ಮಲೆನಾಡ ಹುಡುಗನ ಮದ್ವೆ ಪ್ರಸಂಗ; ನಾಣಿಯ ಕಥೆಯ ಜತೆಗೆ ವಾಪಸಾದ ಹೇಮಂತ್

Malenad Madve
Published on

ಬೆಂಗಳೂರು: ‘ಸ’ ಚಿತ್ರದ ನಂತರ ನಟ-ನಿರ್ದೇಶಕ ಹೇಮಂತ್ ಹೆಗಡೆ ಸುದ್ದಿಯೇ ಇರಲಿಲ್ಲ. ಈಗ ಒಂದಲ್ಲ, ಎರಡು ಚಿತ್ರಗಳನ್ನು ನಿರ್ದೇಶಿಸುವುದಕ್ಕೆ ತಯಾರಿ ನಡೆಸಿದ್ದಾರೆ. ವಸಿಷ್ಠ ಸಿಂಹ ಮತ್ತು ಟಿ.ಎನ್. ಸೀತಾರಾಂ ಅಭಿನಯದಲ್ಲಿ ಒಂದು ಥ್ರಿಲ್ಲರ್ ಚಿತ್ರ ನಿರ್ದೇಶಿಸುವುದಕ್ಕೆ ಅವರು ತಯಾರಿ ನಡೆಸಿದ್ದು, ಅದಕ್ಕೂ ಮುನ್ನ ‘ನಮ್ ನಾಣಿ ಮದ್ವೆ ಪ್ರಸಂಗ’ ಎಂಬ ಕಾಮಿಡಿ ಚಿತ್ರವನ್ನು ಸದ್ದಿಲ್ಲದೆ ಪ್ರಾರಂಭಿಸಿದ್ದಾರೆ. ‘ನಮ್ ನಾಣಿ ಮದ್ವೆ ಪ್ರಸಂಗ’ ಚಿತ್ರದ ಮುಹೂರ್ತ ಇತ್ತೀಚೆಗೆ ಬೆಂಗಳೂರಿನ ಧರ್ಮಗಿರಿ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ನಡೆಯಿತು. ಚಿತ್ರದ ಮೊದಲ ದೃಶ್ಯಕ್ಕೆ ಟಿ.ಎನ್. ಸೀತಾರಾಂ ಕ್ಲಾಪ್ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು.

ಹೆಸರು ಹೇಳುವಂತೆ ಇದು ನಾಣಿ ಎಂಬ ಯುವಕನ ಕುರಿತಾದ ಚಿತ್ರ. ಹೆಸರು ಸೂಚಿಸುವಂತೆ ಅವನ ಮದುವೆಯ ಕುರಿತಾದ ತಮಾಷೆಯ ಚಿತ್ರ. ಈ ಬಗ್ಗೆ ಮಾತನಾಡುವ ಹೇಮಂತ್, ‘ಮಲೆನಾಡಿನಲ್ಲಿ ಕೃಷಿ ಮಾಡುವ ಹುಡುಗರಿಗೆ ಹುಡುಗಿ ಸಿಗುವುದಿಲ್ಲ. ನನ್ನ ಕಸಿನ್ ಒಬ್ಬ ಇಲ್ಲಿ ಹೆಣ್ಣು ಸಿಗದೇ, ಕೊನೆಗೆ ಮದುವೆಯಾಗುವುದಕ್ಕೆ ಕಾಶ್ಮೀರದವರೆಗೂ ಹೋಗಿ ಬಂದ. ಇಂಥದ್ದೊಂದು ಜ್ವಲಂತ ಸಮಸ್ಯೆಯೊಂದನ್ನು ಇಟ್ಟುಕೊಂಡು, ಅದನ್ನು ಹಾಸ್ಯದ ಮೂಲಕ ಹೇಳುವ ಪ್ರಯತ್ನ ಮಾಡುತ್ತಿದ್ದೇನೆ. ಸಾಮಾಜಿಕ ಸಂದೇಶವಿರುವ ಸುಂದರ ಚಿತ್ರ ಇದಾಗಿರಲಿದೆ ಎಂಬ ನಂಬಿಕೆ ನನಗಿದೆ’ ಎಂದರು.

ಚಿತ್ರದಲ್ಲಿ ನಾಯಕಿಯರಾಗಿ ಶ್ರೇಯಾ ವಸಂತ್ ಮತ್ತು ಶ್ರುತಿ ನಂದೀಶ್ ನಟಿಸುತ್ತಿದ್ದಾರೆ. ರಾಜೇಶ್ ನಟರಂಗ, ಶರತ್ ಲೋಹಿತಾಶ್ವ, ನಾರಾಯಣಸ್ವಾಮಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಜನವರಿ 15ರ ನಂತರ ಶಿರಸಿ ಸುತ್ತಮುತ್ತ 30 ದಿನಗಳ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net