

ಬೆಂಗಳೂರು: ‘ರೇನ್ಬೋ’ ಎಂಬ ಚಿತ್ರ ಕಳೆದ ವರ್ಷ ಸೆಟ್ಟೇರಿದ್ದು ನೆನಪಿರಬೇಕಲ್ಲ? ಗುರು ದೇಶಪಾಂಡೆ ನಿರ್ಮಾಣದ ಈ ಚಿತ್ರದಲ್ಲಿ ಅಜೇಯ್ ರಾವ್ ಮತ್ತು ಮಾನ್ವಿತಾ ಕಾಮತ್, ನಾಯಕ-ನಾಯಕಿಯಾಗಿ ನಟಿಸಬೇಕಿತ್ತು.
ಈಗ ಆ ಚಿತ್ರ ಸ್ವಲ್ಪ ಮುಂದಕ್ಕೆ ಹೋಗಿದೆ. ಆ ಜಾಗದಲ್ಲಿ ಅಜೇಯ್ ಅಭಿನಯದಲ್ಲಿ ಇನ್ನೊಂದು ಹೊಸ ಚಿತ್ರವೊಂದನ್ನು ಗುರು ದೇಶಪಾಂಡೆ ಶುರು ಮಾಡಲಿದ್ದಾರೆ. ಸದ್ಯಕ್ಕೆ ಹೆಸರಿಡದ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆಯುವುದರ ಜತೆಗೆ ನಿರ್ದೇಶನ ಮತ್ತು ನಿರ್ವಣದ ಹೊಣೆಯನ್ನೂ ಹೊತ್ತಿದ್ದಾರೆ ಗುರು ದೇಶಪಾಂಡೆ.
ಈ ಚಿತ್ರದ ವಿಶೇಷತೆ ಏನೆಂದರೆ, ‘ಇದು ಎಲ್ಲ ನಟರ ಬಯೋಪಿಕ್ ಆಗಲಿದೆ’ ಎಂಬ ಉತ್ತರ ಅವರಿಂದ ಬರುತ್ತದೆ. ‘ಒಬ್ಬ ಸಾಮಾನ್ಯ ಮನುಷ್ಯ ದೊಡ್ಡ ಸೆಲೆಬ್ರಿಟಿ ಆಗುವ ಕಥೆ ಇದು. ಮಧ್ಯಮವರ್ಗದ ಹುಡುಗನೊಬ್ಬ 20 ವರ್ಷಗಳ ಅಂತರದಲ್ಲಿ ಏನೆಲ್ಲಾ ಸವಾಲುಗಳನ್ನು ಎದುರಿಸಿ ದೊಡ್ಡ ಸೆಲೆಬ್ರಿಟಿಯಾಗುತ್ತಾನೆ, ಆ ಪಯಣದಲ್ಲಿ ಏನೆಲ್ಲ ಆಗುತ್ತದೆ ಎಂಬುದೇ ಚಿತ್ರದ ಕಥೆ. ಚಿತ್ರದಲ್ಲಿ ಸಾಕಷ್ಟು ನೈಜ ಘಟನೆಗಳಿರುತ್ತವೆ. ಅಷ್ಟೇ ಅಲ್ಲ, ಚಿತ್ರ ಕಾಂಟ್ರೋವರ್ಷಿಯಲ್ ಆಗಿಯೂ ಇರುತ್ತದೆ. ಈ ಚಿತ್ರದಲ್ಲಿ ಬಹಳಷ್ಟು ಹೀರೋಗಳು ನಡೆದು ಬಂದ ಹಾದಿಯನ್ನು, ಅವರು ಎದುರಿಸಿದ ಸವಾಲುಗಳನ್ನು ನೋಡಬಹುದು’ ಎನ್ನುತ್ತಾರೆ ಗುರು ದೇಶಪಾಂಡೆ.
ಇದನ್ನು ಇನ್ನಷ್ಟು ವಿಸ್ತರಿಸುವ ಅವರು, ‘2000 ಇಸವಿಯಿಂದ 2020ರವರೆಗೂ ಯಾರೆಲ್ಲ ಮಧ್ಯಮ ವರ್ಗದ ಹುಡುಗರು ಹೀರೋಗಳಾಗಿದ್ದಾರೋ, ಅವರನ್ನೆಲ್ಲಾ ನೆನಪಿಸುವ ಸಿನಿಮಾ ಇದು. ಚಿತ್ರ ನೋಡುತ್ತ ನೋಡುತ್ತ ಪ್ರೇಕ್ಷಕರು ಕನೆಕ್ಟ್ ಆಗುತ್ತ ಹೋಗುತ್ತಾರೆ. ಬಹಳಷ್ಟು ನಟ-ನಟಿಯರು ಪ್ರೇಕ್ಷಕರ ಮನಸ್ಸಿನಲ್ಲಿ ಹಾದು ಹೋಗುತ್ತಾರೆ. ನೈಜ ಘಟನೆಗಳನ್ನಾಧರಿಸಿರುವುದರಿಂದ ವಿವಾದಗಳಾದರೂ ಆಗಬಹುದು’ ಎಂಬುದು ಅವರ ಅಭಿಪ್ರಾಯ. ಸದ್ಯಕ್ಕೆ ಅಜೇಯ್ ರಾವ್ ನಾಯಕನಾಗಿ ಅಭಿನಯಿಸುವುದು ಪಕ್ಕಾ ಆಗಿದೆ.
ಇನ್ನುಳಿದ ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ. ಈ ಚಿತ್ರದ ಕಥೆ 20 ವರ್ಷಗಳ ಅಂತರದಲ್ಲಿ ನಡೆಯುವುದರಿಂದ ಅಜೇಯ್, ಮೂರು ವಿಭಿನ್ನ ಗೆಟಪ್ಗಳಲ್ಲಿ ಕಾಣಿಸಿಕೊಳ್ಳುತ್ತಾರಂತೆ. ಅದಕ್ಕಾಗಿ ಸೂಕ್ತ ತಯಾರಿ ಮಾಡಿಕೊಂಡ ನಂತರ ಚಿತ್ರೀಕರಣ ಶುರುವಾಗಲಿದೆ. ಅಂದಹಾಗೆ, ಈ ಚಿತ್ರದ ಮುಹೂರ್ತ ಸಮಾರಂಭ ಯುಗಾದಿ ಹಬ್ಬದಂದು ಫಿಕ್ಸ್ ಆಗಿದ್ದು, ಏಪ್ರಿಲ್ ಎರಡನೆಯ ವಾರದಿಂದ ಚಿತ್ರೀಕರಣ ಪ್ರಾರಂಭವಾಗಲಿದೆ.