‘ಹೆಬ್ಬುಲಿ ಕಟ್’ ಸಾರಥಿಗಳು: ಉತ್ತರ ಕರ್ನಾಟಕ ಮೂಲದ ಕಥೆಯಲ್ಲಿ ಕಲಾತ್ಮಕ ಕಲಾವಿದರ ಸಂಗಮ

hebbuli
Published on

ರಾಯಚೂರಿನ ಮಾನ್ವಿ ಮೂಲದ ಪಿ.ಭೀಮರಾವ್ ನಿರ್ದೇಶನದ ‘ಹೆಬ್ಬುಲಿ ಕಟ್’ ಚಿತ್ರ ಇದೇ ಶುಕ್ರವಾರ (ಜು. 4) ಬಿಡುಗಡೆಯಾಗುತ್ತಿದೆ. ಉತ್ತರ ಕರ್ನಾಟಕ ಹಿನ್ನೆಲೆಯ ಈ ಚಿತ್ರವು ಈಗಾಗಲೇ ಟ್ರೇಲರ್ ಮೂಲಕ ಪ್ರೇಕ್ಷಕರ ಗಮನ ಸೆಳೆದಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಕಲಾವಿದರಾದ ಮಹಾದೇವ ಹಡಪದ, ಉಮಾ ವೈ.ಜಿ ಹಾಗೂ ತೆಲುಗು ನಟ ವಿನಯ್ ತಮ್ಮ ಪಾತ್ರ ಹಾಗೂ ಸಿನಿಮಾ ಜರ್ನಿ ಬಗ್ಗೆ ‘ವಿಜಯವಾಣಿ’ ಜತೆ ಮಾಹಿತಿ ಹಂಚಿಕೊಂಡರು.

ಸಂಭ್ರಮದ ಜತೆ ಮರುಕಪಡುವ ಕಥೆ

‘ಫೋಟೋ’ ಚಿತ್ರದ ಮೂಲಕ ಜನಪ್ರಿಯರಾಗಿರುವ ರಂಗಭೂಮಿ ಕಲಾವಿದ ಮಹಾದೇವ ಹಡಪದ ‘ಹೆಬ್ಬುಲಿ ಕಟ್’ನಲ್ಲಿ ನಾಯಕನಟನ ತಂದೆಯ ಪಾತ್ರವನ್ನು ನಿರ್ವಹಿಸಿದ್ದಾರೆ. ‘ನಾನು ಒಂದು ಸಿನಿಮಾ ಶೂಟಿಂಗ್‌ನಲ್ಲಿದ್ದೆ. ಅಲ್ಲಿಗೆ ಬಂದಿದ್ದ ಭೀಮರಾವ್ ಈ ಕಥೆ ಹೇಳಿದರು. ಕೇಳಿದ ಕೂಡಲೇ ಇಷ್ಟವಾಯಿತು. ನರೇಷನ್ ತುಂಬಾ ಚೆನ್ನಾಗಿರುವ ಕಾರಣ ತಂಡ ಸೇರಿದೆ. ಇಲ್ಲಿ ನನ್ನದು ಹೀರೋ ವಿನ್ಯಾನ ತಂದೆಯ ಪಾತ್ರ. ನೋವುಗಳನ್ನು ಮುಚ್ಚಿಟ್ಟುಕೊಂಡು, ಕಷ್ಟದಲ್ಲಿ ಬದುಕುತ್ತಿರುವ ಶ್ರಮಜೀವಿ. ಈ ಕಥೆಯಲ್ಲಿ ಸಂಭ್ರಮದ ಜತೆಗೆ ಮರುಕವೂ ಇದೆ. ಜತೆ ಜತೆಗೆ ಭಾವನೆಗಳು ನಮ್ಮೊಂದಿಗೆ ಹೆಜ್ಜೆ ಹಾಕುತ್ತವೆ. ನಾನೂ ಉತ್ತರ ಕರ್ನಾಟಕದವನೇ. ಆದರೆ, ಇದು ರಾಯಚೂರು ಭಾಗದ ಕಥೆಯಾಗಿದ್ದರಿಂದ ಭಾಷೆಯ ಶೈಲಿಯ ಸವಾಲು ಎದುರಿಸಬೇಕಾಯಿತು. ಧಾರ್ಮಿಕ, ಸಾಮಾಜಿಕ ಹಾಗೂ ವೃತ್ತಿಯ ವಿಷಯಗಳ ಜತೆಗೆ ರಂಜನೀಯ ಭಾವವೂ ಚಿತ್ರದಲ್ಲಿದೆ. ಹಾಗಾಗಿ, ಈ ಕಥೆ ವಿಭಿನ್ನವಾಗುತ್ತದೆ. ಈಗಾಗಲೇ ‘ಹೆಬ್ಬುಲಿ ಕಟ್’ ಚಿತ್ರವನ್ನು ನಾನು ನೋಡಿದ್ದೇನೆ. ಚಿತ್ರ ಮುಗಿದ ಬಳಿಕ ಸುಧಾರಿಸಿಕೊಳ್ಳಲು ಅರ್ಧ ಗಂಟೆ ಬೇಕಾಯಿತು. ಅಷ್ಟು ಚೆನ್ನಾಗಿ ಮೂಡಿಬಂದಿದೆ. ಒಳ್ಳೆಯ ಕಥೆಯ ಭಾಗವಾಗಿದ್ದೇನೆ ಎಂಬ ಹೆಮ್ಮೆಯಿದೆ’ ಎಂದು ಮಾಹಿತಿ ಹಂಚಿಕೊಳ್ಳುತ್ತಾರೆ.

