

ವಿಜಯವಾಣಿ ಸುದ್ದಿಜಾಲ ಬೆಂಗಳೂರು:
ಫಸ್ಟ್ ರ್ಯಾಂಕ್ ರಾಜು, ರಾಜು ಕನ್ನಡ ಮೀಡಿಯಂ ಖ್ಯಾತಿಯ ಗುರುನಂದನ್ ನಾಯಕನಾಗಿರುವ, ದೀಪಕ್ ಮಧುವನಹಳ್ಳಿ ನಿರ್ದೇಶನದ ಹಾಸ್ಯಪ್ರಧಾನ ಸಿನಿಮಾ ರಾಜು ಜೇಮ್ಸ್ ಬಾಂಡ್. ಚಿತ್ರದಲ್ಲಿ ಗುರುಗೆ ಮೃದುಲಾ ನಾಯಕಿಯಾಗಿದ್ದು, ಸಾಧು ಕೋಕಿಲ, ಅಚ್ಯುತ್ ಕುಮಾರ್, ಚಿಕ್ಕಣ್ಣ, ರವಿಶಂಕರ್, ಜೈಜಗದೀಶ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಹಾಸ್ಯ ಮತ್ತು ಹೈಸ್ಟ್ ಡ್ರಾಮಾ ಜಾನರ್ನ ಈ ಚಿತ್ರ ಸದ್ಯ ರಿಲೀಸ್ಗೆ ರೆಡಿಯಾಗಿದ್ದು, ಟೀಸರ್ ಮತ್ತು ಹಾಡುಗಳನ್ನು ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಳ್ಳುತ್ತಿದೆ.
ಚಿತ್ರದ ಬಗ್ಗೆ ನಿರ್ದೇಶಕ ದೀಪಕ್ ಮಧುವನಹಳ್ಳಿ, “ಯಾವುದೇ ಸಿನಿಮಾದ ಮೊಟ್ಟ ಮೊದಲ ಆದ್ಯತೆ ಪ್ರೇಕ್ಷಕನ ಮನರಂಜನೆ ಆಗಿರಬೇಕೆಂಬುದು ನನ್ನ ಅಭಿಪ್ರಾಯ. ಹಾಗಾಗಿ ಅದನ್ನೇ ಪರಿಗಣಸಿ "ರಾಜು ಜೇಮ್ಸ್ ಬಾಂಡ್" ಸಿನಿಮಾ ಮಾಡಿದ್ದೇವೆ. 136 ನಿಮಿಷಗಳ ಈ ಚಿತ್ರದ 40 ನಿಮಿಷಗಳ ಕಾಲ ಪ್ರೇಕ್ಷಕರು ನಗೆಗಡಲಲ್ಲಿ ತೇಲಲಿದ್ದಾರೆ‘ ಎಂದು ಭರವಸೆ ವ್ಯಕ್ತಪಡಿಸುತ್ತಾರೆ.
ಈಗಾಗಲೇ ಸೆನ್ಸಾರ್ ಮುಗಿದಿದ್ದು ಸಿನಿಮಾಗೆ ಯು/ಎ ಸರ್ಟಿಫಿಕೇಷನ್ ದೊರಕಿದೆ. "ರಾಜು ಜೇಮ್ಸ್ ಬಾಂಡ್" ಬಿಡುಗಡೆಗೆ ಸಿದ್ಧವಾಗಿದ್ದು ಸಿನಿಮಾ ತಂಡ ಆದಷ್ಟು ಬೇಗ ಸಿನಿಮಾ ಬಿಡುಗಡೆಯ ದಿನಾಂಕ ತಿಳಿಸುವ ಟೀಸರ್ ಬಿಡುಗಡೆ ಮಾಡುವ ಯೋಚನೆಯಲ್ಲಿದೆ.