heggana muddu
ಹೆಗ್ಗಣ ಮುದ್ದು ಚಿತ್ರದ ದೃಶ್ಯ

HEGGANA MUDDU REVIEW: ಅನುಮಾನ, ಅನುಕಂಪ, ಅನುರಾಗ

ನಿರ್ದೇಶಕ ಅವಿನಾಶ್ ಮುದವಾದ ಕಥೆಯಲ್ಲಿ ಟರ್ನ್ ಆ್ಯಂಡ್ ಟ್ವಿಸ್ಟ್ ಜತೆಗೆ ಥ್ರಿಲ್ಲಿಂಗ್ ಅಂಶಗಳ ಮೂಲಕ ಸಿನಿಮಾ ನಿರೂಪಿಸಿದ್ದಾರೆ. ಕಲಾವಿದರ ಸಹಜ ನಟನೆ, ತಿಳಿಹಾಸ್ಯ, ಮನಮಟ್ಟುವ ಸಂಭಾಷಣೆ ಇಡೀ ಸಿನಿಮಾ ನೋಡಿಸಿಕೊಳ್ಳುತ್ತದೆ.
Published on: 
HEGGANA MUDDU REVIEW(3.5 / 5)

ಚಿತ್ರ: ಹೆಗ್ಗಣ ಮುದ್ದು

ನಿರ್ದೇಶನ: ಅವಿನಾಶ್ ಬಳೆಕ್ಕಲ

ನಿರ್ಮಾಣ: ಡಾಲಿ ಧನಂಜಯ

ತಾರಾಗಣ: ಪೂರ್ಣಚಂದ್ರ ಮೈಸೂರು, ಅದಿತಿ ಸಾಗರ್, ರೇಖಾ ಕೂಡ್ಲಿಗಿ, ವಿಜಯ್ ಶೋಭರಾಜ್ ಪಾವೂರು ಮತ್ತಿತರರು.

ಶಿವ ಸ್ಥಾವರಮಠ

ಮನಸ್ಸಿನಲ್ಲಿ ಸಣ್ಣ ಅನುಮಾನವೊಂದು ಸುಳಿದರೆ ಸಾಕು ಅದು ನಮ್ಮನ್ನು ಮಾನಸಿಕವಾಗಿ ಹೆಗ್ಗಣದಂತೆ ಕೊರೆದು ಬಿಡುತ್ತದೆ. ಕೆಲಸ ಮಾಡಲು ಬಿಡುವುದಿಲ್ಲ, ನಿದ್ದೆ, ನೆಮ್ಮದಿ ಎಲ್ಲವನ್ನೂ ಕಸಿದುಬಿಡುತ್ತದೆ. ಆಗ ಮನುಷ್ಯ ಏನೆಲ್ಲಾ ಮಾಡಲು ಮುಂದಾಗುತ್ತಾನೆ ಎಂಬುದನ್ನೇ ‘ಹೆಗ್ಗಣ ಮುದ್ದು’ ಸಿನಿಮಾ ಪ್ರಸ್ತುತಪಡಿಸುತ್ತದೆ. ಇಲ್ಲಿ ಮನುಷ್ಯನ ಅನುಮಾನವನ್ನೇ ರೂಪಕವಾಗಿ ‘ಹೆಗ್ಗಣ’ ಎಂದು ಟೈಟಲ್‌ನಲ್ಲಿ ಬಳಸಿರುವುದು ವಿಶೇಷ.

ಮಾರ್ಕೆಟಿಂಗ್ ಕಂಪನಿಯ ಉದ್ಯೋಗಿ ಅಜಿತ್ (ಪೂರ್ಣ) ಮಾತಿನಲ್ಲಿಯೇ ಮನೆ ಕಟ್ಟುವ ಕುಶಲ ಮಾತುಗಾರ. ಇಂತಹ ವಾಚಾಳಿಗೆ ಎಲ್ಲವೂ ಮನಸ್ಸಿನಲ್ಲಿಯೇ ಅದುಮಿಟ್ಟುಕೊಂಡು ಬದುಕುವ ಪ್ರೇರಣಾ (ಅದಿತಿ) ಜತೆ ಮದುವೆಯಾಗುತ್ತದೆ. ಪ್ರೇರಣಾ ಕೂಡ ಗಂಡನಿಗೆ ಹೆಗಲಾಗಲು ಆಭರಣ ಮಳಿಗೆಯಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ. ಯುವಜೋಡಿಯ ಮೊದಲ ರಾತ್ರಿಯೇ ಆಕೆಯ ಬದುಕಿನಲ್ಲಿ ನಡೆದ ಫ್ಲಾಷ್ ಬ್ಯಾಕ್​ ಸ್ಟೋರಿ ಅಜಿತ್‌ಗೆ ತಿಳಿಯುತ್ತದೆ. ಅದೇ ಆತನ ಅನುಮಾನಕ್ಕೆ ಕಾರಣವಾಗಿ ಪ್ರೇರಣಾ ವಿರುದ್ಧ ಪತ್ತೇದಾರಿಕೆ ಶುರು ಮಾಡುತ್ತಾನೆ. ಆ ವೇಳೆ ನಡೆಯುವ ಕೆಲ ಅವಾಂತರಗಳು ಇಬ್ಬರ ಮುನಿಸಿಗೂ ಕಾರಣವಾಗುತ್ತದೆ. ಮುಂದೆ ಅಜಿತ್ ಹೇಗೆ ಪ್ರೇರಣಾಳನ್ನು ಮನವೊಲಿಸುತ್ತಾನೆ. ಅಜಿತ್‌ನಲ್ಲಿ ಹೆಗ್ಗಣದಂತೆ ಕೊರೆಯುವ ಅನುಮಾನ ಹುಟ್ಟಿದ್ದೇಕೆ? ತಿಳಿಯಲು ‘ಹೆಗ್ಗಣ ಮುದ್ದು’ ಚಿತ್ರ ನೋಡಬೇಕಷ್ಟೇ.

