ಚಿತ್ರಮಂದಿರ ಆಯ್ತು; ಈಗ ಓಟಿಟಿಗೆ ಬರಲಿದೆ ಧನಂಜಯ್​ ಅಭಿನಯದ ‘ಹೆಡ್ ಬುಷ್’ …

Head Bush - Dhananjay
Published on

ಬೆಂಗಳೂರು: 'ಹೆಡ್​ ಬುಷ್​' ಚಿತ್ರದ ಬಗ್ಗೆ ಬಹಳ ನಿರೀಕ್ಷೆ ಇಟ್ಟಿದ್ದರು ಡಾಲಿ ಧನಂಜಯ್​. ಆ ಚಿತ್ರಕ್ಕೆ ಅವರು ನಾಯಕರಷ್ಟೇ ಅಲ್ಲ, ನಿರ್ಮಾಪಕರೂ ಆಗಿದ್ದರು. ಇನ್ನೊಂದು ಹಿಟ್​ ಸಿಗಬಹುದು ಎಂದೇ ದೊಡ್ಡ ಮಟ್ಟದಲ್ಲಿ ಚಿತ್ರವನ್ನು ಬಿಡುಗಡೆ ಮಾಡಿದ್ದರು. ಆದರೆ, ಚಿತ್ರ ನಿರೀಕ್ಷಿತ ಮಟ್ಟದಲ್ಲಿ ಗೆಲ್ಲಲಿಲ್ಲ. ವಿವಾದಗಳ ಜತೆಗೆ ಚಿತ್ರವು ಪ್ರೇಕ್ಷಕರ ಮನಸ್ಸಿಗೆ ತಟ್ಟದ ಕಾರಣ, ಚಿತ್ರಮಂದಿರಗಳಿಂದ ಬೇಗನೇ ಮಾಯವಾಯಿತು.

ಈಗ ಆ ಚಿತ್ರ ಓಟಿಟಿಯಲ್ಲಿ ಬಿಡುಗಡೆಯಾಗುವುದಕ್ಕೆ ರೆಡಿ ಇದೆ. ಈ ಹಿಂದೆ ‘ವಿಕ್ರಾಂತ್ ರೋಣ’, ‘ಗಾಳಿಪಟ 2, ‘ಗುರು ಶಿಷ್ಯರು’ ಮುಂತಾದ ಚಿತ್ರಗಳನ್ನು ಬಿಡುಗಡೆ ಮಾಡಿದ್ದ ಜೀ5, 'ಹೆಡ್​ ಬುಷ್​' ಚಿತ್ರದ ಹಕ್ಕುಗಳನ್ನೂ ಖರೀದಿಸಿದ್ದು, ಈಗ ಚಿತ್ರವನ್ನು ಸಂಕ್ರಾಂತಿ ಹಬ್ಬದ ಪ್ರಯುಕ್ತ ಜನವರಿ 13ರಂದು ಬಿಡುಗಡೆ ಮಾಡುವುದಕ್ಕೆ ಮುಂದಾಗಿದೆ.

ಅಗ್ನಿ ಶ್ರೀಧರ್ ಬರೆದ 'ದಾದಾಗಿರಿಯ ದಿನಗಳು' ಪುಸ್ತಕವನ್ನಾಧರಿಸಿದ ಈ ಚಿತ್ರವನ್ನು ಶೂನ್ಯ ನಿರ್ದೇಶನ ಮಾಡಿದ್ದಾರೆ. 70ರ ದಶಕದ ಭೂಗತ ಜಗತ್ತನ್ನು ಕಟ್ಟಿಕೊಟ್ಟ ಈ ಚಿತ್ರದಲ್ಲಿ ಒಂದು ಕಾಲಕ್ಕೆ ಬೆಂಗಳೂರಿನ ಡಾನ್​ ಆಗಿದ್ದ ಎಂ.ಪಿ. ಜಯರಾಜ್​ ನಡೆದು ಬಂದ ಹಾದಿ ಇದೆ. ಎಂ.ಪಿ.ಜಯರಾಜ್ ಪಾತ್ರದಲ್ಲಿ ಡಾಲಿ ಧನಂಜಯ ಅಭಿನಯಿಸಿದ್ದು, ಅವರ ಅಭಿನಯದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.

ಧನಂಜಯ್​ಗೆ ಪಾಯಲ್ ರಜಪೂತ್ ನಾಯಕಿಯಾಗಿದ್ದು, ಮಿಕ್ಕಂತೆ 'ಲೂಸ್ ಮಾದ' ಯೋಗಿ, ರಘು ಮುಖರ್ಜಿ, ವಸಿಷ್ಠ ಸಿಂಹ, ರವಿಚಂದ್ರನ್, ಶೃತಿ ಹರಿಹರನ್ ಮುಂತಾದವರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಅಗ್ನಿ ಶ್ರೀಧರ್ ಚಿತ್ರಕಥೆ ಮತ್ತು ಸಂಭಾಷಣೆ ಇದ್ದ ಈ ಚಿತ್ರಕ್ಕೆ ಚರಣ್ ರಾಜ್ ಸಂಗೀತವಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net