Hanuman Chalisa - ಯೂಟ್ಯೂಬ್​ನಲ್ಲಿ ದಾಖಲೆ ಬರೆದ ಹನುಮಾನ್​ ಚಾಲೀಸಾ

ಶ್ರೀ ಹನುಮಾನ್​ ಚಾಲೀಸಾ
ಶ್ರೀ ಹನುಮಾನ್​ ಚಾಲೀಸಾ
Published on

ಪ್ರಮುಖ ಮುಖ್ಯಾಂಶಗಳು

  • 2011ರ ಮೇ 10ರಂದು ಯೂಟ್ಯೂಬ್​ನಲ್ಲಿ "ಶ್ರೀ ಹನುಮಾನ್​ ಚಾಲೀಸಾ'ಬಿಡುಗಡೆ ಮಾಡಲಾಗಿತ್ತು
  • ಯೂಟ್ಯೂಬ್​ನಲ್ಲಿ 500 ಕೋಟಿ ವೀವ್ಸ್​ ದಾಟಿದ ಭಾರತದ ಮೊದಲ ಗೀತೆ ಎಂಬ ದಾಖಲೆ ಮಾಡಿದೆ.
  • ಯೂಟ್ಯೂಬ್​ ಇತಿಹಾಸದಲ್ಲೇ ಅತಿಹೆಚ್ಚು ವೀಕ್ಷಣೆಗೊಂಡ ಅಗ್ರ 10 ಹಾಡುಗಳಲ್ಲಿ ಸ್ಥಾನ ಪಡೆದಿರುವುದು ಅದ್ಭುತ ಸಾಧನೆ
  • ಪಂಜಾಬಿ ಹಾಡು "ಲೆಹೆಂಗಾ' 182 ಕೋಟಿ ವೀವ್ಸ್​ ಪಡೆದು ಎರಡನೇ ಸ್ಥಾನದಲ್ಲಿದೆ
Hanuman Chalisa - "ಶ್ರೀ ಹನುಮಾನ್​ ಚಾಲೀಸಾ'. ಬಹುತೇಕ ಭಾರತೀಯ ಹಿಂದುಗಳು ಪ್ರತಿದಿನ ಕೇಳುವ ಭಕ್ತಿಗೀತೆ. ಯೂಟ್ಯೂಬ್​ ಸೇರಿ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸಂಗೀತದ ಆ್ಯಪ್​ಗಳಲ್ಲಿ ಹನುಮಾನ್​ ಚಾಲೀಸಾದ ನೂರಾರು ವರ್ಷನ್​ಗಳಿವೆ. ಅವುಗಳಲ್ಲಿ ಅತಿಹೆಚ್ಚು ವೈರಲ್​ ಆಗಿರುವುದು ಟಿ ಸಿರೀಸ್​ ಮಾಲೀಕ ದಿವಂಗತ ಗುಲ್ಶನ್​ ಕುಮಾರ್​ ಅವರು ನಟಿಸಿದ್ದ ಹಾಡು. ಲಲಿತ್​ ಸೇನ್​ ಮತ್ತು ಚಂದರ್​ ಸಂಗೀತ ನಿರ್ದೇಶನದಲ್ಲಿ ಹರಿಹರನ್​ ಧ್ವನಿಯಾಗಿದ್ದ ಈ ಹಾಡನ್ನು ಶಂಭು ಗೋಪಾಲ್​ ನಿರ್ದೇಶಿಸಿದ್ದರು. 2011ರ ಮೇ 10ರಂದು ಯೂಟ್ಯೂಬ್​ನಲ್ಲಿ "ಶ್ರೀ ಹನುಮಾನ್​ ಚಾಲೀಸಾ'ಬಿಡುಗಡೆ ಮಾಡಲಾಗಿತ್ತು. ಈ 15 ವರ್ಷಗಳಲ್ಲಿ ಈ ಭಕ್ತೀಗಿತೆ ಬರೋಬ್ಬರಿ 501 ಕೋಟಿಗೂ ಅಧಿಕ ಬಾರಿ ವೀಕ್ಷಣೆಗೊಂಡಿದೆ. ಆ ಮೂಲಕ ಯೂಟ್ಯೂಬ್​ನಲ್ಲಿ 500 ಕೋಟಿ ವೀವ್ಸ್​ ದಾಟಿದ ಭಾರತದ ಮೊದಲ ಗೀತೆ ಎಂಬ ದಾಖಲೆ ಮಾಡಿದೆ. ಈ ಬಗ್ಗೆ ಗುಲ್ಶನ್​ ಕುಮಾರ್​ ಪುತ್ರ ಟಿ ಸಿರೀಸ್​ ಮಾಲೀಕ ಭೂಷಣ್​ ಕುಮಾರ್​, "ನನ್ನನ್ನೂ ಸೇರಿ ಹನುಮಾನ್​ ಚಾಲೀಸಾಗೆ ಕೋಟ್ಯಂತರ ಜನರ ಹೃದಯದಲ್ಲಿ ವಿಶೇಷ ಸ್ಥಾನವಿದೆ. ನನ್ನ ತಂದೆ ಭಕ್ತೀಗಿತೆಗಳನ್ನು ಮನೆ ಮನೆಗಳಿಗೆ ತಲುಪಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಈ ಸಾಧನೆಯು ಅವರ ದೂರದೃಷ್ಟಿಯ ಪ್ರತಿಬಿಂಬವಾಗಿದೆ. ಯೂಟ್ಯೂಬ್​ ಇತಿಹಾಸದಲ್ಲೇ ಅತಿಹೆಚ್ಚು ವೀಕ್ಷಣೆಗೊಂಡ ಅಗ್ರ 10 ಹಾಡುಗಳಲ್ಲಿ ಸ್ಥಾನ ಪಡೆದಿರುವುದು ಅದ್ಭುತ ಸಾಧನೆಯೇ ಸರಿ' ಎಂದು ಸಂತಸ ಹಂಚಿಕೊಂಡಿದ್ದಾರೆ. &ಏಜೆನ್ಸೀಸ್​

