

ಶಿಕ್ಷಕರ ದಿನಾಚರಣೆಯ ದಿನದಂದೇ ಬಾಲಿವುಡ್ನಲ್ಲಿ ‘ಹ್ಯಾಪಿ ಟೀಚರ್ಸ್ ಡೇ’ ಎಂಬ ಚಿತ್ರ ಘೋಷಣೆಯಾಗಿದೆ. ಜತೆಗೆ ಸೋಮವಾರದಿಂದಲೇ ಚಿತ್ರದ ಚಿತ್ರೀಕರಣ ಕೂಡ ಪ್ರಾರಂಭವಾಗಿದೆ. ಇದೊಂದು ಸಾಮಾಜಿಕ ಥ್ರಿಲ್ಲರ್ ಚಿತ್ರವಾಗಿದ್ದು ನಿಮ್ರತ್ ಕೌರ್ ಮತ್ತು ರಾಧಿಕಾ ಮದನ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ‘ರಾಂಗ್ ಸೈಡ್ ರಾಜು’ ಚಿತ್ರಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದಿದ್ದ ಗುಜರಾತಿ ನಿರ್ದೇಶಕ ಮಿಖಿಲ್ ಮುಸಲೆ, ‘ಹ್ಯಾಪಿ ಟೀಚರ್ಸ್ ಡೇ’ಗೆ ಆಕ್ಷನ್-ಕಟ್ ಹೇಳುತ್ತಿದ್ದಾರೆ. ‘ಮೇಡ್ ಇನ್ ಚೀನಾ’ ಚಿತ್ರದ ಬಳಿಕ ಅವರು ನಿರ್ದೇಶಿಸುತ್ತಿರುವ ಎರಡನೇ ಹಿಂದಿ ಚಿತ್ರವಿದು.
2016ರ ‘ಏರ್ಲಿಫ್ಟ್’ ಬಳಿಕ ಆರು ವರ್ಷಗಳ ಕಾಲ ಕಣ್ಮರೆಯಾಗಿದ್ದ ನಿಮ್ರತ್ ಕೌರ್, ಈ ವರ್ಷ ‘ದಸ್ವೀ’ ಚಿತ್ರದ ಮೂಲಕ ವಾಪಸ್ಸಾಗಿದ್ದರು. 40 ವರ್ಷದ ನಿಮ್ರತ್ ಈಗ ‘ಹ್ಯಾಪಿ ಟೀಚರ್ಸ್ ಡೇ’ ಚಿತ್ರದಲ್ಲೂ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ‘ಕಚ್ಛೇ ಲಿಂಬೂ’, ‘ಮೋನಿಕಾ ಓ ಮೈ ಡಾರ್ಲಿಂಗ್’, ‘ಕುತ್ತೇ’, ‘ಸನಾ’, ಚಿತ್ರಗಳ ಜತೆಗೆ ಸದ್ಯ ರಾಧಿಕಾ ಮದನ್, ‘ಹ್ಯಾಪಿ ಟೀಚರ್ಸ್ ಡೇ’ ಚಿತ್ರದಲ್ಲೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಶೇಷವೆಂದರೆ, ಶಿಕ್ಷಕರ ದಿನಾಚರಣೆಯಂದು ಸೆಟ್ಟೇರಿರುವ ಈ ಚಿತ್ರ, 2023ರ ಶಿಕ್ಷಕರ ದಿನಾಚರಣೆಯಂದೇ ತೆರೆಗೆ ಬರಲಿದೆ. -ಏಜೆನ್ಸೀಸ್