ಹಾಫ್​ ಕನ್ನಡಿಗ ಫವಾಜ್‌ : ಕನ್ನಡದಲ್ಲಿ ನೆಲೆಯೂರಲು ಸಿದ್ಧನಾದ ಮಲಯಾಳಂ ಕಲಾವಿದ

asrf
Published on

ಬೆಂಗಳೂರು: ಕನ್ನಡದ ಕಲಾವಿದರು ಬೇರೆ ಭಾಷೆಗಳಲ್ಲಿ ನಟಿಸುವುದು, ಪರಭಾಷಾ ಕಲಾವಿದರು ಕನ್ನಡದಲ್ಲಿ ನಟಿಸುವುದು ಸಾಮಾನ್ಯ. ಆದರೆ, ಭಾಷೆಯೇ ಗೊತ್ತಿಲ್ಲದಿದ್ದರೂ, ಕನ್ನಡಿಗನೊಬ್ಬ ಪರಭಾಷಾ ಚಿತ್ರದ ಮೂಲಕ ಡೆಬ್ಯೂ ಮಾಡುವುದು ಕಷ್ಟಸಾಧ್ಯ. ಹಾಗೇ ಪರಭಾಷಾ ಕಲಾವಿದರೂ ಸಹ ಕನ್ನಡ ಚಿತ್ರರಂಗದ ಮೂಲಕ ಕರಿಯರ್ ಪ್ರಾರಂಭಿಸುವುದು ಕೂಡ. ಆದರೆ, ಕೇರಳ ಮೂಲದ ಕಲಾವಿದನೊಬ್ಬ ಕನ್ನಡದ ಮೂಲಕವೇ ಬಣ್ಣದ ಲೋಕಕ್ಕೆ ಡೆಬ್ಯೂ ಮಾಡಿ, ಮೊದಲ ಸಿನಿಮಾದಲ್ಲಿ ಭರವಸೆ ಮೂಡಿಸಿದ್ದಾರೆ. ಇದೀಗ, ಇಲ್ಲಿಯೇ ನೆಲೆಯೂರುವ ಅತ್ಮವಿಶ್ವಾಸದಲ್ಲಿದ್ದಾರೆ. ಹೆಸರು ಫವಾಜ್‌ ಅಶ್ರಫ್​. ಕಳೆದ ಜ.31ರಂದು ಬಿಡುಗಡೆಯಾಗಿದ್ದ ಪಾರು ಪಾರ್ವತಿ’ ಚಿತ್ರದಲ್ಲಿ ಹಾಫ್ ಕನ್ನಡಿಗನಾಗಿ ಕಾಣಿಸಿಕೊಂಡಿದ್ದರು. ಅವರ ಮ್ಯಾನರಿಸಂ, ತೊದಲು ಕನ್ನಡ, ನಟನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಬಗ್ಗೆ ಅಶ್ರಫ್​, ‘ಸೌದಿಯಿಂದ ಬಂದ ಬಳಿಕ ನಾನು ರೀಲ್ಸ್, ಟಿಕ್‌ಟಾಕ್ ಮಾಡತೊಡಗಿದೆ. ಅವುಗಳನ್ನು ನೋಡಿ ‘ಪಾರು ಪಾರ್ವತಿ’ ತಂಡ ಸಿನಿಮಾದಲ್ಲಿ ಅವಕಾಶ ನೀಡಿತು. ಮೊದಲು ನನಗೆ ಕನ್ನಡ ಬರುತ್ತಿರಲಿಲ್ಲ. ಇಡೀ ತಂಡ ಈಗ ನನಗೆ ಕನ್ನಡ ಕಲಿಸಿದೆ. ಚಿತ್ರದಲ್ಲಿ ನಾನು ಹ್ಾ ಕನ್ನಡಿಗ. ಈಗ ನಾನು ಪೂರ್ಣ ಕನ್ನಡಿಗನಾಗುತ್ತಿದ್ದೇನೆ. ‘ಪಾರು ಪಾರ್ವತಿ’ ಚಿತ್ರದ ನನ್ನ ಪಾತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಬಂದಿವೆ. ಹೀಗಾಗಿ ಕನ್ನಡ ಪ್ರೇಕ್ಷಕರಿಗೆ, ತಂಡಕ್ಕೆ ಅಭಾರಿ’ ಎಂದು ಮಾಹಿತಿ ನೀಡುತ್ತಾರೆ.

ನೆಗಟಿವ್ ರೋಲ್: ‘ಪಾರು ಪಾರ್ವತಿ’ ಬಳಿಕ ಅಶ್ರಫ್​ ಕನ್ನಡದ ಮತ್ತೊಂದು ಸಿನಿಮಾಕ್ಕೆ ಅವಕಾಶ ಪಡೆದಿದ್ದಾರಂತೆ. ‘ಇದೊಂದು ವಿಭಿನ್ನವಾದ ನೆಗಟಿವ್ ರೋಲ್. ಪಾತ್ರಕ್ಕಾಗಿ ಮತ್ತಷ್ಟು ಕನ್ನಡ ಕಲಿಯುವುದರ ಜತೆಗೆ ಸಾಕಷ್ಟು ತಯಾರಿ ನಡೆಸಿದ್ದೇನೆ. ಸಣ್ಣ ಅಥವಾ ದೊಡ್ಡ ಬಜೆಟ್ ಅನ್ನೋದಕ್ಕಿಂತ ಒಳ್ಳೆಯ ಕನ್ನಡ ಸಿನಿಮಾಗಳಲ್ಲಿ ನಟಿಸುವಾಸೆ. ಕನ್ನಡದ ‘ಕಾಂತಾರ’, ‘ಕೆಜಿಎಫ್​’ ಸಿನಿಮಾಗಳು ನನಗಿಷ್ಟ. ರಿಷಬ್ ನನ್ನ ಫೇವರಿಟ್’ ಎಂದು ಹೇಳಿಕೊಳ್ಳುತ್ತಾರೆ.

‘ಪಾರು ಪಾರ್ವತಿ’ ಬಿಡುಗಡೆಯಾದಾಗಿನಿಂದ ಉತ್ತಮ ರೆಸ್ಪಾನ್ಸ್ ವ್ಯಕ್ತವಾಗುತ್ತಿದೆ. ಕಡಿಮೆ ಥಿಯೇಟರ್ ಸಿಕ್ಕರೂ, ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಕುಟುಂಬ ಪ್ರಧಾನ ಸಿನಿಮಾಗಳನ್ನು ಕನ್ನಡಿಗರು ಒಪ್ಪಿಕೊಳ್ಳುತ್ತಾರೆ ಎಂಬುದಕ್ಕೆ ಇದೇ ಸಾಕ್ಷಿ. ಆದರೆ, ಕನ್ನಡದ ಒಳ್ಳೆಯ ಸಿನಿಮಾಗಳಿಗೆ ಥಿಯೇಟರ್ ಸಿಗದಿರುವುದು ದುರಂತ. ಇದಕ್ಕೆ ಸಿನಿಮಾ ಇಂಡಸ್ಟ್ರಿಯವರು ಒಗ್ಗಟ್ಟಾಗಿ ಹೋರಾಡಬೇಕಿದೆ.

| ರೋಹಿತ್ ಕೀರ್ತಿ, ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net