ನಮ್ಮ ಕಂಟ್ರೋಲ್​ನಲ್ಲಿ ಏನೂ ಇಲ್ವಾ? ಪಹಲ್ಗಾಮ್​ ಉಗ್ರರ ದಾಳಿಯನ್ನು ಖಂಡಿಸಿದ ತೆಲುಗು ನಟ ನಾನಿ

zxc
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಕಾಶ್ಮೀರದ ಪಹಲ್ಗಾಮ್​ನಲ್ಲಿ ಕಳೆದ ಏ. 22ರಂದು ಉಗ್ರರ ದಾಳಿಗೆ 26 ಹಿಂದುಗಳು ಸೇರಿ 28 ಜನ ಬಲಿಯಾಗಿದ್ದರು. ದೇಶಾದ್ಯಂತ ಪಾಕಿಸ್ತಾನಿ ಬೆಂಬಲಿತ ಭಯೋತ್ಪಾದಕರ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಇತ್ತೀಚೆಗಷ್ಟೆ "ಹಿಟ್​ 3' ಚಿತ್ರದ ಪ್ರಚಾರಕ್ಕೆ ಬೆಂಗಳೂರಿಗೆ ಆಗಮಿಸಿದ್ದ ತೆಲುಗು ನಟ ನಾನಿ ಸಹ ಧ್ವನಿಗೂಡಿಸಿದ್ದಾರೆ. ಮೂರು ತಿಂಗಳ ಹಿಂದಷ್ಟೇ ಪಹಲ್ಗಾಮ್​ನಲ್ಲಿ 18 ದಿನಗಳ ಕಾಲ "ಹಿಟ್​ 3' ಶೂಟಿಂಗ್​ ನಡೆಸಿ, ವಾಪಸ್ಸಾಗಿದ್ದ ಅವರು, "ಸಾವಿರಾರು ಪ್ರವಾಸಿಗರು ಬರುತ್ತಿದ್ದರು. ಕರ್ನಾಟಕ, ಆಂಧ್ರದಿಂದಲೂ ತುಂಬ ಜನ ಬಂದಿದ್ದರು. ಅವರ ಸಂಭ್ರಮವನ್ನು ನೋಡಿ ನಾನೂ ಖುಷಿಪಡುತ್ತಿದ್ದೆ. ಕುಟುಂಬದ ಜತೆ ಉತ್ತಮ ಕಾಲ ಕಳೆಯಲು ಅಲ್ಲಿಗೆ ಹೋಗಿದ್ದವರು, ಎಂತಹ ದುರಂತಕ್ಕೆ ಸಾಯಾಗಬೇಕಾಯಿತು ಎಂಬುದನ್ನು ಊಹಿಸಿಕೊಳ್ಳಲೂ ಅಸಾಧ್ಯ. ನಮ್ಮ ಪಾಡಿಗೆ ನಾವಿದ್ದರೂ ಇಂತಹ ಘಟನೆಗಳು ಆಗಾಗ ನಡೆದು, ನಾವು ಎಷ್ಟು ದುರ್ಬಲರು ಎಂಬುದನ್ನು ಪದೇ ಪದೆ ತೋರಿಸುತ್ತಿವೆ. ಕೆಲವೊಮ್ಮೆ ನಮ್ಮ ಕಂಟ್ರೋಲ್​ನಲ್ಲಿ ಏನೂ ಇಲ್ಲವಾ ಅಂತನ್ನಿಸುತ್ತದೆ. ದುಷ್ಟ ಶಕ್ತಿಗಳು ಈಗಲೂ ನಮ್ಮ ಸುತ್ತ ಇವೆ. ಪ್ರಬಲ ಕ್ರಮ ತೆಗೆದುಕೊಳ್ಳಬೇಕು, ಜನರಿಗೆ ನಂಬಿಕೆ ಬರಬೇಕು. ಇಲ್ಲದಿದ್ದರೆ ನಾವು ಎತ್ತ ಸಾಗುತ್ತಿದ್ದೇವೆ ಎಂಬುದೇ ಅರ್ಥವಾಗುವುದಿಲ್ಲ' ಎಂದರು.

