‘ಹಿಕೋರಾ’ದಲ್ಲಿ ನೀನಾಸಂ ಕಲಾವಿದರ ಸಂಗಮ

hikora
Published on

ಬೆಂಗಳೂರು: ಸಾಗರದ ಹೆಗ್ಗೋಡಿನ ‘ನೀಲಕಂಠೇಶ್ವರ ನಾಟ್ಯಸೇವಾ ಸಂಘ’ದಿಂದ (ನೀನಾಸಂ) ಬಂದ ದರ್ಶನ್, ಸತೀಶ್, ಅಶ್ವತ್ಥ್ ಸೇರಿ ಹಲವಾರು ಕಲಾವಿದರು, ತಂತ್ರಜ್ಞರು ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಇದೀಗ ಕನ್ನಡದಲ್ಲಿ ಬರುತ್ತಿರುವ ‘ಹಿಕೋರಾ’ ಎಂಬ ಹೊಸ ಚಿತ್ರದಲ್ಲಿ ನಾಯಕ ನಟ, ನಿರ್ದೇಶಕ, ನಿರ್ಮಾಪಕ ಹಾಗೂ ಬಹುತೇಕ ಕಲಾವಿದರು ನೀನಾಸಂನಿಂದ ಬಂದವರಾಗಿದ್ದಾರೆ. ನೀನಾಸಂ ಕಿಟ್ಟಿ ಕಥೆ, ಚಿತ್ರಕಥೆ, ಸಂಭಾಷಣೆ ರಚಿಸಿ, ನಟನೆಯ ಜತೆಗೆ ‘ಹಿಕೋರಾ’ಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಹಿಂದೆ ನೀನಾಸಂನಲ್ಲಿ ಮೆಸ್ ನಡೆಸುತ್ತಿದ್ದ ಶ್ರೀಧರ್ ಎಂಬುವವರ ಪತ್ನಿ ರತ್ನ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸರ್ದಾರ್ ಸತ್ಯ ಸೇರಿ ಹಲವು ನೀನಾಸಂ ಕಲಾವಿದರಿದ್ದಾರೆ. ಇತ್ತೀಚೆಗೆ ಚಿತ್ರದ ಮೂರು ಹಾಡುಗಳನ್ನು ಬಿಡುಗಡೆಗೊಳಿಸಲಾಯಿತು. ನೀನಾಸಂ ಕಿಟ್ಟಿ, ‘ಸಾಕಷ್ಟು ಸಮಸ್ಯೆಗಳನ್ನು ಎದುರಿಸಿ, ನಮ್ಮ ಚಿತ್ರ ಇದೀಗ ಬಿಡುಗಡೆಗೆ ಸಿದ್ಧವಾಗಿದೆ. ಕರೊನಾ ಬಗ್ಗೆ ಎಲ್ಲರಿಗೂ ಗೊತ್ತು. ಈ ವೈರಸ್ ಹೋಗಲಾಡಿಸಲು ಹಲವಾರು ಆ್ಯಂಟಿ ವೈರಸ್‌ಗಳನ್ನು ಕಂಡುಹಿಡಿಯಲಾಯಿತು. ಅಂತೆಯೇ ‘ಹಿಕೋರಾ’ ಕೂಡ ಒಂದು ಆ್ಯಂಟಿ ವೈರಸ್. ಇದು ಯಾವ ವೈರಸ್ ವಿರುದ್ಧ ಹೋರಾಡುತ್ತದೆ ಎಂಬುದನ್ನು ಸಿನಿಮಾದಲ್ಲಿ ನೋಡಿದರೆ ಚಂದ’ ಎಂದು ಮಾಹಿತಿ ನೀಡಿದರು. ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ, ‘ಈ ಚಿತ್ರದಲ್ಲಿ ಐದು ಹಾಡುಗಳ ಪೈಕಿ ಇದೀಗ ಮೂರು ಸಾಂಗ್ ರಿಲೀಸ್ ಮಾಡಲಾಗಿದೆ. ಶಂಕರ್ ಮಹದೇವನ್ ಸೇರಿ ಹೆಸರಾಂತ ಗಾಯಕ-ಗಾಯಕಿಯರು ಧ್ವನಿಯಾಗಿದ್ದಾರೆ’ ಎಂದರು. ನೀನಾಸಂ ಕಿಟ್ಟಿ ಸೇರಿ ಯಶ್ ಶೆಟ್ಟಿ, ಪ್ರಕಾಶ್ ಬೆಳವಾಡಿ, ಸ್ಪಂದನಾ ಪ್ರಸಾದ್, ಲಾವಂತಿ ಕಲಾ ಬಳಗದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net