ಮನೆಯೂಟ, ಹಾಸಿಗೆಗಾಗಿ ನಟ ದರ್ಶನ್​ ಬೇಡಿಕೆ: ವಿಚಾರಣೆ ನಡೆಸಿದ ಹೈಕೋರ್ಟ್​ ಹೇಳಿದ್ದೇನು?

Darshan
Published on

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್, ಕೆಲವು ಬೇಡಿಕೆಗಳನ್ನು ಪೂರೈಸುವಂತೆ ಹೈಕೋರ್ಟ್​​ಗೆ​ ಸಲ್ಲಿಸಿರುವ ರಿಟ್​ ಅರ್ಜಿಯ ವಿಚಾರಣೆಯನ್ನು ಮುಂದೂಡಲಾಗಿದೆ.

ನ್ಯಾಯಮೂರ್ತಿ ಎಸ್​. ಆರ್​. ಕೃಷ್ಣಕುಮಾರ್​ ಅವರಿದ್ದ ಪೀಠದಲ್ಲಿ ಇಂದು ವಿಚಾರಣೆ ನಡೆಯಿತು. ನಟ ದರ್ಶನ್​ ಪರ ಹಿರಿಯ ವಕೀಲ ಕೆ.ಎನ್​. ಫಣೀಂದ್ರ ವಾದ ಮಂಡಿಸಿದರು. ಜೈಲು ನಿಯಮಾವಳಿಗಳಲ್ಲಿ ಮನೆಯೂಟಕ್ಕೆ ಅವಕಾಶವಿದೆ. ಆದರೆ, ದರ್ಶನ್​ಗೆ ಅವಕಾಶ ನೀಡಿಲ್ಲ ಎಂದರು. ವಕೀಲರ ವಾದವನ್ನು ಆಲಿಸಿರುವ ನ್ಯಾಯಾಲಯ, ಜೈಲಿನ ಕೈಪಿಡಿಯಲ್ಲಿ ಮನೆಯೂಟ ಕಲ್ಪಿಸುವ ಉಲ್ಲೇಖವಿದೆಯೇ? ಎಂದು ಪ್ರಶ್ನಿಸಿ, ಕಾನೂನು ಅನುಸಾರವೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಜೈಲು ಅಧಿಕಾರಿಗಳಿಗೆ ನೋಟಿಸ್​ ಜಾರಿ ಮಾಡಿ, ವಿಚಾರಣೆಯನ್ನು ಜುಲೈ 18ಕ್ಕೆ ಮುಂದೂಡಿದೆ.

ದರ್ಶನ್​ ಬೇಡಿಕೆ ಏನು?

ಜುಲೈ 18ರವರೆಗೆ ದರ್ಶನ್​ ಮತ್ತು ಗ್ಯಾಂಗ್​ಗೆ ನ್ಯಾಯಾಂಗ ಬಂಧನ ವಿಸ್ತರಿಸಲಾಗಿದೆ. ಇದರ ನಡುವೆ 26 ದಿನಗಳಲ್ಲಿ ದರ್ಶನ್​ 10 ಕೆಜಿ ತೂಕ ಕಳೆದುಕೊಂಡಿದ್ದಾರೆ ಎಂಬ ಮಾಹಿತಿ ಇದೆ. ಹೊರಗಡೆ ಐಷಾರಾಮಿ ಜೀವನ ನಡೆಸುತ್ತಿದ್ದ ದರ್ಶನ್​ಗೆ ಜೈಲಿನಲ್ಲಿ ಒಂದೊಂದು ಕ್ಷಣ ಕಳೆಯುವುದು ಕೂಡ ಕಷ್ಟವಾಗುತ್ತಿದೆ. ಚಾಪೆಯಲ್ಲಿ ಮಲಗಲು ಸಾಧ್ಯವಾಗುತ್ತಿಲ್ಲವಂತೆ. ಜೈಲಿನ ಊಟವೂ ಕೂಡ ದೇಹಕ್ಕೆ ಒಗ್ಗಿಕೊಳ್ಳುತ್ತಿಲ್ಲ. ಹೀಗಾಗಿ ಜೈಲು ಅಧಿಕಾರಿಗಳು ಕೆಲವು ಅನುಕೂಲ ಮಾಡಿಕೊಡುವಂತೆ ನಿರ್ದೇಶನ ನೀಡುವಂತೆ ಹೈಕೋರ್ಟ್​ಗೆ ರಿಟ್​ ಅರ್ಜಿ ಸಲ್ಲಿಸಿದ್ದಾರೆಂದು ತಿಳಿದುಬಂದಿದೆ. ಮನೆಯೂಟ, ಹಾಸಿಗೆ ಮತ್ತು ಸಮಯ ಕಳೆಯಲು ಪುಸ್ತಕಗಳನ್ನು ಓದಲು ದರ್ಶನ್​ ಅನುಮತಿ ಕೋರಿದ್ದಾರೆ. ಜೈಲಿನಲ್ಲಿ ದೊರೆಯುತ್ತಿರುವ ಊಟ ದರ್ಶನ್​ಗೆ ಜೀರ್ಣವಾಗುತ್ತಿಲ್ಲವಂತೆ, ಊಟ ಸೇವಿದರೆ ಅತಿಸಾರ ಮತ್ತು ಬೇದಿಯಾಗುತ್ತಿದೆ ಎಂದು ಹೈಕೋರ್ಟ್​ಗೆ ಸಲ್ಲಿಸಿದ ರಿಟ್​ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಕೆಲವು ಬೇಡಿಕೆಗಳನ್ನು ಪೂರೈಸುವಂತೆ ಜೈಲಿನ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ದರ್ಶನ್​ ಪರ ರಿಟ್​ ಅರ್ಜಿ ಸಲ್ಲಿಸಲಾಗಿದೆ.