ಕನ್ನಡದ ಪ್ರತಿಭೆಗಳಿಗೆ ಅವಕಾಶ

ನಾನಿ ನಾಯಕನಾಗಿದ್ದ "ದಸರಾ' ಚಿತ್ರದಲ್ಲಿ ಕನ್ನಡಿಗ ದೀತ್​ ಶೆಟ್ಟಿ ನಟಿಸಿದ್ದರು. ಇದೀಗ "ಹಿಟ್​ 3'ಯಲ್ಲಿ "ಕೆಜಿಎಫ್​' ಸರಣಿಯ ಶ್ರೀನಿಧಿ ಶೆಟ್ಟಿ ಅಭಿನಯಿಸಿದ್ದಾರೆ. ಈ ಬಗ್ಗೆ ನಾನಿ, "ನನಗಂತೂ ಕನ್ನಡಿಗರ ಜತೆ ನಟಿಸುವುದು ಅಂದರೆ ತುಂಬ ಇಷ್ಟ. ಏಕೆಂದರೆ ಅವರು ತುಂಬ ಸರಳ, ಡೌನ್​ ಟು ಅರ್ತ್​ ಆಗಿರುತ್ತಾರೆ. ಅವರೂ ನನ್ನನ್ನು ತುಂಬ ಇಷ್ಟಪಡುತ್ತಾರೆ. ಮುಂದಿನ ಸಿನಿಮಾಗಳಲ್ಲೂ ಕನ್ನಡದ ಕಲಾವಿದರ ಜತೆ ಕೆಲಸ ಮಾಡಲಿದ್ದೇನೆ' ಎಂದು ಹೇಳಿಕೊಳ್ಳುತ್ತಾರೆ. ಹಾಗೇ "ಕಾಂತಾರ' ಚಿತ್ರ ನೋಡಿರುವುದಾಗಿ ತಿಳಿಸುವ ನಾನಿ, ""ಗರುಡ ಗಮನ ವೃಷಭ ವಾಹನ' ನನ್ನ ಆಲ್​ ಟೈಮ್​ ಫೇವರಿಟ್​ ಸಿನಿಮಾ' ಎನ್ನುತ್ತಾರೆ.

"ಹಿಟ್​ 3' ಪ್ಲ್ಯಾನ್​​ ಇರಲಿಲ್ಲ!

ಡಾ. ಶೈಲೇಶ್​ ಕೊಲನು ನಿರ್ದೇಶನದ "ಹಿಟ್​' ಸರಣಿಯ ಮೂರು ಚಿತ್ರಗಳನ್ನೂ ನಾನಿ ನಿರ್ಮಿಸಿದ್ದು, "ಹಿಟ್​ 3'ಯಲ್ಲಿ ನಾಯಕನಾಗಿ ನಟಿಸಿದ್ದಾರೆ. ಆದರೆ, ಈ ಟ್ರೀಕ್ವೆಲ್​ನಲ್ಲಿ ಅವರು ನಟಿಸುವ ಯೋಚನೆಯೇ ಇರಲಿಲ್ಲವಂತೆ. ""ಹಿಟ್​ 2' ಕ್ಲೆಮ್ಯಾಕ್ಸ್​ನಲ್ಲಿ ಸ್ಟಾರ್​ ಒಬ್ಬರ ಕೇಮಿಯೋ ಇದ್ದರೆ ಚಂದ ಅಂತನ್ನಿಸಿತು. ಆಗ ಬೇರೆ ನಟರು ಸಿಗದ ಕಾರಣ, ನಾನೇ ಅರ್ಜುನ್​ ಸರ್ಕಾರ್​ ಪಾತ್ರ ಮಾಡಿದ್ದೆ. ಸೀಕ್ವೆಲ್​ ಹಿಟ್​ ಆಗಿ, ನನ್ನ ಪಾತ್ರದ ಬಗ್ಗೆಯೂ ಜನರಲ್ಲಿ ಹೆಚ್ಚು ಕುತೂಹಲ ಮೂಡಿತು. ಹೀಗಾಗಿ ಎಲ್ಲಿಗೆ ಹೋದರೂ ಅರ್ಜುನ್​ ಸರ್ಕಾರ್​ ಯಾವಾಗ ಎಂದು ಕೇಳುತ್ತಿದ್ದರು. ಆ ಬಳಿಕ ಈ ಕಥೆ ಮಾಡಿಕೊಂಡೆವು' ಎನ್ನುತ್ತಾರೆ. ಅಂದಹಾಗೆ, "ಹಿಟ್​ 3' ಇಂದು ಪ್ಯಾನ್​ ಇಂಡಿಯಾ ರಿಲೀಸ್​ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net