

ಸಿನಿಮಾ ವಿಚಾರ ಮತ್ತು ವೈಯಕ್ತಿಕ ವಿಚಾರಗಳಲ್ಲಿ ದೀಪಿಕಾ ಪಡುಕೋಣೆ ಮತ್ತು ಪ್ರಿಯಾಂಕಾ ಚೋಪ್ರಾ ಮಧ್ಯೆ ಆಗಾಗ ಸ್ನೇಹಪೂರ್ವಕ ಪೈಪೋಟಿ ನಡೆಯುತ್ತಲೇ ಇರುತ್ತದೆ. ಪ್ರಿಯಾಂಕಾ ಹಾಲಿವುಡ್ಗೆ ಜಿಗಿದಿದ್ದೇ ತಡ, ದೀಪಿಕಾ ಸಹ ಹಾಲಿವುಡ್ನಲ್ಲಿ ಕಂಡುಬಂದರು. ಇದೀಗ ಇವರಿಬ್ಬರೂ ಒಂದೇ ವಿಚಾರಕ್ಕೆ ಕೈ ಜೋಡಿಸುವ ಸಾಧ್ಯತೆ ಇದೆ.
ಏನದು? ಅದೇ ‘ಸೇಫ್ ಹ್ಯಾಂಡ್ಸ್ ಚಾಲೆಂಜ್’. ಈ ಚಾಲೆಂಜ್ ನೀಡಿದ್ದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ).ಸದ್ಯ ಎಲ್ಲೆಡೆ ಕರೊನಾ ವೈರಸ್ನದ್ದೇ ಚರ್ಚೆ. ಅದರ ತಡೆಗಾಗಿ ಲಸಿಕೆ ಕಂಡುಹಿಡಿಯುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಇತ್ತ ಅದು ಬಾರದಂತೆ ಶುಚಿತ್ವ ಕಾಪಾಡಿಕೊಳ್ಳುವುದೂ ಅಷ್ಟೇ ಮುಖ್ಯ. ಹಾಗಾಗಿ ವಿಶ್ವ ಆರೋಗ್ಯ ಸಂಸ್ಥೆ ‘ಸೇಫ್ ಹ್ಯಾಂಡ್ಸ್ ಚಾಲೆಂಜ್’ ಮೊರೆ ಹೋಗಿದೆ. ಅದಕ್ಕಾಗಿ ವಿಶ್ವದ ಟಾಪ್ ಸೆಲೆಬ್ರಿಟಿಗಳನ್ನು ಆಯ್ದುಕೊಂಡು ಅವರಿಂದ ಜಾಗೃತಿ ಮೂಡಿಸುವ ಕೆಲಸಕ್ಕೆ ಕೈಹಾಕಿದ್ದು, ಭಾರತೀಯ ಸೆಲೆಬ್ರಿಟಿಗಳ ಪೈಕಿ ಪ್ರಿಯಾಂಕಾ ಚೋಪ್ರಾ ಮತ್ತು ದೀಪಿಕಾಗೆ ಚಾಲೆಂಜ್ ನೀಡಲಾಗಿದೆ.
ಡಬ್ಲ್ಯುಎಚ್ಒ ನಿರ್ದೇಶಕ ಟೆಡ್ರೋಸ್ ಅಧಾನೊಮ್ ಗೆಬ್ರಿಯಾಸಸ್ ಟ್ವಿಟರ್ನಲ್ಲಿ ದೀಪಿಕಾ ಮತ್ತು ಪ್ರಿಯಾಂಕಾ ಹೆಸರನ್ನು ನಮೂದಿಸಿ, ‘ನೀವು ಸೇಫ್ ಹ್ಯಾಂಡ್ ಚಾಲೆಂಜ್ ಸ್ವೀಕರಿಸಿ, ಕೈ ತೊಳೆಯುವ ವಿಡಿಯೋ ತುಣುಕು ಹಾಕಿ. ನಿಮ್ಮಿಂದ ಹಲವರು ಅದನ್ನು ಅನುಸರಿಸಿದರೆ, ನಾವು ಕರೊನಾ ವೈರಸ್ ತಡೆಗಟ್ಟಬಹುದು’ ಎಂದಿದ್ದಾರೆ.
ಮೂರು ದಿನದ ಹಿಂದಷ್ಟೇ ಸೋಷಿಯಲ್ ಮೀಡಿಯಾದಲ್ಲಿ ಪ್ರಿಯಾಂಕಾ ಪೋಸ್ಟ್ ಮಾಡಿದ ಒಂದು ವಿಡಿಯೋ ಸದ್ದು ಮಾಡಿತ್ತು. ಕೈ ಕುಲುಕುವ ಬದಲು ಕೈ ಜೋಡಿಸಿ ನಮಸ್ಕಾರ ಮಾಡುವುದರಿಂದ ದೈಹಿಕ ಸ್ಪರ್ಶದಿಂದಾದರೂ ದೂರವಿರಬಹುದು ಎಂಬ ಸಂದೇಶ ಅದರಲ್ಲಿತ್ತು.
ಕೈಮುಗಿಯುವುದು ಹಳೆಯ ಪದ್ಧತಿಯಾದರೂ, ಪ್ರಸ್ತುತ ಸಮಯದಲ್ಲಿ ಈ ರೀತಿಯ ಬದಲಾವಣೆ ತುಂಬ ಸೂಕ್ತ ಎನಿಸುತ್ತದೆ. ಎಲ್ಲರೂ ಸುರಕ್ಷಿತವಾಗಿರಿ. | ಪ್ರಿಯಾಂಕಾ ಚೋಪ್ರಾ ನಟಿ