

ಚಿತ್ರ: ಅಮರ ಪ್ರೇಮಿ ಅರುಣ್
ನಿರ್ದೇಶನ: ಪ್ರವಿಣ್ ಕುಮಾರ್
ತಾರಾಗಣ: ಹರಿಶರ್ವಾ, ದೀಪಿಕಾ ಆರಾಧ್ಯ, ಧರ್ಮಣ್ಣ ಕಡೂರ್, ಕೃತಿ ಭಟ್, ಜೋಗತಿ ಮಂಜಮ್ಮ, ಮಹೇಶ್, ಅಂಕಿತಾ ಮತ್ತಿತರರು
|ಹರ್ಷವರ್ಧನ್ ಬ್ಯಾಡನೂರು
"ನಾವು ಯಾರದೋ ನೆನಪಿನಲ್ಲಿರುತ್ತೇವೆ. ಆದರೆ, ಅವರೂ ನಮ್ಮ ನೆನಪಿನಲ್ಲಿರಬೇಕು ಅಂತ ಅಂದುಕೊಳ್ಳೋದು ತಪ್ಪಲ್ವಾ?' ಎಂದು ಭಾವುಕನಾಗಿ ಗೆಳೆಯ ಸೀನನ (ಧರ್ಮಣ್ಣ) ಬಳಿ ಹೇಳಿಕೊಳ್ಳುತ್ತಾನೆ ಅರುಣ್ (ಹರಿಶರ್ವಾ). ಅದಕ್ಕೆ ಕಾರಣ ಆತನ ಬಾಲ್ಯದ ಲವ್ಸ್ಟೋರಿ. ಶಾಲೆಯಲ್ಲೇ ಕಾವ್ಯಳ (ದೀಪಿಕಾ) ಮೇಲೆ ಅರುಣನಿಗೆ ಪ್ರೀತಿ. ಆದರೆ, ಹರಪನಹಳ್ಳಿಯಿಂದ ಆತನ ತಂದೆಯ ವರ್ಗಾವಣೆಯಾಗುವ ಕಾರಣ, ಕುಟುಂಬ ಸಮೇತ ಬಳ್ಳಾರಿಗೆ ಬಂದು ಸೆಟಲ್ ಆಗುತ್ತಾರೆ. ಓದು ಮುಗಿಸಿ ಮೆಡಿಕಲ್ ರೆಪ್ರೆಸೆಂಟೇಟಿವ್ ಆಗಿ ಕೆಲಸ ಮಾಡುತ್ತಿದ್ದರೂ, ಮನೆಯಲ್ಲಿ ಮದುವೆ ಮಾಡಲು ಹುಡುಗಿ ಹುಡುಕುತ್ತಿದ್ದರೂ, ಆತ ಯಾರನ್ನೂ ಒಪ್ಪದೇ ಕಾವ್ಯಳ ಧ್ಯಾನದಲ್ಲೇ ಇರುತ್ತಾನೆ. ಪ್ರೀತಿಸುವ ಜೋಡಿಗಳನ್ನು ಒಂದಾಗಿಸುವ ಮೂಲಕ ಅರುಣ ತನ್ನೊಳಗಿನ ಪ್ರೀತಿಯನ್ನು ಹಸಿರಾಗಿರಿಸಿರುತ್ತಾನೆ. ಹೀಗೆ 24 ಜೋಡಿಗಳನ್ನು ಒಂದಾಗಿಸಿದ ಖುಷಿ ಆತನದು. ಮನೆಯಲ್ಲಿ ಮದುವೆಯ ಒತ್ತಡ ಹೆಚ್ಚಾದಂತೆ ಅರುಣ ಕಾವ್ಯಳನ್ನು ಹುಡುಕಿಕೊಂಡು ಹೊರಡುತ್ತಾನೆ. ಹಾಗಾದರೆ, ಅರುಣನಿಗೆ ಕಾವ್ಯ ಸಿಗುತ್ತಾಳಾ? ಕಾವ್ಯ ಆತನಿಗಾಗಿ ಕಾಯುತ್ತಿರುತ್ತಾಳಾ? ಮರೆತು ಬೇರೆ ಮದುವೆ ಮಾಡಿಕೊಂಡಿರುತ್ತಾಳಾ? ಅರುಣ ಅಮರ ಪ್ರೇಮಿ ಹೇಗಾಗುತ್ತಾನೆ? ತಿಳಿಯಲು ಸಿನಿಮಾ ನೋಡಿ.