ದಾಖಲೆ ಬರೆದ ಹಾಡುಗಳು

ಯೂಟ್ಯೂಬ್​ನಲ್ಲಿ ಅತಿಹೆಚ್ಚು ವೈರಲ್​ ಆಗಿರುವ ಹಾಡುಗಳಲ್ಲಿ 1688 ಕೋಟಿ ವೀವ್ಸ್​ನೊಂದಿಗೆ "ಬೇಬಿ ಶಾರ್ಕ್​' ಮೊದಲ ಸ್ಥಾನದಲ್ಲಿದೆ. ನಂತರ "ಡೆಸ್ಪಸಿಟೊ' ಹಾಡು (885 ಕೋಟಿ ವೀವ್ಸ್​) , "ವ್ಹೀಲ್ಸ್​ ಆನ್​ ದ ಬಸ್​' (816 ಕೋಟಿ ವೀವ್ಸ್​), "ಬಾತ್​ ಸಾಂಗ್ಸ್​' (728 ಕೋಟಿ ವೀವ್ಸ್​) ಮತ್ತು "ಜಾನಿ ಜಾನಿ ಯೆಸ್​ ಪಾಪಾ' (712 ಕೋಟಿ ವೀವ್ಸ್​) ಕ್ರಮವಾಗಿ ಎರಡರಿಂದ ಐದನೇ ಸ್ಥಾನದಲ್ಲಿವೆ. ಇನ್ನು ಅತಿ ಹೆಚ್ಚು ವೀಕ್ಷಣೆಯಾದ ಭಾರತೀಯ ಹಾಡುಗಳಲ್ಲಿ 501 ಕೋಟಿ ವೀವ್ಸ್​ನೊಂದಿಗೆ "ಶ್ರೀ ಹನುಮಾನ್​ ಚಾಲೀಸಾ' ಮೊದಲ ಸ್ಥಾನದಲ್ಲಿದ್ದರೆ, ನಂತರದ ಸ್ಥಾನಗಳಲ್ಲಿರುವ ಹಾಡುಗಳು 200 ಕೋಟಿ ವೀವ್ಸ್​ ಕೂಡ ಮುಟ್ಟಿಲ್ಲ ಎಂಬುದು ಗಮನಾರ್ಹ. ಪಂಜಾಬಿ ಹಾಡು "ಲೆಹೆಂಗಾ' (182 ಕೋಟಿ ವೀವ್ಸ್​), ಹರಿಯಾಣವೀ ಹಾಡು "52 ಗಜ್​ ಕಾ ದಮನ್​' (173 ಕೋಟಿ ವೀವ್ಸ್​) ಮತ್ತು ತಮಿಳಿನ "ರೌಡಿ ಬೇಬಿ' (171 ಕೋಟಿ ವೀವ್ಸ್​) ನಂತರದ ಸ್ಥಾನದಲ್ಲಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net