊಂಬಾಳೆ ಫಿಲಂಸ್ ಜತೆ ಒಂದು ಸಿನಿಮಾ ಓಕೆ ಮಾಡಿದ್ದಾರೆ. ಈ ಬಗ್ಗೆ ಅವರು, ‘ಕಳೆದ ಹಲವು ವರ್ಷಗಳಿಂದ ಹೊಂಬಾಳೆ ಫಿಲಂಸ್ ವಿಭಿನ್ನ ಸಿನಿಮಾಗಳನ್ನು ನೀಡುತ್ತಾ ಬಂದಿದೆ. ಇದೀಗ ನಾನು ಸಂಸ್ಥೆ ಜತೆ ಕೈಜೋಡಿಸಿದ್ದು ಮೂಲಕ ಪ್ರೇಕ್ಷಕರಿಗೆ ಒಳ್ಳೆಯ ಸಿನಿಮಾ ನೀಡಲು ಎದುರು ನೋಡುತ್ತಿದ್ದೇನೆ. ದೊಡ್ಡ ಕನಸು ಹೊಂದಿರುವ ನಾವು, ಆ ಕನಸುಗಳಿಗೆ ಜೀವ ತುಂಬಲು ಬದ್ಧರಾಗಿದ್ದೇವೆ’ ಎಂದು ಹೇಳಿಕೊಂಡಿದ್ದಾರೆ.
ಪ್ರಭಾಸ್‌ಗೆ ಹೊಂಬಾಳೆಯಿಂದ ಸಿಹಿಬಾಳೆ: ‘ಸಲಾರ್-1’ರ ಯಶಸ್ಸಿನ ಬಳಿಕ ಪ್ರಭಾಸ್ ಸದ್ಯ ಐದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅದರಲ್ಲಿ ‘ಸಲಾರ್ 2: ಶೌರ್ಯಂಗಪರ್ವಂ’ ಚಿತ್ರದ ಶೂಟಿಂಗ್ ಆರಂಭವಾಗಬೇಕಷ್ಟೇ. ಈ ಚಿತ್ರವನ್ನು ಕೂಡ ಹೊಂಬಾಳೆ ಸಂಸ್ಥೆ ನಿರ್ಮಿಸುತ್ತಿದೆ. ಅದರ ಬಳಿಕ ಮತ್ತೆರೆಡು ಚಿತ್ರಗಳನ್ನು ಪ್ರಭಾಸ್ ಜತೆ ಒಪ್ಪಂದ ಮಾಡಿಕೊಂಡಿದ್ದು, ಅವು ಕ್ರಮವಾಗಿ 2027 ಹಾಗೂ 2028ರಲ್ಲಿ ಬಿಡುಗಡೆಯಾಗಲಿವೆ. ಇದರ ಹೊರತುಪಡಿಸಿ, ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ ಕನ್ನಡದ ‘ಕಾಂತಾರ-1’ ಚಿತ್ರವೂ ಹೊಂಬಾಳೆ ಬ್ಯಾನರ್‌ನಲ್ಲಿ ಮೂಡಿಬರುತ್ತಿದೆ.