ಟಿಪಿಕಲ್, ರೆಬೆಲಿಸ್ಟ್ ತಾಯಿ

‘ಪಲಾರ್’ ಖ್ಯಾತಿಯ ಉಮಾ ವೈ.ಜಿ. ಮೂಲತಃ ಕೋಲಾರದ ಬಂಗಾರಪೇಟೆಯವರು. ಸಿನಿಮಾದ ಜತೆ ಜತೆಗೆ ರಂಗಭೂಮಿಯಲ್ಲಿ ಹೆಜ್ಜೆ ಹಾಕುತ್ತಿರುವ ಅವರು, ‘ಹೆಬ್ಬುಲಿ ಕಟ್’ ಭಾಗವಾಗಿದ್ದಾರೆ. ‘‘ಬದುಕು ಕಮ್ಯುನಿಟಿ’ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿದ್ದೆ. ಆ ಕಾರ್ಯಕ್ರಮಕ್ಕೆ ಬಂದಿದ್ದ ಭೀಮರಾವ್, ನನ್ನ ಹಿಂದಿನ ಸಿನಿಮಾಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಹಾಗೆಯೇ, ಮುಂದುವರಿದು, ‘ಹೆಬ್ಬುಲಿ ಕಟ್’ ಬಗ್ಗೆ ಪ್ರಸ್ತಾಪಿಸಿ, ಈ ಕಥೆಯಲ್ಲಿ ಒಂದು ಪಾತ್ರ ಮಾಡಬೇಕು ಎಂದು ನೀಡಿದ ಆಹ್ವಾನಕ್ಕೆ ತಕ್ಷಣ ಒಪ್ಪಿಕೊಂಡೆ. ನಾನು ಈ ಚಿತ್ರದಲ್ಲಿ ಉತ್ತರ ಕರ್ನಾಟಕದ ತಾಯಂದಿರನ್ನು ಪ್ರತಿನಿಧಿಸುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಮಗ ಯಾವತ್ತಿಗೂ ಅಚ್ಚುಕಟ್ಟಾಗಿ, ಶಿಸ್ತಿನಿಂದ ಇರಬೇಕು ಎಂದು ಬಯಸುವವಳು. ಟಿಪಿಕಲ್ ಜತೆಗೆ ಸ್ವಲ್ಪ ರೆಬೆಲಿಸ್ಟ್ ಎನ್ನಬಹುದು. ಪಾತ್ರದಲ್ಲಿ ಹೋರಾಟವು ಇದೆ. ಇನ್ನು ನಾನು ಕೋಲಾರದವಳು. ಈ ಕಥೆಯಲ್ಲಿ ಪಕ್ಕಾ ರಾಯಚೂರು ಭಾಷೆ. ನಾನು ರಂಗ ಸಂಚಾರ ಮಾಡಿರುವ ಕಾರಣ, ಎಲ್ಲ ರೀತಿಯ ಭಾಷೆಗಳನ್ನೂ ಕೇಳಿದ್ದೇನೆ. ಹಾಗಾಗಿ, ಆ ಭಾಗದ ಶೈಲಿಗೆ ಬೇಗ ಒಗ್ಗಿಕೊಂಡೆ. ಹೀಗಾಗಿ ನಾನೇ ಡಬ್ಬಿಂಗ್ ಮಾಡಿದ್ದೇನೆ. ನನಗೆ ಈ ಸಿನಿಮಾ ಮೂಲಕ ಉತ್ತರ ಕರ್ನಾಟಕದ ಜನರ ಜೀವನ ಹಾಗೂ ಸಹಬಾಳ್ವೆಯನ್ನು ನೋಡುವ ಅವಕಾಶ ದೊರೆಯಿತು. ಅಲ್ಲಿ ಹಸಿರು ಇಲ್ಲ ಅಷ್ಟೇ, ಆದರೆ, ಎಲ್ಲರ ಮನಸ್ಸಿನಲ್ಲಿ ಸಹಬಾಳ್ವೆ, ಸೌಹಾರ್ದತೆ ಹಸಿರಾಗಿದೆ. ನಾವು ಚಂದ್ರಬಂಡದಲ್ಲಿ ಸೆಟ್ ಹಾಕಿ ಚಿತ್ರೀಕರಣ ಮಾಡಿದೆವು. ಅಲ್ಲಿನ ಜನ ನಮ್ಮನ್ನು ಉಪಚರಿಸಿದ ರೀತಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು’ ಎಂದು ಅನುಭವಗಳನ್ನು ಹಂಚಿಕೊಂಡರು.

