

ಬೆಂಗಳೂರು: ರಿಷಭ್ ಶೆಟ್ಟಿ ಅಭಿನಯದ ಮತ್ತು ನಿರ್ಮಾಣದ 'ಹೀರೋ' ಚಿತ್ರದ ಟ್ರೇಲರ್, ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆಯಾದ ನಂತರ ಈ ಚಿತ್ರದ ಬಿಡುಗಡೆ ಯಾವಾಗ ಎಂಬ ಪ್ರಶ್ನೆ ಎಲ್ಲರಲ್ಲೂ ಇದ್ದೇ ಇತ್ತು. ಬಹುಶಃ ಫೆಬ್ರವರಿಯಲ್ಲಿ ಬಿಡುಗಡೆಯಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಫೆಬ್ರವರಿಯಲ್ಲಿ ಯಾವಾಗ ಬಿಡುಗಡೆ ಎಂಬ ಕುರಿತಾಗಿ ನಿಖರವಾಗಿ ಮಾಹಿತಿ ಇರಲಿಲ್ಲ.
ಇದನ್ನೂ ಓದಿ: ಜೂ. ಎನ್ಟಿಆರ್-ನೀಲ್ ಸಿನಿಮಾ ಪಕ್ಕಾ
ಇದೀಗ, ಚಿತ್ರದ ಬಿಡುಗಡೆ ದಿನಾಂಕ ಕೊನೆಗೂ ಫಿಕ್ಸ್ ಆಗಿದೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿರುವ ರಿಷಭ್, ಚಿತ್ರವನ್ನು ಮಾರ್ಚ್ ಐದರಂದು ರಾಜ್ಯಾದ್ಯಂತ ಬಿಡಗುಡೆ ಮಾಡುವುದಾಗಿ ಹೇಳಿದ್ದಾರೆ. ಮುಖ್ಯ ಚಿತ್ರಮಂದಿರ ಮತ್ತು ರಾಜ್ಯಾದ್ಯಂತ ಎಷ್ಟು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂಬ ವಿಷಯ ಇನ್ನಷ್ಟೇ ಬಹಿರಂಗವಾಗಬೇಕಿದೆ.
ಅಂದಹಾಗೆ, ಲಾಕ್ಡೌನ್ ಮುಗಿದ ನಂತರ ಶುರುವಾದ ಮೊದಲ ಚಿತ್ರವೆಂದರೆ ಅದು 'ಹೀರೋ'. ಚಿಕ್ಕಮಗಳೂರು ಬಳಿಯ ಎಸ್ಟೇಟ್ವೊಂದಕ್ಕೆ ಹೋದ ರಿಷಭ್ ಮತ್ತು ಅವರ ಚಿತ್ರತಂಡ, ಅಲ್ಲೇ 40ಕ್ಕೂ ಹೆಚ್ಚು ದಿನಗಳ ಕಾಲ ಚಿತ್ರೀಕರಣ ಮಾಡಿಕೊಂಡು ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಇಷ್ಟು ದಿನಗಳ ಕಾಲ ಪೋಸ್ಟ್ಪ್ರೊಡಕ್ಷನ್ ಹಂತದಲ್ಲಿದ್ದ ಚಿತ್ರ, ಇದೀಗ ಮುಕ್ತಾಯದ ಹಂತಕ್ಕೆ ಬಂದಿದ್ದು, ಸದ್ಯದಲ್ಲೇ ಸೆನ್ಸಾರ್ ಆಗಲಿದೆ.
'ಹೀರೋ' ಚಿತ್ರದಲ್ಲಿ ರಿಷಭ್ ಶೆಟ್ಟಿ, ಗಾನವಿ ಲಕ್ಷ್ಮಣ್, ಪ್ರಮೋದ್ ಶೆಟ್ಟಿ ಮುಂತಾದವರು ನಟಿಸಿದ್ದಾರೆ. ಅಶೋಕವನ ಎಸ್ಟೇಟ್ ಎಂಬ ಎಸ್ಟೇಟ್ನಲ್ಲಿ ನಡೆಯುವ ಕಥೆ ಇರುವ ಈ ಚಿತ್ರವನ್ನು ನಿರ್ದೇಶಿಸಿರುವವರು ಭರತ್ ರಾಜ್. 'ಕಿರಿಕ್ ಪಾರ್ಟಿ' ಮುಂತಾದ ಚಿತ್ರಗಳಿಗೆ ನಿರ್ದೇಶಕರಾಗಿದ್ದ ಭರತ್, 'ಹೀರೋ' ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಈ ಚಿತ್ರಕ್ಕಿದೆ.