ನಿರ್ದೇಶಕ ಅವಿನಾಶ್ ಮುದವಾದ ಕಥೆಯಲ್ಲಿ ಟರ್ನ್ ಆ್ಯಂಡ್ ಟ್ವಿಸ್ಟ್ ಜತೆಗೆ ಥ್ರಿಲ್ಲಿಂಗ್ ಅಂಶಗಳ ಮೂಲಕ ಸಿನಿಮಾ ನಿರೂಪಿಸಿದ್ದಾರೆ. ಕಲಾವಿದರ ಸಹಜ ನಟನೆ, ತಿಳಿಹಾಸ್ಯ, ಮನಮಟ್ಟುವ ಸಂಭಾಷಣೆ ಇಡೀ ಸಿನಿಮಾ ನೋಡಿಸಿಕೊಳ್ಳುತ್ತದೆ. ಇಲ್ಲಿ ಯಾವುದೇ ಅಬ್ಬರವಿಲ್ಲ, ಕಥೆ ಗಂಭೀರತೆ ಪಡೆದಾಗ ಮೌನ ಆವರಿಸುತ್ತದೆ. ಆಗ ಪ್ರೇಕ್ಷಕರಿಗೂ ಯೋಚಿಸಲು ಅವಕಾಶವಿದೆ. ಆ ಮೂಲಕ ಸಹಜ ಕಥೆಯಲ್ಲೂ ಗಂಭೀರ ಆಲೋಚನೆಗಳನ್ನು ತಂದು ನಿರ್ದೇಶಕರು ಜಾಣ್ಮೆ ಪ್ರದರ್ಶಿಸಿದ್ದಾರೆ. ಪೂರ್ಣಚಂದ್ರ ಮೈಸೂರು ಮತ್ತು ಅದಿತಿ ಸಾಗರ್ ಸುತ್ತವೇ ಇಡೀ ಸಿನಿಮಾ ಸಾಗುವ ಕಾರಣ ಇಬ್ಬರೂ ಜಿದ್ದಿಗೆ ಬಿದ್ದು ನಟಿಸಿದ್ದಾರೆ. ಈಗಾಗಲೇ ‘ಎಕ್ಕ’ ಸೇರಿ ಕೆಲ ಚಿತ್ರಗಳಲ್ಲಿ ತಾವೊಬ್ಬ ಉತ್ತಮ ಕಲಾವಿದನೆಂದು ಸಾಬೀತುಪಡಿಸಿರುವ ಪೂರ್ಣ ಇಲ್ಲಿಯೂ ಪೂರ್ಣಅಂಕ ಗಳಿಸುತ್ತಾರೆ. ಅದಿತಿ ಸಾಗರ್ ಅಂತರ್ಮುಖಿಯಾಗಿ ನಟನೆಯನ್ನು ಬಹಿರಂಗಗೊಳಿಸಿದ್ದಾರೆ. ಕಾರ್ತಿಕ್-ಬಕ್ಕೇಶ್ ರೋಣದ್ ಸಂಗೀತ ಕಥೆಗೆ ಪೂರಕವಾಗಿದ್ದು, ಇಷ್ಟವಾಗುತ್ತದೆ. ಮುದವಾದ ಕಥೆಯನ್ನು ಕಣ್ತುಂಬಿಕೊಳ್ಳಲು ‘ಹೆಗ್ಗಣ ಮದ್ದು’ ಸೂಕ್ತ ಆಯ್ಕೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net