ಕನ್ನಡಕ್ಕೆ ಬಂದ ವಿನಯ್

ತೆಲುಗಿನ ‘ಡಿಯರ್ ಕಾಮ್ರೇಡ್’, ‘ಸೀತಾರಾಮಂ’, ‘ಸರಿಪೋದ ಶನಿವಾರಂ’ ಚಿತ್ರಗಳಲ್ಲಿ ನಟಿಸಿರುವ ವಿನಯ್ ಮಹಾದೇವ್ ಇದೀಗ ‘ಹೆಬ್ಬುಲಿ ಕಟ್’ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಯಾಗಿದ್ದಾರೆ. ಚೊಚ್ಚಲ ಕನ್ನಡ ಚಿತ್ರದ ಅನುಭವದ ಬಗ್ಗೆ, ‘ಒಂದೊಳ್ಳೆ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದ ಖುಷಿಯಿದೆ. ಇದು ಗಟ್ಟಿ ಕಥೆಯ ಚಿತ್ರ. ಎಮೋಷನ್‌ಗಳಿವೆ. ನನ್ನದು ಊರಿನ ಗೌಡನ ಮಗನ ಪಾತ್ರ. ಸ್ವಲ್ಪ ಆಕ್ರೋಶವಿದೆ. ನನ್ನ ತೆಲುಗು ಸಿನಿಮಾಗಳನ್ನು ನೋಡಿ, ಭೀಮರಾಮ್ ಆಯ್ಕೆ ಮಾಡಿಕೊಂಡರು. ತುಂಬಾ ಒಳ್ಳೆಯ ಜರ್ನಿ. ಕನ್ನಡ ಕಲಿಯುತ್ತಿದ್ದೇನೆ. ಆದರೆ, ಗ್ರಾಮೀಣ ಸೊಗಡಿನ ಡೈಲಾಗ್ ಇರುವ ಕಾರಣ ಅದು ನನಗೆ ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಡಬ್ಬಿಂಗ್ ಮಾಡಲಿಲ್ಲ. ಮನರಂಜನೆಯ ಜತೆಗೆ ಒಳ್ಳೆಯ ಅನುಭವ ನೀಡುವ ಚಿತ್ರವಿದು. ಮುಂದಿನ ದಿನಗಳಲ್ಲಿ ಕನ್ನಡದಿಂದ ಹೆಚ್ಚು ಸಿನಿಮಾಗಳನ್ನು ನಿರೀಕ್ಷಿಸುತ್ತಿದ್ದೇನೆ’ ಎಂದು ಸಂತಸ ವ್ಯಕ್ತಪಡಿಸುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net