ನಾವು ಪ್ರೀತಿಸಿದವರ ಜತೆ ಇರಬೇಕಾ? ಅಥವಾ ನಮ್ಮನ್ನು ಪ್ರೀತಿಸುವವರ ಜತೆ ಬದುಕಬೇಕಾ? ಇದು ಪ್ರತಿಯೊಬ್ಬರಿಗೂ ಜೀವನದ ಒಂದಲ್ಲಾ ಒಂದು ಹಂತದಲ್ಲಿ ಕಾಡುವ ಪ್ರಶ್ನೆ. ಆ ಪ್ರಶ್ನೆಗೆ ನಿರ್ದೇಶಕ ಪ್ರವಿಣ್ ಕುಮಾರ್ ತಮ್ಮದೇ ಶೈಲಿಯಲ್ಲಿ ಉತ್ತರಿಸುವ ಪ್ರಯತ್ನ ಮಾಡಿದ್ದಾರೆ. ಇದೊಂದು ರೊಮ್ಯಾಂಟಿಕ್ ಕಾಮಿಡಿ ಡ್ರಾಮಾ ಆಗಿದ್ದು, ಬಳ್ಳಾರಿ ಹಿನ್ನೆಲೆಯಲ್ಲಿ ಸಾಗುತ್ತದೆ. 144 ನಿಮಿಷಗಳ ಈ ಚಿತ್ರದ ಮೊದರ್ಲಧ ಕಾಮಿಡಿ ಕಚಗುಳಿ ಇಡುತ್ತಾ ನೋಡಿಸಿಕೊಂಡು ಹೋಗುತ್ತದೆ. ಪ್ರೀತಿಯ ವಿಷಯದಲ್ಲಿ ಗೊಂದಲಕ್ಕೆ ಬಿದ್ದ ಹುಡುಗಿಯರಂತೆಯೇ ದ್ವೀತಿಯಾರ್ಧ ಸಾಗುತ್ತದೆ. ಕಿರಣ್ ರವೀಂದ್ರನಾಥ್ ಸಂಗೀತದಲ್ಲಿ ಹಾಡುಗಳು ಅಂದವಾಗಿ ಕೇಳಿಸುತ್ತವೆ. ಬಳ್ಳಾರಿ ಜನಜೀವನ, ಸಂಸತಿ, ಆಚರಣೆಗಿಂತ ಹೆಚ್ಚಾಗಿ ಸ್ಥಳಗಳು ಮತ್ತು ಭಾಷೆಗಷ್ಟೇ ಒತ್ತು ನೀಡಲಾಗಿದೆ. ಅಮರ ಪ್ರೇಮಿ ಅರುಣನಾಗಿ ಹರಿಶರ್ವಾ ನಟನೆ ಗಮನ ಸೆಳೆಯುತ್ತದೆ. ಬಹುತೇಕ ಕಥೆಯಲ್ಲಿ ಅವರ ಜತೆ ಜರ್ನಿ ಮಾಡುವ ಧರ್ಮಣ್ಣ ಅಲ್ಲಲ್ಲಿ ನಗಿಸುತ್ತಾರೆ. ದೀಪಿಕಾ ಮತ್ತು ಕೃತಿ ಭಟ್ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಅವಳೇ ಬೇಕೆಂದು ಅಲೆಯುವ ಹುಡುಗರು, ತಮ್ಮ ಬೇಕು&ಬೇಡಗಳ ಗೊಂದಲದಲ್ಲಿರುವ ಹುಡುಗಿಯರು ನೋಡಬೇಕಾದ ಕಥೆಯಿದು* (ಷರತ್ತುಗಳು ಅನ್ವಯಿಸುತ್ತವೆ).