

ಶ್ರಾವಣ ಮಾಸ ಶುರುವಾದರೆ, ಸಾಲುಸಾಲು ಚಿತ್ರಗಳು ಶುರುವಾಗುವ ಕಾಲವೊಂದಿತ್ತು. ಆದರೆ, ಕರೊನಾ ಹಾವಳಿಯಿಂದ ಚಿತ್ರರಂಗದಲ್ಲಿ ಚಟುವಟಿಕೆಗಳು ಬಹಳ ಕಡಿಮೆಯಾಗಿದ್ದು, ಶ್ರಾವಣ ಮಾಸ ಬಂದರೂ, ಸೆಟ್ಟೇರುತ್ತಿರುವ ಚಿತ್ರಗಳ ಸಂಖ್ಯೆ ಮಾತ್ರ ಬೆರಳಣಿಕೆಯಷ್ಟಾಗಿವೆ.
ಹೀಗಿರುವಾಗಲೇ, 'ಹೇ ರಾಮ್' ಎನ್ನುವ ಚಿತ್ರವೊಂದು ಸದ್ದಿಲ್ಲದೆ ಸೆಟ್ಟೇರಿದೆ. ಜೆ.ಪಿ. ನಗರದ ಸಾಯಿಬಾಬಾ ದೇವಸ್ಥಾನದಲ್ಲಿ ನಡೆದ ಮುಹೂರ್ತ ಸಮಾರಂಭಕ್ಕೆ, 'ಡಾಲಿ' ಧನಂಜಯ್ ಬಂದು ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಶುಭ ಕೋರಿದ್ದಾರೆ.
ಅಂದಹಾಗೆ, ಈ 'ಹೇ ರಾಮ್' ಚಿತ್ರವನ್ನು ಪ್ರವೀಣ್ ಬೇಲೂರು ಎನ್ನುವವರು ನಿರ್ಮಿಸಿ-ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ 'ಕಾವೇರಿ ತೀರದ ಚರಿತ್ರೆ' ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಅವರಿಗೆ ಇದು ಎರಡನೆಯ ಚಿತ್ರ. ಈ ಚಿತ್ರದ ಹೀರೋ ಯಾರು ಎಂಬುದನ್ನು ಅವರು ಇನ್ನೂ ಬಹಿರಂಗಪಡಿಸಿಲ್ಲ. ಇನ್ನು ಧರ್ಮ, ಚೈತ್ರ ಕೋಟೂರು, ಸಪ್ತಮಿ ಗೌಡ ಮುಂತಾದವರು ಪ್ರಮುಖ ಪಾತ್ರ ಮಾಡುತ್ತಿದ್ದಾರೆ.
ಈ ಚಿತ್ರಕ್ಕೆ ಮಾಜಿ ಪೊಲೀಸ್ ಅಧಿಕಾರಿ ಎಸ್.ಕೆ. ಉಮೇಶ್ ಅವರು ಕಥೆ-ಚಿತ್ರಕಥೆ ಬರೆದಿದ್ದಾರೆ. ಕಳೆದ ವಾರವಷ್ಟೇ ಎಸ್.ಪಿ. ಹುದ್ದೆಯಿಂದ ನಿವೃತ್ತರಾಗಿರುವ ಉಮೇಶ್ ಅವರು ಸೇವೆಯಲ್ಲಿದ್ದಾಗ, ಹಲವು ಘಟನೆಗಳಿಗೆ ಸಾಕ್ಷಿಯಾಗಿದ್ದರು. ಆ ನೈಜ ಘಟನೆಗಳನ್ನೆಲ್ಲಾ ಪುಸ್ತಕ ರೂಪದಲ್ಲಿ ದಾಖಲಿಸಿಕೊಂಡಿದ್ದ ಅವರು, ಆ ಪುಸ್ತಕದ ಒಂದು ಭಾಗವನ್ನು ಈ ಸಿನಿಮಾ ಮೂಲಕ ತೋರಿಸುವುದಕ್ಕೆ ಹೊರಟಿದ್ದಾರಂತೆ. ಇನ್ನು, ಅವರ ಪಾತ್ರವನ್ನು ನಟ ಧರ್ಮ ನಿರ್ವಹಿಸುತ್ತಿದ್ದಾರೆ ಎನ್ನುವುದು ವಿಶೇಷ.
ಈ ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ಪ್ರವೀಣ್, 'ಒಬ್ಬ ಮನುಷ್ಯ ಕ್ರೈಮ್ಗೆ ಸಿಕ್ಕಾಗ ಏನೆಲ್ಲಾ ಅನುಭವಿಸುತ್ತಾನೆ. ಅವನ ಮನೆಯವರು ಏನೆಲ್ಲಾ ಅನುಭವಿಸಬೇಕಾಗುತ್ತದೆ ಎಂಬುದನ್ನು ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದೇವೆ' ಎನ್ನುತ್ತಾರೆ. ಹಾಗೆಯೇ ಈ ಚಿತ್ರದಲ್ಲಿ ನಾಯಕ-ನಾಯಕಿ ಎನ್ನುವುದಕ್ಕಿಂತ, ಕಥೆಯೇ ನಾಯಕ ಎಂಬುದು ಅವರ ಅಭಿಪ್ರಾಯ.
ಈ ಚಿತ್ರಕ್ಕೆ ವಿ. ನಾಗೇಂದ್ರ ಪ್ರಸಾದ್ ಸಂಗೀತ ಸಂಯೋಜಿಸಿದ್ದು, ಹಾಡುಗಳನ್ನೂ ಅವರೇ ರಚಿಸಿದ್ದಾರೆ.