

ದೇಶದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಗೆ ದಿನಗಣನೆ ಆರಂಭಗೊಂಡಿದೆ. ಇದೇ ಆ.15ರಂದು ಇಡೀ ದೇಶ ಸ್ವಾತಂತ್ರ್ಯ ದಿನವನ್ನು ಆಚರಿಸಲಿದೆ. ಈ ಪ್ರಯುಕ್ತ ಹಿಂದಿಯ ‘ಹೀರ್ ಎಕ್ಸ್‌ಪ್ರೆಸ್’ ಚಿತ್ರತಂಡವು ‘ಐ ಲವ್ ಮೈ ಇಂಡಿಯಾ’ ಎಂಬ ಗೀತೆಯನ್ನು ರಿಲೀಸ್ ಮಾಡಿದೆ. ಶ್ಲೋಕ್ ಲಾಲ್ ರಚಿಸಿರುವ ಈ ದೇಶಭಕ್ತಿ ಗೀತೆಗೆ ನಿಕಿತಾ ಗಾಂಧಿ, ಜಾವೇದ್ ಅಲಿ ಧ್ವನಿಯಾಗಿದ್ದಾರೆ. ತನಿಷ್ಕಾ ಬಾಗ್ಚಿ ಸಂಗೀತ ಸಂಯೋಜಿಸಿದ್ದಾರೆ. ಇನ್ನು ಲಂಡನ್‌ನ ಬೀದಿಗಳಲ್ಲಿ ಈ ಚಿತ್ರದ ಹಾಡಿನ ಚಿತ್ರೀಕರಣ ಮಾಡಿರುವುದು ಮತ್ತೊಂದು ವಿಶೇಷ. ಭಾರತದ ಸಾಧನೆ ಹಾಗೂ ಪ್ರತಿಯೊಬ್ಬ ಭಾರತೀಯ ದೇಶದ ಮೇಲೆ ಹೊಂದಿರುವ ಆಳವಾದ ಪ್ರೀತಿಯನ್ನು ಈ ಗೀತೆ ಪ್ರಚುರಪಡಿಸುತ್ತದೆ. ಈ ಗೀತೆಯಲ್ಲಿ ನಟಿ ದೀವಿತಾ ಜುನೇಜಾ ಹಾಗೂ ನಟ ಪ್ರೀತ್ ಕಮನಿ ತ್ರಿವರ್ಣ ಧ್ವಜ ಎತ್ತಿ ಹಿಡಿದು ದೇಶದ ಮಹಿಮೆ ಸಾರಿದ್ದಾರೆ. ‘ಓ ಮೈ ಗಾಡ್’ ಖ್ಯಾತಿಯ ನಿರ್ದೇಶಕ ಉಮೇಶ್ ಶುಕ್ಲಾ ಆ್ಯಕ್ಷನ್-ಕಟ್ ಹೇಳಿರುವ ಹಿಂದಿಯ ‘ಹೀರ್ ಎಕ್ಸ್‌ಪ್ರೆಸ್’ ಚಿತ್ರವು ಟ್ರೇಲರ್ ಹಾಗೂ ಮೂರು ಸಾಂಗ್‌ಗಳ ಮೂಲಕ ಈಗಾಗಲೇ ಗಮನಸೆಳೆದಿದೆ. ಮೆರ‌್ರಿ ಗೋ ರೌಂಡ್ ಸ್ಟುಡಿಯೋಸ್ ಪ್ರೊಡಕ್ಷನ್ಸ್ ಮತ್ತು ಕ್ರಿಯೇಟಿವ್ ಸ್ಟ್ರೋಕ್ಸ್ ಗ್ರೂಪ್ ಜಂಟಿಯಾಗಿ ನಿರ್ಮಿಸಿರುವ ‘ಹೀರ್ ಎಕ್ಸ್‌ಪ್ರೆಸ್’ ಚಿತ್ರದ ಮೂಲಕ ಯುವನಟಿ ದಿವೀತಾ ಜುನೇಜಾ ಬಾಲಿವುಡ್‌ಗೆ ಪದಾರ್ಪಣೆ ಮಾಡುತ್ತಿದ್ದು, ಪ್ರೀತ್ ಕಮನಿಗೆ ಜೋಡಿಯಾಗಿದ್ದಾರೆ. ಅಶುತೋಷ್ ರಾಣಾ, ಗುಲ್ಶನ್ ಗ್ರೋವರ್, ಸಂಜಯ್ ಮಿಶ್ರಾ, ಮೇಘನಾ ಮಲಿಕ್ ಜತೆ ಬ್ರಿಟನ್‌ನ ಹಲವು ಕಲಾವಿದರು ತಾರಾಗಣದಲ್ಲಿದ್ದಾರೆ. ಇದೇ ಸೆ.12ರಂದು ವಿಶ್ವಾದ್ಯಂತ ಸಿನಿಮಾ ರಿಲೀಸ್ ಆಗಲಿದೆ. -ಏಜೆನ್ಸೀಸ್