ನಿರ್ಭಯಾ ಅತ್ಯಾಚಾರ ಅಪರಾಧಿಗಳಿಗೆ ಗಲ್ಲು: ಇಷ್ಟು ಒಳ್ಳೆಯ ಸುದ್ದಿ ಬೇರಿಲ್ಲ ಎನ್ನುತ್ತ ಕಣ್ಣೀರು ಹಾಕಿದ ನಟಿ ಹರ್ಷಿಕಾ ಪೂಣಚ್ಛ

Harshika Poonacha 7 Jan 20
Published on

ಬೆಂಗಳೂರು: ನಿರ್ಭಯಾ ಅತ್ಯಾಚಾರ, ಹತ್ಯೆ ಅಪರಾಧಿಗಳನ್ನು ಜ.22ರಂದು ಗಲ್ಲಿಗೇರಿಸಲು ದೆಹಲಿ ಪಟಿಯಾಲಾ ನ್ಯಾಯಾಲಯ ನೀಡಿದ ತೀರ್ಪನ್ನು ಇಡೀ ದೇಶವೇ ಸ್ವಾಗತಿಸಿದೆ.

ಸ್ಯಾಂಡಲ್​ವುಡ್ ನಾಯಕನಟ ಶ್ರೀಮುರಳಿ ಟ್ವೀಟ್​ ಮಾಡಿದ್ದು, ನಿರ್ಭಯಾ ಅತ್ಯಾಚಾರ ಪ್ರಕರಣದ ತೀರ್ಪು ಹೊರಬೀಳಲು ವಿಳಂಬವಾದರೂ ಕಾನೂನಿನ ಮೇಲೆ ನಂಬಿಕೆ ಹುಟ್ಟಿಸಿದೆ. ಘೋರ ಪಾಪಕೃತ್ಯ ಎಸಗಿದ ಅಪರಾಧಿಗಳ ವಿರುದ್ಧ ನ್ಯಾಯಾಲಯದ ತೀರ್ಪಿನಂತೆ ಕೂಡಲೇ ಕ್ರಮ ಕೈಗೊಳ್ಳಲಿ ಎಂದು ಆಶಿಸುತ್ತೇನೆ. ಕಠಿಣ ಕಾನೂನುಗಳಿಂದಲೇ ಈ ದೇಶದಲ್ಲಿ ಮಹಿಳೆಯರು ಹೆಚ್ಚೆಚ್ಚು ಸುರಕ್ಷಿತರಾಗುತ್ತಾರೆ ಎಂದು ಹೇಳಿದ್ದಾರೆ.

ನಟಿ ಹರ್ಷಿಕಾ ಪೂಣಚ್ಛ ವಿಡಿಯೋದಲ್ಲಿ ನಿರ್ಭಯಾ ತೀರ್ಪಿನ ಬಗ್ಗೆ ಮಾತನಾಡಿದ್ದು, ಕ್ರೌರ್ಯತೆ ಮೆರೆದ ನೀಚರಿಗೆ ಜನವರಿ 22ರಂದು ಬೆಳಗ್ಗೆ ಏಳುಗಂಟೆಗೆ ಗಲ್ಲು ಶಿಕ್ಷೆ ಆಗುವುದನ್ನು ಕೇಳಿದೆ. ಇದರಂತ ಒಂದು ಒಳ್ಳೆಯ ಸುದ್ದಿ ಇನ್ನೊಂದಿಲ್ಲ. 2020 ವರ್ಷವನ್ನು ಇಷ್ಟು ಚೆನ್ನಾಗಿ ಶುರು ಮಾಡುತ್ತೇವೆ ಅಂದುಕೊಂಡಿರಲಿಲ್ಲ. ಏಳು ವರ್ಷಗಳಿಂದ ನಿರ್ಭಯಾ ತಂದೆ-ತಾಯಿ ಹೋರಾಟ ಮಾಡುತ್ತಿದ್ದರು. ಈಗ ನ್ಯಾಯ ಸಿಕ್ಕಿದೆ.

ಇನ್ನು ಮೇಲಾದರೂ ರೇಪ್​ ಅನ್ನುವ ಪದ ಮಾತನಾಡಲೂ ಭಯಪಟ್ಟುಕೊಳ್ಳುವಂತಾಗಲಿ. ಈ 2020 ಹೆಣ್ಣುಮಕ್ಕಳ ವರ್ಷ ಆಗಿರಲಿ. ಹೆಣ್ತನವನ್ನು ಮೆರೆಸುವ ವರ್ಷ ಆಗಿರಲಿ. ಎಲ್ಲಾದರೂ ಹೆಣ್ಣುಮಕ್ಕಳಿಗೆ ಹಿಂಸೆಯಾಗುತ್ತಿದ್ದರೆ ಅದನ್ನು ತಡೆಯಿರಿ ಎಂದು ಹರ್ಷಿಕಾ ಪೂಣಚ್ಛ ಭಾವುಕರಾಗಿ ಕಣ್ಣೀರು ಸುರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net