

ಬೆಂಗಳೂರು: ನಟ, ನೃತ್ಯನಿರ್ದೇಶಕ, ನಿರ್ದೇಶಕ ನಾಗೇಂದ್ರ ಪ್ರಸಾದ್ ಮೊದಲ ಬಾರಿಗೆ ನಿರ್ದೇಶಿಸಿರುವ ಚಿತ್ರ ‘ಲಕ್ಕಿ ಮ್ಯಾನ್’. ಚಿತ್ರದಲ್ಲಿ ‘ಡಾರ್ಲಿಂಗ್’ ಕೃಷ್ಣ ನಾಯಕನಾಗಿದ್ದು, ಅವರಿಗೆ ಸಂಗೀತಾ ಶೃಂಗೇರಿ ಮತ್ತು ರೋಶಿನಿ ಪ್ರಕಾಶ್ ನಾಯಕಿಯರು. ಪುನೀತ್ ರಾಜಕುಮಾರ್ ಸಹ ಈ ಚಿತ್ರದಲ್ಲಿ ದೇವರ ಪಾತ್ರದಲ್ಲಿ ನಟಿಸಿದ್ದಾರೆ. ಜತೆಗೆ ಪ್ರಭುದೇವ ಅವರೊಂದಿಗೆ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ.
ಇತ್ತೀಚೆಗಷ್ಟೇ ನಡೆದ ಸುದ್ದಿಗೋಷ್ಠಿಯಲ್ಲಿ ಚಿತ್ರದ ಬಗ್ಗೆ ಮಾತನಾಡಿದ ನಾಯಕಿ ರೋಷನಿ ಪ್ರಕಾಶ್, ಅಪ್ಪು ನೆನೆದು ಗದ್ಗದಿತರಾದರು. ಪಿಆರ್ಕೆ ಪ್ರೊಡಕ್ಷನ್ಸ್ನ ಮೊದಲ ಚಿತ್ರ ‘ಕವಲುದಾರಿ’ ಸಮಯದಲ್ಲಿ ನಡೆದ ಘಟನೆಗಳನ್ನು ನೆನಪಿಸಿಕೊಂಡ ಅವರು, ‘ಪುನೀತ್ ಅವರ ಜತೆ ಒಂದು ಸಿನಿಮಾ ಮಾಡಿದ್ದೇನೆ ಎಂದು ಖುಷಿಪಡಲೋ ಅಥವಾ ಅವರು ನಮ್ಮೊಂದಿಗೆ ಇಲ್ವಲ್ಲಾ ಎಂಬುದನ್ನು ಒಪ್ಪಿಕೊಳ್ಳಬೇಕೋ ಗೊತ್ತಾಗುತ್ತಿಲ್ಲ. ಒಬ್ಬ ಕಲಾವಿದೆಯಾಗಿ ನನ್ನ ಸಿನಿಮಾ ಸೂಪರ್ಹಿಟ್ ಆಗಲಿ ಅಂತ ಬೇಡಿಕೊಳ್ಳುತ್ತಿರುತ್ತೇನೆ. ಆದರೆ, ‘ಲಕ್ಕಿಮ್ಯಾನ್’ ಹಿಟ್ ಆಗುತ್ತೋ ಬಿಡುತ್ತೋ, ಪುನೀತ್ ಅವರ ಜತೆ ಒಂದು ಸಿನಿಮಾ ಮಾಡಿರುವುದು, ನೂರು ಹಿಟ್ ಸಿನಿಮಾಗಳನ್ನು ಕೊಟ್ಟಿರುವಷ್ಟು ತೃಪ್ತಿ ಕೊಟ್ಟಿದೆ. ಈ ಚಿತ್ರ ನಮಗೆ ಬಿಜಿನೆಸ್ ಅಲ್ಲ, ಅದಕ್ಕೂ ಹೆಚ್ಚಿನದು. ಪುನೀತ್ ಅವರನ್ನು ನಾವು ಹಲವಾರು ಪಾತ್ರಗಳಲ್ಲಿ ನೋಡಿದ್ದೇವೆ. ಅವರ ಜತೆ ನಕ್ಕಿದ್ದೇವೆ, ಅತ್ತಿದ್ದೇವೆ. ಆದರೆ, ಈಗ ನಾವು ಈ ಚಿತ್ರದಲ್ಲಿ ಅವರನ್ನು ಕೊನೆಯ ಬಾರಿಗೆ ದೇವರಾಗಿ ನೋಡುತ್ತಿದ್ದೇವೆ. ನಮ್ಮ ಜನರೇಷನ್ಗೆ ಅವರು ದೇವರಾಗಿಯೇ ಉಳಿದುಕೊಳ್ಳುತ್ತಾರೆ’ ಎಂದು ಬೇಸರದಿಂದ ನುಡಿದರು.
‘ಲಕ್ಕಿ ಮ್ಯಾನ್’ ಚಿತ್ರದಲ್ಲಿ ತಮ್ಮ ಪಾತ್ರದ ಬಗ್ಗೆ ಮಾತನಾಡಿದ ರೋಶಿನಿ, ‘ನಾನಿಲ್ಲಿ ಮೀರಾ ಎಂಬ ಅಸಿಸ್ಟಂಟ್ ಡೈರೆಕ್ಟರ್ ಪಾತ್ರದಲ್ಲಿ ನಟಿಸಿದ್ದೇನೆ. ಆಕೆಯ ಜೀವನದಲ್ಲಿ ಹಲವಾರು ಸಮಸ್ಯೆಗಳಿರುತ್ತವೆ. ಅದೆಲ್ಲದರ ನಡುವೆ ಆಕೆಯೇ ಒಂದು ಪುಟ್ಟ ಲೋಕವನ್ನು ಸೃಷ್ಟಿಸಿಕೊಂಡು ಬದುಕುತ್ತಿರುತ್ತಾಳೆ’ ಎಂದರು. ಇಂದು ಸಂಜೆ ಚಿತ್ರದ ಹಾಡುಗಳ ಬಿಡುಗಡೆಯಾಗಲಿದ್ದು, ಸೆ. 9ರಂದು ಸಿನಿಮಾ ತೆರೆಗೆ ಬರಲಿದೆ.