ಆತನಿಂದ ನಾನು ಮೋಸ ಹೋದೆ! ನೋವಿನ ಸಂಗತಿ ಬಿಚ್ಚಿಟ್ಟ ನಟಿ ನಿವೇತಾ ಪೇತುರಾಜ್​

Nivetha Pethuraj
Published on

ಚೆನ್ನೈ: ಒರು ನಾಳ್​ ಕೂತು ಚಿತ್ರದ ಮೂಲಕ ನಾಯಕಿಯಾಗಿ ಪಾದರ್ಪಣೆ ಮಾಡಿದ ನಟಿ ನಿವೇತಾ ಪೇತುರಾಜ್ ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. ಇತ್ತೀಚೆಗೆ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ತನ್ನ ಗೆಳೆಯ ತನಗೆ ಮೋಸ ಮಾಡಿದ್ದಾನೆ ಎಂದು ಹೇಳುವ ಮೂಲಕ ನಿವೇತಾ ಭಾರಿ ಸುದ್ದಿಯಾಗಿದ್ದಾಳೆ.

32 ವರ್ಷದ ನಟಿ ನಿವೇತಾ ಪೇತುರಾಜ್, ನೆಲ್ಸನ್ ವೆಂಕಟೇಶನ್​ ನಿರ್ದೇಶನದ ಒರು ನಾಲ್​ ಕೂತು ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಇದಾದ ಬಳಿಕ ಉದಯನಿಧಿ ಸ್ಟಾಲಿನ್ ಅವರೊಂದಿಗೆ ಎನ್ ಮನಸು ತಂಗಂ, ಜಯಂ ರವಿ ಅವರೊಂದಿಗೆ ಟಿಕ್ ಟಿಕ್ ಟಿಕ್, ವಿಜಯ್ ಆಂಟೋನಿ ಅವರೊಂದಿಗೆ ತಿಮಿರು ಪುಡಿಚವನ್, ವಿಜಯ್ ಸೇತುಪತಿ ಅವರೊಂದಿಗೆ ಸಂಗತ್ ತಮಿಳನ್ ಮತ್ತು ಪ್ರಭುದೇವ ಅವರೊಂದಿಗೆ ಪೊನ್ ಮಾಣಿಕವೆಲ್ ಸೇರಿದಂತೆ ಹಲವಾರು ತಮಿಳು ಚಲನಚಿತ್ರಗಳಲ್ಲಿ ನಟಿಸಿದ್ದಾರೆ.

ನಿವೇತಾ ಪೇತುರಾಜ್ ಅಲ್ಲು ಅರ್ಜುನ್ ಅವರ ಅಲಾ ವೈಕುಂಠಪುರಮುಲೂ ಸೇರಿದಂತೆ ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ನಿವೇತಾ ಅವರು ವೆಬ್ ಸರಣಿ "ಪರುವು" ನಲ್ಲಿ ನಟಿಸಿದ್ದಾರೆ. ಈ ವೆಬ್​ ಸರಣಿ ತೆಲುಗು ಮತ್ತು ತಮಿಳಿನಲ್ಲಿ ಜಿ 5 ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಯಿತು ಮತ್ತು ಒಳ್ಳೆಯ ವಿಮರ್ಶೆಗಳು ಸಹ ಬಂದವು.

ಅಂದಹಾಗೆ ನಿವೇತಾ ಅವರು ಮದುರೈನಲ್ಲಿ ಹುಟ್ಟಿ ಬೆಳೆದವರು. ಹೆಚ್ಚಾಗಿ ತಮಿಳು ಮತ್ತು ತೆಲುಗು ಭಾಷೆಯ ಚಿತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾಗಳಲ್ಲಿ ದೊಡ್ಡ ಅವಕಾಶಗಳು ಸಿಗದೇ ಇತ್ತೀಚಿಗೆ ಒಟಿಟಿ ವೆಬ್ ಸೀರಿಸ್​ನಲ್ಲಿಯೂ ನಟಿಸುತ್ತಿದ್ದಾರೆ. ಪ್ರತಿಭಾವಂತ ನಟಿಯಾಗಿದ್ದರೂ ಸರಿಯಾದ ಅವಕಾಶಗಳು ಸಿಗಲಿಲ್ಲ ಎಂಬ ಬೇಸರವು ಕೂಡ ಅವರಿಗಿದೆ. ಸಿನಿಮಾದಿಂದಾಚೆಗೆ ಆಗಾಗ ತಮ್ಮ ಇನ್​ಸ್ಟಾಗ್ರಾಂ ಪೇಜ್​ ಮೂಲಕ ಫೋಟೋ ಮತ್ತು ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಈ ಮೂಲಕ ತಮ್ಮ ಅಭಿಮಾನಿಗಳ ಜತೆ ನಿರಂತರ ಸಂಪರ್ಕದಲ್ಲಿರುತ್ತಾರೆ.

ನಿವೇತಾ ಪೇತುರಾಜ್ ಅವರು ಇತ್ತೀಚೆಗೆ ಯೂಟ್ಯೂಬ್ ಚಾನೆಲ್‌ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಏನಾದರೂ ಕೆಟ್ಟದಾಗಿ ಯೋಚಿಸಿದರೆ ಅದು ನನ್ನ ಜೀವನದಲ್ಲಿ ಸಂಭವಿಸುತ್ತದೆ ಎಂದು ಹೇಳಿದ್ದಾರೆ. ನನ್ನ ಗೆಳೆಯ ನನಗೆ ಮೋಸ ಮಾಡುತ್ತಾನೆ ಎಂದು ಒಮ್ಮೆ ಯೋಚಿಸಿದೆ. ಆದರೆ, ಆತನ ನನಗೆ ನಿಜವಾಗಿಯೂ ಮೋಸ ಮಾಡಿದನು ಎಂದು ಹೇಳಿದರು. ಅಲ್ಲದೆ, ಈಗಿರುವ ಕಾರು ಹೇಗಿರಬೇಕು, ಯಾವ ಬಣ್ಣದಲ್ಲಿರಬೇಕು ಎಂಬುದನ್ನೂ ಯೋಚಿಸಿದ್ದೇ. ಅಲ್ಲದೆ ಭವಿಷ್ಯದಲ್ಲಿ ತನ್ನ ಕಾರು ಹೇಗಿರಬೇಕು ಎಂಬುದನ್ನೂ ಯೋಚಿಸಿದ್ದೇನೆ ಎಂದು ನಿವೇತಾ ಇದೇ ಸಂದರ್ಭದಲ್ಲಿ ಹೇಳಿದರು.

ಈಗ ಸಾಮಾಜಿಕ ಜಾಲತಾಣಗಳಲ್ಲಿ ಆಕೆಯ ಸಂದರ್ಶನದ ತುಣುಕನ್ನು ಶೇರ್ ಮಾಡುತ್ತಿರುವ ಅನೇಕರು ನಿವೇತಾ ಪೇತುರಾಜ್ ಅವರ ಬಾಯ್ ಫ್ರೆಂಡ್ ಯಾರು ಎಂದು ಪ್ರಶ್ನಿಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net