ಇನ್ನು ದರ್ಶನ್​ ಜೈಲು ಸೇರಿದಾಗಿನಿಂದ ಸರಿಯಾಗಿ ಊಟ ಮಾಡುತ್ತಿಲ್ಲವಂತೆ.​ ಅಲ್ಲದೆ, ದರ್ಶನ್ ಅವರಿಗೆ ಜೈಲಿನ ಊಟ ಕೊಂಚವೂ ಇಷ್ಟವಿಲ್ಲವಂತೆ. ಸರಿಯಾಗಿ ಊಟ ಮಾಡದ ಪರಿಣಾಮ ನಟ ದರ್ಶನ್​ ಬರೋಬ್ಬರಿ 10 ಕೆಜಿ ತೂಕ ಇಳಿಸಿಕೊಂಡಿದ್ದಾರೆಂದು ಜೈಲಿನ ಮೂಲಗಳು ತಿಳಿಸಿವೆ. ದರ್ಶನ್​ ಬಂಧನವಾದಾಗ 107 ಕೆಜಿ ತೂಕವಿದ್ದರು. ಇದೀಗ 97 ಕೆಜಿಗೆ ಇಳಿದಿದ್ದಾರೆ. ಇದೇ ರೀತಿ ತೂಕ ಇಳಿಕೆಯಾದರೆ ಆರೋಗ್ಯಕ್ಕೆ ತೊಂದರೆಯಾಗಲಿದೆ. ಜೀವಕ್ಕೆ ಕುತ್ತು ಬರುವ ಸಾಧ್ಯತೆಯು ಇದೆ. ದರ್ಶನ್ ಅವರು ಜೈಲಿನಲ್ಲಿ ಒಬ್ಬಂಟಿಯಾಗಿದ್ದು, ಯಾರೊಂದಿಗೂ ಮಾತನಾಡಲು ಇಷ್ಟಪಡುತ್ತಿಲ್ಲ ಮತ್ತು ಕಾಲಕಾಲಕ್ಕೆ ದರ್ಶನ್​ ಅವರ ಆರೋಗ್ಯ ಸಂಬಂಧಿ ಪರೀಕ್ಷೆಗಳು ನಡೆಯುತ್ತಿವೆ ಎಂಬ ಮಾಹಿತಿ ಸಿಗುತ್ತಿದೆ.

ಏನಿದು ಪ್ರಕರಣ?

ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್​ ಮತ್ತು ಗೆಳತಿ ಪವಿತ್ರಾ ಗೌಡ ಅರೆಸ್ಟ್​ ಆಗಿರುವ ಸುದ್ದಿ ರಾಜ್ಯದೆಲ್ಲೆಡೆ ಭಾರಿ ಚರ್ಚೆಯಾಗುತ್ತಿದೆ. ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದಕ್ಕೆ ರೇಣುಕಸ್ವಾಮಿಯ ಕೊಲೆ ನಡೆದಿದೆ ಎನ್ನಲಾಗಿದೆ. ಇದರಲ್ಲಿ ದರ್ಶನ್​ ಕೈವಾಡ ಇದೆ. ದರ್ಶನ್​ ಸೂಚನೆ ಕೊಟ್ಟಿದ್ದಕ್ಕೆ ಹಲ್ಲೆ ಮಾಡಿದೆವು ಎಂದು ಬಂಧಿತ ಆರೋಪಿಗಳು ತಪ್ಪೊಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ದರ್ಶನ್​ರನ್ನು ಬಂಧಿಸಲಾಗಿದೆ. ಫೆಬ್ರವರಿ 27ರಿಂದ ದರ್ಶನ್​ ಗೆಳತಿ ಪವಿತ್ರಾ ಗೌಡಗೆ ರೇಣುಕಸ್ವಾಮಿ ಅಶ್ಲೀಲವಾಗಿ ಮೆಸೇಜ್ ಶುರು ಮಾಡಿದ್ದರು. ಅಕೌಂಟ್‌ ಬ್ಲಾಕ್‌ ಮಾಡಿದ್ದರೂ ಹೊಸ ಅಕೌಂಟ್‌ನಿಂದ ಮತ್ತದೇ ಮಸೇಜ್ ಕಳುಹಿಸುತ್ತಿದ್ದ. ಕಳೆದ ಶುಕ್ರವಾರ ಮರ್ಮಾಂಗದ ಫೋಟೋ ಕಳುಹಿಸಿ ‘ದರ್ಶನ್​ಗಿಂತ ನಾನೇನು ಕಡಿಮೆ ಬಾ’ ಎಂದು ಹೇಳಿದ್ದ. ಈ ರೀತಿಯ ಟಾರ್ಚರ್‌ ಸಹಿಸಿಕೊಳ್ಳಲಾಗದೇ ಪವಿತ್ರಾ ಅವರು ತಮ್ಮ ಮನೆಗೆಲಸದವ ಪವನ್​ಗೆ ಹೇಳಿದ್ದರು. ಈ ವಿಚಾರ ದರ್ಶನ್​ಗೆ ತಿಳಿದಿದೆ. ರೇಣುಕ ಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಣ ಮಾಡಿ ಕರೆದುಕೊಂಡು ಬಂದು ಶೆಡ್​ನಲ್ಲಿ ಇರಿಸಿಕೊಂಡು ಹಲ್ಲೆ ಮಾಡಿದ್ದ ದರ್ಶನ್ ಮತ್ತು ಗ್ಯಾಂಗ್​, ಹಲ್ಲೆಯಿಂದ ರೇಣುಕಸ್ವಾಮಿ ನಿಧನ ಹೊಂದಿದ ಬಳಿಕ ಆತಂಕಗೊಂಡು, ಶವವನ್ನು ಸಾಗಿಸುವ ದಾರಿ ಹುಡುಕಿದೆ. ಆಗ ಬೇರೆ ಗ್ಯಾಂಗ್ ಒಂದನ್ನು ಕರೆಸಿ ಅವರಿಗೆ ಶವ ಒಪ್ಪಿಸಿ, ಅದನ್ನು ವಿಲೇವಾರಿ ಮಾಡುವಂತೆ ಹೇಳಿ ಅವರಿಗೆ 30 ಲಕ್ಷ ರೂಪಾಯಿ ಹಣ ನೀಡಿದ್ದಾರೆ. ಈ ಹಣವನ್ನು ದರ್ಶನ್ ಅವರೇ ನೀಡಿದ್ದಾರೆ ಎನ್ನಲಾಗುತ್ತಿದೆ.

ಹಣ ಪಡೆದ ಮತ್ತೊಂದು ಗ್ಯಾಂಗ್ ರೇಣುಕಾ ಸ್ವಾಮಿಯ ಶವವನ್ನು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಸುಮನಹಳ್ಳಿ ಮೋರಿಗೆ ಬಿಸಾಡಿ ಹೋಗಿದ್ದಾರೆ. ಶವ ದೊರೆತ ಬಳಿಕ ತಾವೇ ಕೊಲೆ ಮಾಡಿರುವುದಾಗಿ ಹೇಳಿ ಠಾಣೆಗೆ ಒಪ್ಪಿಕೊಂಡಿದ್ದಾರೆ. ಕೊಲೆ ಮಾಡಲು ಹಣಕಾಸಿನ ವಿಚಾರವೇ ಕಾರಣ ಎಂದು ಹೇಳಿದ್ದಾರೆ. ಆದರೆ ಒಬ್ಬೊಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆ ಮಾಡಿದಾಗ ಅವರ ಹೇಳಿಕೆಯಲ್ಲಿ ವ್ಯತ್ಯಾಸ ಕಂಡುಬಂದಿದೆ. ಬಳಿಕ ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ಮಾಡಿದಾಗ ನಿಜಾಂಶ ಬಯಲಾಗಿದೆ. ಹಣ ಪಡೆದು ಶವ ವಿಲೇವಾರಿ ಜವಾಬ್ದಾರಿ ಹೊತ್ತಿದ್ದ ಗ್ಯಾಂಗ್, ದರ್ಶನ್​ರ ಆಪ್ತನೊಟ್ಟಿಗೆ ಸಂಪರ್ಕದಲ್ಲಿತ್ತಂತೆ. ಶವ ವಿಲೇವಾರಿ ಹಾಗೂ ಕೊಲೆಯ ಆರೋಪ ಹೊರಲೆಂದು ಮುಂಚಿತವಾಗಿಯೇ 30 ಲಕ್ಷ ರೂಪಾಯಿ ಹಣವನ್ನು ದರ್ಶನ್ ಅವರಿಂದ ಈ ಗ್ಯಾಂಗ್ ಪಡೆದಿತ್ತು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net