ಕನ್ನಡ ಸಿನಿಮಾ, ಸಾಹಿತ್ಯ ಕ್ಷೇತ್ರಕ್ಕೆ ಇದು ಉತ್ತುಂಗ ಕಾಲ ಎಂದ ಪ್ರಕಾಶ್ ಬೆಳವಾಡಿ

K 1
Published on

ಬೆಂಗಳೂರು: ಬಹುತೇಕ ನೀನಾಸಂ ಕಲಾವಿದರು, ತಂತ್ರಜ್ಞರೇ ಸೇರಿ ಮಾಡಿರುವ ಚಿತ್ರ ‘ಹಿಕೋರಾ’. ವಿಭಿನ್ನ ಟೈಟಲ್‌ನಿಂದಾಗಿ ಗಮನಸೆಳೆಯುತ್ತಿರುವ ಈ ಚಿತ್ರಕ್ಕೆ ನೀನಾಸಂ ಕಿಟ್ಟಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಟಿಸಿ, ನಿರ್ದೇಶಿಸುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ ಪ್ರಚಾರಕ್ಕೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ನಟ, ನಿರ್ದೇಶಕ ಪ್ರಕಾಶ್ ಬೆಳವಾಡಿ ಚಿತ್ರದ ಟ್ರೇಲರ್ ಬಿಡುಗಡೆಗೊಳಿಸಿ, ಚಿತ್ರತಂಡಕ್ಕೆ ಶುಭ ಹಾರೈಸಿದರು. ‘ಸುಬ್ಬಣ್ಣರ ಕಾಲದಿಂದಲೂ ನನಗೆ ನೀನಾಸಂ ನಂಟಿದೆ. ನನ್ನ ಮಗಳು ಕೂಡ ಅಲ್ಲಿಯೇ ರಂಗ ತರಬೇತಿ ಪಡೆದು, ಇದೀಗ ಚಿತ್ರರಂಗದಲ್ಲಿ ಸಕ್ರಿಯಳಾಗಿದ್ದಾಳೆ. ಈ ಚಿತ್ರದಲ್ಲೂ ಬಹುತೇಕ ನೀನಾಸಂ ಕಲಾವಿದರು ಇರುವುದು ಖುಷಿಯ ವಿಚಾರ. ಯಾವುದೇ ರಂಗವಾಗಲಿ ವೃತ್ತಿಪರವಾಗಿ ಅನುಭವ ಪಡೆದು ಕ್ಷೇತ್ರಕ್ಕೆ ಬರಬೇಕು. ಹೊಸಬರು ಚಿತ್ರರಂಗಕ್ಕೆ ಬಂದಾಗಲೇ ಹೊಸ ಸಾಧ್ಯತೆ ಕಾಣಬಹುದು. 70ರ ದಶಕದಲ್ಲಿ ಸಿನಿಮಾ, ಸಾಹಿತ್ಯ ಹಾಗೂ ರಾಜಕಾರಣದಲ್ಲಿ ಹೊಸತನ ಇತ್ತು. ಅಂತೆಯೇ ಪ್ರಸ್ತುತ ಕೂಡ ನಾವು ಎಲ್ಲ ರಂಗಗಳಲ್ಲಿ ಹೊಸತನ ಕಾಣಬಹುದಾಗಿದೆ’ ಎಂದು ಅಭಿಪ್ರಾಯಪಟ್ಟರು. ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ, ‘ಕನ್ನಡ ಚಿತ್ರರಂಗ ಎದುರಿಸುತ್ತಿರುವ ಕಷ್ಟಗಳನ್ನೇ ಆಧರಿಸಿಯೇ ಅದರ ಬಗ್ಗೆ ಒಂದು ಸಿನಿಮಾ ಮಾಡಬಹುದು. ಆ ತರದ ಕಷ್ಟಗಳನ್ನು ಈ ಚಿತ್ರತಂಡವು ಎದುರಿಸಿದೆ’ ಎಂದರು. ನೀನಾಸಂ ಕಿಟ್ಟಿ ಜತೆ ಸ್ಪಂದನಾ, ಲಾವಂತಿ, ಯಶ್ ಶೆಟ್ಟಿ ಕಲಾ ಬಳಗದಲ್ಲಿದ್ದಾರೆ. ಶೀಘ್ರದಲ್ಲಿ ಬಿಡುಗಡೆ ದಿನಾಂಕ ೋಷಿಸುವ ಆಲೋಚನೆ ಚಿತ್ರತಂಡದ್ದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net