

ನವದೆಹಲಿ: ಮೇ 31 ರಂದು ವಿಶ್ವ ತಂಬಾಕು ರಹಿತ(No Tobacco Day) ದಿನದಂದು ಓಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ(OTT Platform) ಬಿಡುಗಡೆಯಾಗುವ ಚಿತ್ರಗಳಿಗೂ ಕೂಡ ತಂಬಾಕು ವಿರೋಧಿ ಎಚ್ಚರಿಕೆಗಳನ್ನು ಕಡ್ಡಾಯಗೊಳಿಸಿ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಆಧಿಸೂಚನೆಯನ್ನು ಹೊರಡಿಸಿದೆ. ಸದ್ಯ ಈ ಆದೇಶವನ್ನು ಚಿತ್ರ ತಯಾರಕರು ಪ್ರಶ್ನಿಸಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯ(Union Health Ministry) ಪ್ರತ್ಯೇಕವಾಗಿ ಈ ಬಗ್ಗೆ ತಿಳಿಸಿದ್ದು, ಒಂದು ವೇಳೆ ಈಗ ಹೊರಡಿಸಿರುವ ನಿಯಮಗಳನ್ನು ಆಯಾ ಚಿತ್ರ ತಯಾರಕರು ಅನುಸರಿಸಲು ವಿಫಲವಾದರೆ, ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಓಟಿಟಿ ಪ್ಲಾಟ್ಫಾರ್ಮ್ಗಳಾದ ಅಮೆಜಾನ್ ಪ್ರೈಮ್(Amazon Prime), ನೆಟ್ಫ್ಲಿಕ್ಸ್(Netflix), ಡಿಸ್ನಿ ಹಾಟ್ಸ್ಟಾರ್(Disney Hotstar) ಸೇರಿದಂತೆ ಇತರೆ ಪ್ಲಾಟ್‌ಫಾರ್ಮ್‌ಗಳಲ್ಲಿ ಚಿತ್ರದ ಮೊದಲು ಮತ್ತು ಮಧ್ಯಂತರದಲ್ಲಿ ಕನಿಷ್ಠ 30 ಸೆಕೆಂಡ್ಗಳ ಅವಧಿ ತಂಬಾಕು ವಿರೋಧಿ ಎಚ್ಚರಿಕೆಗಳನ್ನು ಪ್ರದರ್ಶಿಸಬೇಕು ಎಂದು ಸಚಿವಾಲಯ ಒತ್ತಿ ಹೇಳಿದೆ. ಸದ್ಯ ಈ ಬಗ್ಗೆ ಪ್ರಶ್ನಿಸಿರುವ ಚಿತ್ರ ತಯಾರಕರು ಈ ಎಚ್ಚರಿಕೆಯನ್ನು ಪ್ರದರ್ಶಿಸವುದು ಇಲ್ಲಿಯವರೆಗೂ ಎಷ್ಟು ಜನರ ಮೇಲೆ ಪ್ರಭಾವ ಬೀರಿದೆ ದಾಖಲೆ ತೋರಿಸಿ ಎಂದು ಕೇಳಿದ್ದಾರೆ.
ಈ ಕುರಿತು ಕೆಲ ಕಲಾವಿದರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, "ತಂಬಾಕು ವಿರೋಧಿ ಎಚ್ಚರಿಕೆಗಳು ನಮ್ಮನ್ನು ನೆನಪಿಸುವುದು ಬಹಳ ಮುಖ್ಯ. ಕಾರಣ, ನಾನು ನನ್ನ ತಂದೆಯನ್ನು ಕಳೆದುಕೊಂಡಿದ್ದು ಕ್ಯಾನ್ಸರ್ ರೋಗದಿಂದಲೇ! ಹಾಗಾಗಿ ನಾನಂತೂ ಇದಕ್ಕೆ ಸಂಪೂರ್ಣ ಬೆಂಬಲ ಸೂಚಿಸುತ್ತೇನೆ" ಎಂದು ನಟ ಅಭಿಲಾಷ್ ತಾಪಲಿಯಲ್ ಹೇಳಿದ್ದಾರೆ.
