ಭೋಜಪುರಿ ಸಿನಿಮಾದಲ್ಲಿ ಹರ್ಷಿಕಾ - ಲಂಡನ್​ನಲ್ಲಿ ಇಡೀ ಚಿತ್ರದ ಚಿತ್ರೀಕರಣ

Harshika
Published on

ಬೆಂಗಳೂರು : ಸ್ಯಾಂಡಲ್​ವುಡ್ ನಟಿ ಹರ್ಷಿಕಾ ಪೂಣಚ್ಚ ದಕ್ಷಿಣ ಭಾರತದ ಎಲ್ಲ ಚಿತ್ರರಂಗಗಳಲ್ಲಿ ಕೆಲಸ ಮಾಡಿದ್ದಾರೆ. ಕನ್ನಡದ ಜತೆಗೆ ತೆಲುಗು, ತಮಿಳು, ಮಲಯಾಳಂ, ತುಳು, ಕೊಡವ ಮತ್ತು ಕೊಂಕಣಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಅವರ ಆ ಬಹುಭಾಷಾ ಖಾತೆಗೆ ಭೋಜಪುರಿಯೂ ಸೇರಿಕೊಳ್ಳುತ್ತಿದೆ. ಅಂದರೆ, ಶೀರ್ಷಿಕೆ ಅಂತಿಮವಾಗದ ಭೋಜಪುರಿ ಭಾಷೆಯ ಸಿನಿಮಾವೊಂದನ್ನು ಒಪ್ಪಿಕೊಂಡು, ಅರ್ಧ ಭಾಗದ ಚಿತ್ರೀಕರಣವನ್ನೂ ಮುಗಿಸಿದ್ದಾರೆ.

ಸದ್ಯ ಲಂಡನ್​ನಲ್ಲಿರುವ ಹರ್ಷಿಕಾ ಅಲ್ಲಿಂದಲೇ ಆ ಚಿತ್ರದ ಬಗ್ಗೆ ಅಲ್ಲಿಂದಲೇ ಒಂದಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ‘ಏಳೆಂಟು ಭಾಷೆಯಲ್ಲಿ ನಟಿಸಿದ ನನಗೆ ಇದೀಗ ಭೋಜಪುರಿಯಲ್ಲಿಯೂ ನಟಿಸುವ ಅವಕಾಶ ಸಿಕ್ಕಿದೆ. ಭೋಜಪುರಿಯಲ್ಲಿ ಸಾಕಷ್ಟು ಸಿನಿಮಾ ಮಾಡಿರುವ ಪವನ್ ಸಿಂಗ್ ಈ ಚಿತ್ರದ ನಾಯಕ. ಯಾಶಿ ಪ್ರೊಡಕ್ಷನ್ಸ್​ನಲ್ಲಿ ಅಭಯ್ ಸಿನ್ಹಾ ಎಂಬುವವರು ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ’ ಎನ್ನುವ ಹರ್ಷಿಕಾ, ‘ಭೋಜಪುರಿ ಜತೆಗೆ ಹಿಂದಿಗೂ ಈ ಚಿತ್ರ ಡಬ್ ಆಗಿ ತೆರೆಕಾಣಲಿದೆ. ಲವ್​ಸ್ಟೋರಿವುಳ್ಳ ಈ ಚಿತ್ರದ ಪೂರ್ತಿ ಶೂಟಿಂಗ್ ಲಂಡನ್​ನಲ್ಲಿ ನಡೆಯುತ್ತಿದೆ. ಈಗಾಗಲೇ ಶೇ. 50 ಭಾಗದ ಶೂಟಿಂಗ್ ಸಹ ಮುಗಿದಿದೆ. ಶ್ರೀಮಂತ ಕುಟುಂಬದಿಂದ ಬಂದ ಹುಡುಗಿಯಾಗಿ ನಾನಿಲ್ಲಿ ಕಾಣಿಸಿಕೊಳ್ಳಲಿದ್ದೇನೆ’ ಎಂಬುದು ಅವರ ಮಾತು. ಭೋಜಪುರಿ ಸಿನಿಮಾ ಇಂಡಸ್ಟ್ರಿಯಲ್ಲಿ ಹಲವು ಸಿನಿಮಾ ನಿರ್ದೇಶನ ಮಾಡಿರುವ ಪ್ರೇಮಾಂಶು ಸಿಂಗ್ ಈ ಚಿತ್ರಕ್ಕೆ ಆಕ್ಷನ್-ಕಟ್ ಹೇಳುತ್ತಿದ್ದಾರೆ.

ಸದ್ಯ ಕನ್ನಡದಲ್ಲಿಯೂ ಎರಡು ಸಿನಿಮಾ ಕೆಲಸಗಳಲ್ಲಿ ಹರ್ಷಿಕಾ ಬಿಜಿಯಾಗಿದ್ದಾರೆ. ‘ಓ ಪ್ರೇಮವೇ’ ಚಿತ್ರದ ಕೆಲಸಗಳು ಬಹುತೇಕ ಮುಗಿದಿದ್ದು, ಆಲ್ಬಂ ಹಾಡಿನ ಅವಕಾಶಗಳೂ ಹರ್ಷಿಕಾ ಅವರನ್ನು ಅರಸಿ ಬರುತ್ತಿವೆಯಂತೆ. ಶೀಘ್ರದಲ್ಲೇ ಇನ್ನೊಂದಿಷ್ಟು ಹೊಸ ವಿಚಾರಗಳನ್ನು ಹಂಚಿಕೊಳ್ಳುವುದಾಗಿ ಅವರು ಹೇಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net