ಇದೇ ರೀತಿ 'ಇನ್ಟು ದಿ ಶಾಡೋಸ್'(Into the Shadows) ಚಿತ್ರದ ನಟ ಅಮಿತ್ ಸಾಧ್, ಕೇಂದ್ರ ಆರೋಗ್ಯ ಸಚಿವಾಲಯದ ನಿರ್ಧಾರವನ್ನು ಶ್ಲಾಘಿಸಿದ್ದಾರೆ. "ಇದು ಹಲವು ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರದರ್ಶನವಾಗುವುದರಿಂದ ಎಚ್ಚರಿಕೆಯ ಸಂದೇಶವನ್ನು ಸಾರುತ್ತದೆ. ಈಗಾಗಲೇ ಅಂತಹ ಎಚ್ಚರಿಕೆಗಳನ್ನು ಚಿತ್ರಮಂದಿರಗಳಲ್ಲಿ ಮತ್ತು ದೂರದರ್ಶನಗಳಲ್ಲಿ ನೋಡುತ್ತಿದ್ದೇವೆ. ಅಲ್ಲದೇ, ತಂಬಾಕು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದು ನಿರ್ಣಾಯಕವಾಗಿದೆ ಮತ್ತು OTT ಪ್ಲಾಟ್‌ಫಾರ್ಮ್‌ಗಳಲ್ಲಿ ಈ ಎಚ್ಚರಿಕೆಗಳನ್ನು ಕಾರ್ಯಗತಗೊಳಿಸುವುದರಿಂದ ವೀಕ್ಷಕರು, ವಿಶೇಷವಾಗಿ ಕಿರಿಯ ಪ್ರೇಕ್ಷಕರು, ತಂಬಾಕು ಬಳಕೆಯ ಹಾನಿಕಾರಕ ಪರಿಣಾಮಗಳ ಬಗ್ಗೆ ಸ್ಥಿರವಾದ ಸಂದೇಶಗಳನ್ನು ಸ್ವೀಕರಿಸುತ್ತಾರೆ" ಎಂದು ಹೇಳುವ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನು 'ಸೇಕ್ರೆಡ್ ಗೇಮ್ಡ್' ನಿರ್ದೇಶಕ ವಿಕ್ರಮಾದಿತ್ಯ ಮೋಟ್ವಾನೆ(Vikramaditya Motwane) ಈ ನಿಯಮದ ಬಗ್ಗೆ ಆಕ್ಷೇಪಿಸಿದ್ದು, ''ಸರ್ಕಾರ ಈಗಾಗಲೇ ಈ ನಿಯಮವನ್ನು ಚಲನಚಿತ್ರಗಳಲ್ಲಿ ಪ್ರದರ್ಶಿಸುವಂತೆ ಮಾಡಿದೆ. ಇದು ಜನರ ಧೂಮಪಾನದ ಅಭ್ಯಾಸದಲ್ಲಿ ಎಷ್ಟರ ಮಟ್ಟಿಗೆ ವ್ಯತ್ಯಾಸವನ್ನು ತಂದಿದೆ ಎಂದು ನನಗೆ ತಿಳಿದಿಲ್ಲ! ನಾವು ಡೇಟಾವನ್ನು ಅರ್ಥಮಾಡಿಕೊಳ್ಳಬೇಕು, ಇದು ನಡೆದು ಸುಮಾರು ಹತ್ತು ವರ್ಷಗಳಾಗಿವೆ. ಇದು ನಿಜವಾಗಿಯೂ ವ್ಯತ್ಯಾಸವನ್ನು ಮಾಡಿದೆಯೇ, ಮತ್ತು ಸಂಖ್ಯೆಗಳನ್ನು ಕಡಿಮೆ ಮಾಡಿದೆಯೇ ಎಂದು ನಾವು ಪರಿಶೀಲಿಸಬೇಕಾಗಿದೆ. ಈ ಕೆಲಸಗಳನ್ನು ಮಾಡಲು ಸುಲಭದ ಮಾರ್ಗವಾಗಿ ನಮ್ಮ ಉದ್ಯಮವೇ ಏಕೆ? ಎಂಬುದು ನನಗೆ ತಿಳಿದಿಲ್ಲ" ಎಂದು ಹೇಳಿದ್ದಾರೆ.